ಮೊಳಕಾಲ್ಮೂರು: ಪಟ್ಟಣದ ಪಿ.ಟಿ.ಹಟ್ಟಿ ಬಳಿಯಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಾಲೇಜಿನ ಹಾಸ್ಟೆಲ್ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಾಲೇಜು ಹಾಸ್ಟೆಲ್‌ಗೆ ಸ್ವಂತ ಕಟ್ಟಡವಿಲ್ಲ. ಹಾಗಾಗಿ ಯಾದವ ಹಾಸ್ಟೆಲ್‌ನ ಚಿಕ್ಕ ಕಟ್ಟಡದಲ್ಲಿ ಹಾಸ್ಟೆಲ್ ನಡೆಯುತ್ತಿದ್ದು, ಕಾಲೇಜು ವಿದ್ಯಾರ್ಥಿಗಳು ಅಗತ್ಯ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದಾರೆ.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಾಲೇಜು ಹಾಸ್ಟೆಲ್‌ನಲ್ಲಿ 80 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿದ್ದು, ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮತ್ತು ವಸತಿಗೆ ಕೇವಲ 4-5 ಕೊಠಡಿಗಳ ಸೌಲಭ್ಯ ಕಲ್ಪಿಸಲಾಗಿದೆ. ಈ ಕೊಠಡಿಗಳಲ್ಲಿ ಕೇವಲ ಒಂದೇ ಒಂದು ವಿದ್ಯುತ್ ಬಲ್ಬ್ಹಾ ಕಿಸಲಾಗಿದ್ದು, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ವಿದ್ಯುತ್ ದೀಪಗಳ ಕೊರತೆ ಕಾಡುತ್ತಿದೆ. ವಿದ್ಯಾರ್ಥಿಗಳ ವಸತಿಗೆ ಯಾವುದೇ ಹಾಸಿಗೆ ಮತ್ತು ಹೊದಿಕೆಗಳ ಸೌಲಭ್ಯವಿಲ್ಲದ ಕಾರಣ ಮನೆಗಳಿಂದಲೇ ಹೊದಿಕೆಯನ್ನು ಕೊಂಡೊಯ್ಯುವಂತಾಗಿದೆ. ಈ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಯ ಅಡುಗೆ ಕೋಣೆ ಕಪ್ಪುಬಣ್ಣಕ್ಕೆ ತಿರುಗಿರುವುದಲ್ಲದೆ ಈ ಕೋಣೆಯ ಮೇಲ್ಛಾವಣಿ ಮಳೆಗಾಲದಲ್ಲಿ ಸೋರಿ ಸಿಮೆಂಟ್ ಚೆಕ್ಕೆಗಳು ಬೀಳುತ್ತಿರುವುದರಿಂದ ಅಡುಗೆಯವರು ಹಾಗೂ ವಿದ್ಯಾರ್ಥಿಗಳು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ವಿದ್ಯಾರ್ಥಿಗಳ ಊಟದ ಡೈನಿಂಗ್ ಹಾಲ್ ಸಹ ಸರಿ ಇಲ್ಲದಿರುವುದರಿಂದ ನೆಲದ ಮೇಲೆಯೇ ಕುಳಿತು ಊಟ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ. ಮೆಟ್ರಿಕ್‌ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ಕುಳಿತುಕೊಳ್ಳಲು ಉತ್ತಮ ಆಸನಗಳ ಸೌಲಭ್ಯ ನೀಡಿ, ಕಾಲೇಜು ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯದಲ್ಲಿ ನೆಲದ ಮೇಲೆಯೇ ಕುಳಿತು ಊಟ ಮಾಡುವ ಸ್ಥಿತಿ ಇದೆ.
ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಸ್ನಾನದ ಕೊಠಡಿ ಮತ್ತು ಶೌಚಾಲಯಗಳ ಸೌಲಭ್ಯವಿಲ್ಲದೆ ಬಯಲಲ್ಲೇ ಸ್ನಾನ ಮಾಡುವಂತಾಗಿದೆ. ಸುಮಾರು 80ಕ್ಕೂ ಹೆಚ್ಚಿರುವ ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಸಮರ್ಪಕವಾಗಿ ಶೌಚಾಲಯಗಳ ಸೌಲಭ್ಯವಿಲ್ಲದ ಕಾರಣ ಹತ್ತಿರದ ಮುಳ್ಳಿನ ಗಿಡ ಗಂಟಿಗಳ ಬಯಲು ತಾಣವೇ ಶೌಚಾಲಯವಾಗಿದೆ. ಇನ್ನೂ ಕೆಲವರು ರೈಲ್ವೆ ಗೇಟ್ ದಾಟಿ ಜಮೀನುಗಳ ಬಯಲಲ್ಲೇ ಶೌಚಕ್ಕೆ ಹೋಗುವ ದುಸ್ಥಿತಿ ಇದೆ. ನೀರು ಶುದ್ಧೀಕರಣ ಘಟಕ ಕೆಟ್ಟು 6-7 ತಿಂಗಳಾದರೂ ರಿಪೇರಿ ಮಾಡಿಸದೆ ನಿರ್ಲಕ್ಷ್ಯ ವಹಿಸಿರುವುದರಿಂದ ಶುದ್ಧ ಕುಡಿಯುವ ನೀರಿನ ಸೌಲಭ್ಯದಿಂದ ವಂಚಿತವಾಗುವಂತಾಗಿದೆ.
