ಚಿತ್ರದುರ್ಗ: ರೇಷ್ಮೆ ನಾಡು ಮೊಳಕಾಲ್ಮೂರು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ವಿಧಾನಸಭಾ ಕ್ಷೇತ್ರ. ಆಂಧ್ರಪ್ರದೇಶ ಹಾಗೂ ಬಳ್ಳಾರಿಯ ಗಡಿಗೆ ಹೊಂದಿಕೊಂಡಿರುವ ಈ ಕ್ಷೇತ್ರವನ್ನು ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಒಮ್ಮೆ ಪ್ರತಿನಿ ಧಿಸಿದ್ದರು. ವರ್ಷದ ಬಹುಕಾಲ ಬಿಸಿಲೇ ಇರುವ ಈ ಕ್ಷೇತ್ರದಲ್ಲಿ ಬರ ಮಾಮೂಲು. ಈ ಬಾರಿಯೂ ಬಿಸಿಲ ಝಳಕ್ಕೆ ಬಂಡೆಗಳ ಕಾವು ಏರುತ್ತಿದೆ. ದಿನೇದಿನೆ ಬಿಸಿ ಗಾಳಿಯೊಂದಿಗೆ ಚುನಾವಣೆ ಗಾಳಿಯೂ ಜೋರಾಗಿ ಬೀಸತೊಡಗಿದೆ. ಶತ್ರುಗಳು ಮಿತ್ರರಾಗಿರೋದು ಕ್ಷೇತ್ರದ ವಿಶೇಷ ಬೆಳವಣಿಗೆ.
ಈ ಕ್ಷೇತ್ರ ಗೆಲ್ಲಲು ಕಾಂಗ್ರೆಸ್-ಬಿಜೆಪಿ ರಣತಂತ್ರ ರೂಪಿಸುತ್ತಿವೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಮೊಳಕಾಲ್ಮೂರಿನಿಂದ ಬಿ. ಶ್ರೀರಾಮುಲು ಸ್ಪ ರ್ಧಿಸಿದ ಕಾರಣಕ್ಕೆ ರಾಜ್ಯದ ಗಮನ ಸೆಳೆದಿದ್ದ ಕ್ಷೇತ್ರವಿದು. ಈಗ 2023ರ ಚುನಾವಣೆಗೆ ಕ್ಷೇತ್ರದ ಚಿತ್ರಣ ಬೇರೆ ಸ್ವರೂಪ ಪಡೆದಿದೆ. ಕಳೆದ ನಾಲ್ಕು ವರ್ಷಗಳಿಂದ ಕಾಂಗ್ರೆಸ್ ಪಾಳಯದಲ್ಲಿದ್ದ ನೇರ‌್ಲಗುಂಟೆ ತಿಪ್ಪೇಸ್ವಾಮಿ ಬಿಜೆಪಿಗೆ ಸೇರ್ಪಡೆಯಾಗಿದ್ದರೆ, ಬಿಜೆಪಿಯಲ್ಲಿರುವ ಮೂಲತಃ ಮೊಳಕಾಲ್ಮೂರಿನವರಾದ ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಕಾಂಗ್ರೆಸ್ ಸೇರುವ ವದಂತಿ ದಟ್ಟವಾಗಿದೆ.
ಅಂದು ಶತ್ರು-ಇಂದು ಮಿತ್ರ: ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ ಎನ್ನುವ ಮಾತಿಗೆ ಈ ಕ್ಷೇತ್ರ ಸಾಕ್ಷಿಯಾಗಿದೆ. ಬಿಎಸ್‌ಆರ್ ಕಾಂಗ್ರೆಸ್‌ನಿಂದ ಗೆದ್ದು ಬಿಜೆಪಿ ಸೇರಿದ್ದ ನೇರ‌್ಲಗುಂಟೆ ತಿಪ್ಪೇಸ್ವಾಮಿ ಅವರಿಗೆ ಕಳೆದ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ತಪ್ಪಿತ್ತು. ಇದರಿಂದ ಕೆರಳಿದ್ದ ತಿಪ್ಪೇಸ್ವಾಮಿ, ಸಚಿವ ಶ್ರೀರಾಮುಲು ವಿರುದ್ಧವೇ ತೊಡೆತಟ್ಟಿ, ನಿರಂತರ ವಾಗ್ಧಾಳಿ ನಡೆಸುತ್ತಿದ್ದರು. ಬದಲಾದ ಸನ್ನಿವೇಶದಲ್ಲಿ ತಿಪ್ಪೇಸ್ವಾಮಿ ಮತ್ತೆ ಬಿಜೆಪಿ ಸೇರಿದ್ದಾರೆ.
