Advertisement

ಜನಸಾಮಾನ್ಯರಲ್ಲಿ ಕೊರೊನಾ ಜಾಗೃತಿ ಮೂಡಿಸಿ

04:30 PM Apr 07, 2020 | Naveen |

ಮೊಳಕಾಲ್ಮೂರು: ತಾಲೂಕಿನ ಸಾರ್ವಜನಿಕ ಬಸ್‌ ನಿಲ್ದಾಣ, ಆಸ್ಪತ್ರೆಗಳು, ಅಂಗನವಾಡಿ ಕೇಂದ್ರಗಳು
ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಕೊರೊನಾ ವೈರಸ್‌ನ ಭಿತ್ತಿ ಪತ್ರ ಹಚ್ಚುವ ಜೊತೆಗೆ ಕರ ಪತ್ರಗಳನ್ನು ಮನೆ ಮನೆಗೆ ಹಂಚುವ ಮೂಲಕ ಜನಸಾಮಾನ್ಯರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಿ. ಚಿದಾನಂದಪ್ಪ ತಿಳಿಸಿದರು.

Advertisement

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಕೊರೊನಾ ವೈರಸ್‌ ಸೋಂಕಿನ ಬಿತ್ತಿ ಪತ್ರ ಮತ್ತು ಕರಪತ್ರ ತಾಲೂಕಿನ ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರಿಗೆ ವಿತರಿಸಿ ಅವರು ಮಾತನಾಡಿದರು. ತಾಲೂಕಿನ ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಹೋಗಿ ಕೊರೊನಾ ವೈರಸ್‌ ನ ಕರಪತ್ರಗಳನ್ನು ಹಂಚಿ, ಕೊರೊನಾ ವೈರಸ್‌ ಹರಡದಂತೆ ಜಾಗೃತಿ ಮೂಡಿಸುವುದು ಆದ್ಯ ಕರ್ತವ್ಯವಾಗಿದೆ. ಜಾಗೃತಿ ಮೂಡಿಸುವಾಗ ಸಾಮಾಜಿಕ ಅಂತರ ಕಾಪಾಡುವಂತೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಗ್ರಾ.ಪಂಗಳಲ್ಲಿ 14ನೇ ಹಣಕಾಸಿನ ಅನುದಾನ ಬಳಸಿ 60 ವರ್ಷದವರು ಮತ್ತು ದೀರ್ಘ‌ ಕಾಯಿಲೆಯವರಿಗೆ ಉಚಿತ ಮಾಸ್ಕ್ ಸೌಲಭ್ಯ ಕಲ್ಪಿಸಬಹುದಾಗಿದೆ. ತಾಲೂಕಿನಲ್ಲಿ ಸರ್ವೇ ಮಾಡಿಸಿ 1,469ರ ಜನರ ಮೇಲೆ ನಿಗಾ ವಹಿಸಲಾಗಿದೆ. ತಾಲೂಕಿಗೆ ವಿದೇಶದಿಂದ ಬಂದ 5 ಜನರ ಕ್ವಾರೆಂಟೈನ್‌ ಅವಧಿ ಮುಗಿದಿದೆ. ಹೊರಜಿಲ್ಲೆಗಳಿಂದ ಹಾಗೂ ಹೊರರಾಜ್ಯಗಳಿಂದ 1,469 ಜನರು ಬಂದಿದ್ದು, ಅವರ ಮೇಲೆ ನಿಗಾವಹಿಸಲಾಗುವುದು ಎಂದು ತಿಳಿಸಿದರು. ಪ್ರಭಾರೆ ತಾಲೂಕು ಆರೋಗ್ಯಾಧಿಕಾರಿ ಡಾ| ಪದ್ಮಾವತಿ, ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ತಿಪ್ಪೇಸ್ವಾಮಿ, ಶ್ರೀನಿವಾಸ್‌, ಆಶಾ ಮೇಲ್ವಿಚಾರಕಿ ಉಷಾ, ಎಲ್‌.ಎಚ್‌.ಎಂ. ಸವಿತಾ, ಆರ್‌ಬಿಎಸ್‌ಕೆ ವೈದ್ಯಾಧಿಕಾರಿ ಡಾ| ಗೋವಿಂದರಾಜು, ಡಾ| ರಾಘವೇಂದ್ರ ಬಾಬು, ಆರೋಗ್ಯ ಸಹಾಯಕರು ಮತ್ತು ಆಶಾ ಸುಗಮಕಾರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next