ವಿದ್ಯಾರ್ಥಿಗಳ ಅಭ್ಯಾಸಕ್ಕೆ ಗ್ರಂಥಾಲಯ, ಕ್ರೀಡಾ ಸಾಮಗ್ರಿ ಹಾಗೂ ಇನ್ನಿತರ ಸೌಲಭ್ಯಗಳಿಂದ ವಂಚಿತವಾಗಿದೆ. ಹೆಸರಿಗೆ ಮಾತ್ರ ಇದ್ದ ಟಿವಿ ಕೂಡ ದುರಸ್ತಿ ನೆಪದಲ್ಲಿ ಮೂಲೆಗೆ ಸೇರಿದ್ದು ಯಾವುದೇ ಅಗತ್ಯ ಮೂಲಭೂತ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇಲಾಖೆಯ ಹೊಸ ಮೆನು ಪ್ರಕಾರ ಊಟ ನೀಡದೆ ಹಳೆ ಮೆನುಪ್ರಕಾರವೇ ಶುಚಿ ರುಚಿಯಿಲ್ಲದ ಊಟ, ತಿಂಡಿಯನ್ನು ನೀಡಲಾಗುತ್ತಿದೆ. ಅಡುಗೆ ಮಾಡಲು ತರಕಾರಿ, ಎಣ್ಣೆ, ಬೇಳೆ,ಕಾಳುಗಳು ಸೇರಿದಂತೆ ಅಡುಗೆ ಸಾಮಗ್ರಿಗಳನ್ನು ಸಮರ್ಪಕವಾಗಿ ನೀಡದ ಕಾರಣ ರುಚಿಯಿಲ್ಲದ ಊಟ ಮತ್ತು ತಿಂಡಿಯನ್ನು ನೀಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಗುಣಮಟ್ಟ ಮತ್ತು ಶುಚಿ ರುಚಿಯಿಲ್ಲದ ಊಟ ಮತ್ತು ತಿಂಡಿಯ ಸೌಲಭ್ಯವಿಲ್ಲದ್ದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಕುಂಠಿತವಾಗುವಂತಾಗಿದೆ. ಇಷ್ಟೆಲ್ಲಾ ಮೂಲಭೂತ ಸೌಲಭ್ಯಗಳ ಸಮಸ್ಯೆಗಳಿದ್ದರೂ ಯಾವೊಬ್ಬ ತಾಲೂಕು ಮತ್ತು ಜಿಲ್ಲಾ ಮಟ್ಟದ ಇಲಾಖಾ ಧಿಕಾರಿಗಳು ಬಾರದೆ ನಿರ್ಲಕ್ಷ್ಯ ವಹಿಸಿ ಸಭೆಗಳಲ್ಲಿ ಮಾತ್ರ ಸಮರ್ಪಕವಾಗಿ ನಡೆಸಲಾಗುತ್ತಿದೆ ಎಂದು ಪ್ರಗತಿ ವರದಿ ಮಂಡಿಸಲಾಗುತ್ತಿದೆ. ಪರಿಶಿಷ್ಟ ಕಲ್ಯಾಣ ಇಲಾಖಾ ಸಚಿವರ ಕ್ಷೇತ್ರದಲ್ಲಿಯೇ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಾಲೇಜು ಹಾಸ್ಟೆಲ್ ಅಗತ್ಯ ಮೂಲಭೂತ ಸೌಲಭ್ಯಗಳಿಲ್ಲದೆ ವಂಚಿತವಾಗಿರುವುದು ಶೋಚನೀಯ ಸಂಗತಿಯಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖಾಧಿಕಾರಿಗಳು ಹಾಗೂ ಸಚಿವ ಬಿ. ಶ್ರೀರಾಮುಲು ಗಮನಹರಿಸಿ ಹಾಸ್ಟೆಲ್‌ಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಬೇಕಿದೆ.
ಸರ್ಕಾರಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಶಾಶ್ವತ ಕಟ್ಟಡ, ಶುದ್ಧ ಕುಡಿಯುವ ನೀರು, ಶೌಚಾಲಯ, ಹೊಸ ಮೆನು ಪ್ರಕಾರ ಗುಣಮಟ್ಟದ ಊಟ-ತಿಂಡಿ ಹಾಗೂ ಅಗತ್ಯ ಮೂಲ ಸೌಲಭ್ಯಗಳಿಲ್ಲದಿರುವುದರಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.
ಕೆ.ಎಂ. ಮಲ್ಲಿಕಾರ್ಜುನ,
ವಿದ್ಯಾರ್ಥಿ
ಬಾಡಿಗೆ ಕಟ್ಟಡದಲ್ಲಿರುವ ಎಸ್.ಟಿ. ಕಾಲೇಜು ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಬಾಡಿಗೆ ನೀಡಿದ ಕಟ್ಟಡದ ಮಾಲೀಕರ ಗಮನಕ್ಕೆ ತಂದು ಶೌಚಾಲಯ, ವಿದ್ಯುತ್ ದೀಪ ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು.
ಮಂಜುಳಮ್ಮ, ಜಿಲ್ಲಾ ಪರಿಶಿಷ್ಟ ವರ್ಗಗಳ
ಕಲ್ಯಾಣಾಧಿಕಾರಿಗಳು, ಚಿತ್ರದುರ್ಗ
ಎಸ್. ರಾಜಶೇಖರ