ಮಂಗಳೂರು: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಅದ್ವಿತೀಯವಾಗಿ ಬೆಳೆಯಲು ಮೊಳಹಳ್ಳಿ ಶಿವರಾವ್ ಅವರೇ ಮುಖ್ಯ ಕಾರಣ. ಸಹಕಾರಿ ಕ್ಷೇತ್ರಕ್ಕೆ ಭದ್ರ ಬುನಾದಿ ತಂದುಕೊಟ್ಟ ಮೊಳಹಳ್ಳಿ ಅವರ ಆದರ್ಶ ಜೀವನ ಮಾದರಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ದ.ಕ ಜಿಲ್ಲಾ ಸಹಕಾರಿ ಯೂನಿಯನ್‌ನ ಸಹಯೋಗದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಹಕಾರಿ ರಂಗದ ಪಿತಾಮಹ ದಿ| ಮೊಳಹಳ್ಳಿ ಶಿವರಾವ್ ಅವರ 143ನೆ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರಾವಳಿ ಜಿಲ್ಲೆಯಲ್ಲಿ 1909ರಲ್ಲಿ ಮೊಳಹಳ್ಳಿ ಶಿವರಾವ್ ಅವರ ಮೂಲಕ ಆರಂಭವಾದ ಸಹಕಾರಿ ಕ್ಷೇತ್ರ ಇಂದು ದೇಶ ವ್ಯಾಪ್ತಿಯಲ್ಲಿಯೇ ಮಹೋನ್ನತ ಸ್ಥಾನ ಪಡೆದಿದೆ. ಸಹಕಾರಿ ಕ್ಷೇತ್ರಕ್ಕೆ ಮೊಳಹಳ್ಳಿ ಅವರು ಹಾಕಿಕೊಟ್ಟ ಮಾರ್ಗದರ್ಶನ, ತಳಹದಿ ಗಟ್ಟಿಯಾಗಿದ್ದ ಕಾರಣದಿಂದ ಇಂದು ಸಹಕಾರಿ ಕ್ಷೇತ್ರ ಅಮೋಘ ಸಾಧನೆಯ ಮೂಲಕ ಜನಮಾತಾಗಿದೆ ಎಂದರು.
ಬ್ಯಾಂಕಿಂಗ್ ಕ್ಷೇತ್ರದ ತವರು ನೆಲವಾದ ಕರಾವಳಿ ಭಾಗದಲ್ಲಿಯೂ ಜಿಲ್ಲೆಯ 170 ಪ್ರಾಥಮಿಕ ಸಹಕಾರಿ ಶಾಖೆಗಳು ರಾಷ್ಟ್ರೀಯ ಬ್ಯಾಂಕ್‌ಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಬೆಳೆದಿದೆ. ಇದಕ್ಕೆ ಮೊಳಹಳ್ಳಿ ಶಿವರಾವ್ ಅವರು ಹಾಕಿಕೊಟ್ಟ ಭದ್ರ ಬುನಾದಿಯೇ ಮುಖ್ಯ ಕಾರಣ ಎಂದರು.
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಮಾತನಾಡಿದರು. ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ವಿನಯ ಕುಮಾರ್ ಸೂರಿಂಜೆ, ಬ್ಯಾಂಕ್ ನಿರ್ದೇಶಕರುಗಳಾದ ಟಿ.ಜಿ. ರಾಜಾರಾಮ ಭಟ್, ಭಾಸ್ಕರ್ ಎಸ್. ಕೋಟ್ಯಾನ್, ಎಂ.ವಾದಿರಾಜ ಶೆಟ್ಟಿ, ರಾಜು ಪೂಜಾರಿ, ಎಂ.ಮಹೇಶ್ ಹೆಗ್ಡೆ, ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್.ಬಿ. ಜಯರಾಮ ರೈ, ಮೋನಪ್ಪ ಶೆಟ್ಟಿ, ಹರಿಶ್ಚಂದ್ರ, ಕೆ.ಜೈರಾಜ್ ಬಿ. ರೈ, ರಾಜೇಶ್ ರಾವ್, ಸದಾಶಿವ ಉಳ್ಳಾಲ, ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್.ಎನ್., ಪ್ರಮುಖರಾದ ಜಯಕರ ಶೆಟ್ಟಿ ಇಂದ್ರಾಳಿ ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ ಶೆಟ್ಟಿ ಸ್ವಾಗತಿಸಿದರು. ಸಿಇಒ ಗೋಪಾಲಕೃಷ್ಣ ಭಟ್ ನಿರೂಪಿಸಿದರು.