ಬಿಜೆಪಿ ಟಿಕೆಟ್ ತಿಪ್ಪೇಸ್ವಾಮಿಗೆ ಬಹುತೇಕ ಪಕ್ಕಾ ಎನ್ನಲಾಗುತ್ತಿದೆ. ಶ್ರೀರಾಮುಲು ವಿರುದ್ಧ ಮುನಿಸಿಕೊಂಡಿದ್ದ ತಿಪ್ಪೇಸ್ವಾಮಿ ಕಳೆದ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಸೇರಿದ್ದರು. ಪ್ರಭಾವಿ ಮುಖಂಡ ಶ್ರೀರಾಮುಲು ವಿರುದ್ಧ ಪಕ್ಷೇತರರಾಗಿ ಕಣಕ್ಕಿಳಿದು 49 ಸಾವಿರ ಮತ ಪಡೆದಿದ್ದ ತಿಪ್ಪೇಸ್ವಾಮಿ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗಬಹುದು ಎನ್ನುವ ಲೆಕ್ಕಾಚಾರವಿತ್ತು. ಆದರೆ ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಡಾ| ಯೋಗೀಶ್‌ಬಾಬು, ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ, ಎನ್.ವೈ.ಗೋಪಾಲಕೃಷ್ಣ ಕುಟುಂಬದ ಸುಜಯ್ ಕಾಂಗ್ರೆಸ್ ಟಿಕೆಟ್‌ಗೆ ಪೈಪೋಟಿ ನಡೆಸುತ್ತಿರುವುದರಿಂದ ತಿಪ್ಪೇಸ್ವಾಮಿ ಸದ್ದಿಲ್ಲದೆ ಬಿಜೆಪಿ ಸೇರಿ ಟಿಕೆಟ್ ಖಾತ್ರಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್‌ನಿಂದಲೂ ಚಾಣಾಕ್ಷ ನಡೆ: ತಿಪ್ಪೇಸ್ವಾಮಿ ಬಿಜೆಪಿ ಪಾಳೆಯಕ್ಕೆ ಜಿಗಿಯುತ್ತಲೇ ಕಾಂಗ್ರೆಸ್ ಕೂಡ ಚಾಣಾಕ್ಷ ನಡೆ ಅನುಸರಿಸುತ್ತಿದೆ. ಮೊಳಕಾಲ್ಮೂರು ಕ್ಷೇತ್ರದಲ್ಲಿ 15 ವರ್ಷಗಳ ಕಾಲ ಶಾಸಕರಾಗಿದ್ದ ಎನ್.ವೈ.ಗೋಪಾಲಕೃಷ್ಣ ಅವರ ಸಂಪರ್ಕದಲ್ಲಿದೆ ಎನ್ನಲಾಗುತ್ತಿದೆ. ಒಂದೊಮ್ಮೆ ತಿಪ್ಪೇಸ್ವಾಮಿ-ಎನ್.ವೈ. ಗೋಪಾಲಕೃಷ್ಣ ಎದುರಾಳಿಗಳಾದರೆ ಎರಡೂ ಪಕ್ಷಗಳ ನಡುವೆ ಪ್ರಬಲ ಪೈಪೋಟಿ ಏರ್ಪಡಲಿದೆ. ಎನ್‌ವೈಜಿ ಬಿಜೆಪಿಯಲ್ಲೇ ಉಳಿದರೆ ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ. ಎನ್‌ವೈಜಿ ಕುಟುಂಬದ ಸುಜಯ್ ಕೂಡ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದು, ಅವರಲ್ಲಿ ಯಾರಿಗೆ ಟಿಕೆಟ್ ಸಿಗಬಹುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಚಿತ್ರನಟ, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಶಶಿಕುಮಾರ್ ಕೂಡ ಬಿಜೆಪಿಗೆ ಸೇರ್ಪಡೆಯಾದ ಅನಂತರ ಮೊಳಕಾಲ್ಮೂರು ಕ್ಷೇತ್ರದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದಾರೆ. ಜಿ.ಪಂ. ಮಾಜಿ ಸದಸ್ಯ ಜಯಪಾಲಯ್ಯ, ಪ್ರಭಾಕರ ಮ್ಯಾಸನಾಯಕ ಸಹ ಮೊಳಕಾಲ್ಮೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಪೈಪೋಟಿ ನೀಡದ ಜೆಡಿಎಸ್, ಪಕ್ಷೇತರರು
ಕಳೆದ ಹಲವು ಚುನಾವಣೆಗಳಲ್ಲಿ ಮೊಳಕಾಲ್ಮೂರು ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದಿಂದ ಈ ಭಾಗದ ಮುಖಂಡ ಎತ್ತಿನಹಟ್ಟಿ ಗೌಡರಿಗೆ ಟಿಕೆಟ್ ನೀಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಎತ್ತಿನಹಟ್ಟಿ ಗೌಡರು ಸಚಿವ ಬಿ.ಶ್ರೀರಾಮುಲು ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಸದ್ಯ ಹಲವು ಆಕಾಂಕ್ಷಿಗಳಿದ್ದು ಟಿಕೆಟ್ ಯಾರಿಗೆ ಸಿಗಲಿದೆ ಎನ್ನುವ ಕೌತುಕವಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷದಿಂದ ಶಶಿಕುಮಾರ್, ಪ್ರಭಾಕರ ಮ್ಯಾಸನಾಯಕ, ಎತ್ತಿನಹಟ್ಟಿ ಗೌಡ, ಕಾಂಗ್ರೆಸ್‌ನಲ್ಲಿ ಕಳೆದ ಬಾರಿ ಸ್ಪರ್ಧೆ ಮಾಡಿದ್ದ ಡಾ|ಯೋಗೀಶ್‌ಬಾಬು, ಬಳ್ಳಾರಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಪಕ್ಷೇತರ ಹಾಗೂ ಇತರ ಪಕ್ಷಗಳಿಂದಲೂ ಇಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯುವ ಸಾಧ್ಯತೆ ಇದೆ. ಟಿಕೆಟ್ ಘೋಷಣೆ ಬಳಿಕವೇ ಬಂಡಾಯದ ಬಿಸಿ ತಟ್ಟಲಿದೆಯೇ ಎಂಬುದು ತಿಳಿಯಲಿದೆ. ಒಟ್ಟಾರೆ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಮಧ್ಯದಲ್ಲೇ ಗೆಲುವಿಗಾಗಿ ಹೋರಾಟ ನಡೆಯೋದು ಖಚಿತ.
-ತಿಪ್ಪೇಸ್ವಾಮಿ ನಾಕೀಕೆರೆ