ಮೊಳಕಾಲ್ಮೂರು: ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತೆಗಾಗಿ ರಾಜ್ಯದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಪರೀಕ್ಷೆಗಳನ್ನು ಮುಂದೂಡಿದ್ದರೂ ಭಾನುವಾರ 726 ವಿದ್ಯಾರ್ಥಿಗಳಿಗೆ ಆದರ್ಶ ವಿದ್ಯಾಲಯದ ಪ್ರವೇಶ ಪರೀಕ್ಷೆ ನಡೆಸಲಾಯಿತು.
ಆದರ್ಶ ವಿದ್ಯಾಲಯದ ಪ್ರವೇಶ ಪರೀಕ್ಷೆಗಾಗಿ ತಾಲೂಕಿನಲ್ಲಿ 758 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದು, 32 ವಿದ್ಯಾರ್ಥಿಗಳು ಗೈರಾಗಿ 726 ವಿದ್ಯಾರ್ಥಿಗಳು ಹಾಜರಿದ್ದು ಪರೀಕ್ಷೆ ಬರೆದರು. ಪಟ್ಟಣದಲ್ಲಿ 3 ಪ್ರವೇಶ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಸರ್. ಎಂ.ವಿ. ಶಾಲೆ, ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಸರ್ಕಾರಿ ಪದವಿಪೂರ್ವ (ಪ್ರೌಢಶಾಲೆ), ಕಾಲೇಜಿನ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಯಿತು.
ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1 ಗಂಟೆವರೆಗೆ ಪರೀಕ್ಷೆ ನಡೆಸಲಾಯಿತು. ಸರ್. ಎಂ.ವಿ ಶಾಲೆಯ ಒಂದನೇ ಪರೀಕ್ಷಾ ಕೇಂದ್ರದಲ್ಲಿ 205 ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ನೋಂದಾಯಿಸಿದ್ದು 14 ವಿದ್ಯಾರ್ಥಿಗಳು ಗೈರಾಗಿದ್ದರಿಂದ 191 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಎರಡನೇ ಪರೀಕ್ಷಾ ಕೇಂದ್ರವಾದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲೆ ವಿಭಾಗ) 264 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು 9 ವಿದ್ಯಾರ್ಥಿಗಳು ಗೈರಾಗಿದ್ದರಿಂದ 255 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದರು.
ಮೂರನೇ ಪರೀಕ್ಷಾ ಕೇಂದ್ರವಾದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 289 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು 9 ವಿದ್ಯಾರ್ಥಿಗಳು ಗೈರಾಗಿದ್ದರಿಂದ 280 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪ್ರವೇಶ ಪರೀಕ್ಷೆಗೆ 32 ಶಾಲಾ ಕೊಠಡಿಗಳಲ್ಲಿ ಪರೀಕ್ಷೆ ನಡೆಸಲಾಯಿತು. ಈ ಪರೀಕ್ಷೆಗೆ 32 ಪರೀಕ್ಷಾ ಮೇಲ್ವಿಚಾರಕರನ್ನು ಮತ್ತು ಪರೀಕ್ಷಾ ಮುಖ್ಯ ಅಧಿಧೀಕ್ಷಕರನ್ನು ನಿಯೋಜಿಸಲಾಗಿತ್ತು. ಪರೀಕ್ಷಾ ಕೇಂದ್ರಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಸೋಮಶೇಖರ್, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಎಂ.ಹನುಮಂತಪ್ಪ, ಡಯಟ್ ನೋಡಲ್ ಅಧಿಕಾರಿ ಪ್ರಕಾಶ್, ಡಯಟ್‌ನ ವಿಷಯ ಪರಿವೀಕ್ಷಕ ಚಂದ್ರಣ್ಣ , ಇಸಿಒಗಳಾದ ಓಂಕಾರಪ್ಪ, ಷಣ್ಮುಖಪ್ಪ, ಆದರ್ಶ ವಿದ್ಯಾಲಯದ ಕಚೇರಿ ಸಹಾಯಕರು ಭೇಟಿ ನೀಡಿದ್ದರು. ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.