Advertisement

ಮನುಷ್ಯ ಸಾಗಿಬಂದ ಹಾದಿ ಮರೆಯಬಾರದು: ಮೋಹನ್‌ ಭಾಗವತ್‌

10:20 AM Mar 09, 2020 | sudhir |

ಬೆಂಗಳೂರು: ಮನುಷ್ಯ ಎಷ್ಟೇ ಪ್ರಗತಿ ಸಾಧಿಸಿದರೂ ತಾನು ನಡೆದುಬಂದ ಹಾದಿಯನ್ನು ಮರೆಯಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ| ಮೋಹನ್‌ ಭಾಗವತ್‌ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ರವಿವಾರ ಬೆಂಗಳೂರು ಹೊರವಲಯದ ಜನಸೇವಾ ವಿದ್ಯಾಕೇಂದ್ರದ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಮನುಷ್ಯ ಎಷ್ಟೇ ಪ್ರಗತಿ ಸಾಧಿಸಿದರೂ ತಾನು ನಡೆದು ಬಂದ ದಾರಿಯನ್ನು ಮರೆಯಬಾರದು. ರಾಷ್ಟ್ರೀಯ ಸ್ವಯಂಸೇವಕ ಸಂಘವು ಇಷ್ಟೆಲ್ಲ ಬೆಳೆದು, ಕೆಲವೊಂದು ಬದಲಾವಣೆಗಳಾಗಿದ್ದರೂ ಸ್ವಯಂಸೇವಕರ ಕೆಲಸ ಕೊಂಚವೂ ಬದಲಾಗಿಲ್ಲ. ಸ್ವಯಂಸೇವಕರು ಇಂದಿಗೂ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆಯಿಂದಲೇ ಕೆಲಸ ಮಾಡುತ್ತಿ¨ªಾರೆ ಎಂದು ಹೇಳಿದರು.

ಪ್ರಾಣಿ, ಪಕ್ಷಿಗಳು ನೈಸರ್ಗಿಕವಾಗಿ ಲಭ್ಯವಿರುವುದರಲ್ಲೇ ಜೀವನ ಸಾಗಿಸುತ್ತವೆ. ಆದರೆ ಮನುಷ್ಯ ಹಾಗಲ್ಲ, ನೈಸರ್ಗಿಕವಾಗಿ ಸಿಗುವ ವಸ್ತುಗಳ ಜತೆಗೆ ಇನ್ನು ಹೆಚ್ಚೆಚ್ಚು ಬೇಕು ಎನ್ನುವ ಪ್ರವೃತ್ತಿ ಹೊಂದಿರುತ್ತಾನೆ. ಶುದ್ಧ ಗಾಳಿ ಪರಿಸರದಿಂದ ದೊರೆಯುತ್ತಿದ್ದರೂ ಹವಾನಿಯಂತ್ರಣ ವ್ಯವಸ್ಥೆ(ಎಸಿ)ಯ ಮೊರೆ ಹೋಗುತ್ತಾರೆ. ತಾನು ಜಗತ್ತಿನಲ್ಲಿ ಬದುಕಲು ಎಲ್ಲ ಬಗೆಯ ಸವಲತ್ತುಗಳು ಬೇಕೆಂದು ಮಾನವ ಬಯಸುತ್ತಾನೆ. ಆದರೆ ಜಗತ್ತು ಇವ್ಯಾವುದೇ ಸವಲತ್ತುಗಳು ಇಲ್ಲದೆಯೇ ನಡೆಯುತ್ತದೆ ಎಂದವರು ಹೇಳಿದರು.
ಜಗತ್ತಿನಲ್ಲಿ ನಾವು ಮುಂದೆ ಸಾಗಬೇಕಾದರೆ ಸಾಧನೆ ಇರಬೇಕು.

ಲೋಕಕಲ್ಯಾಣಕ್ಕಾಗಿ ನಮ್ಮಲ್ಲಿ ಸುವಿಧ ಬೇಕು. ಸಾಧನೆ ಮತ್ತು ಸುವಿಧ ಇದ್ದರೆ ಜಗತ್ತು ಚೆನ್ನಾಗಿರುತ್ತದೆ. ಹೀಗಾಗಿ ಶಿಕ್ಷಣವು ಸಂಸ್ಕಾರದ ಭಾಗವಾಗಿರಬೇಕು ಮತ್ತು ನಮ್ಮ ಕಾರ್ಯಪರತೆಯು ಉತ್ಕೃಷ್ಟವಾಗಿದ್ದಾಗ ಫ‌ಲ ಲಭಿಸುತ್ತದೆ. ಅದರಿಂದ ಸದಾ ಸಂತೋಷವೂ ಸಿಗುತ್ತದೆ ಎಂದು ಹೇಳಿದರು.

ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದ ಮಧುಸೂಧನ್‌ ಸಾಯಿ ಜೀ ಮಾತನಾಡಿ, ಸಮಾಜದಲ್ಲಿ ದೇವಾಲಯಕ್ಕಿಂತಲೂ ಶಾಲೆಗಳ ಆವಶ್ಯಕತೆ ಹೆಚ್ಚಿದೆ. ಶಾಲೆಯಲ್ಲಿ ಮನುಷ್ಯರನ್ನು ದೇವರನ್ನಾಗಿ ಪರಿವರ್ತಿಸುವ ಶಕ್ತಿ ಇದೆ. ನಮ್ಮ ದೇಶದಲ್ಲಿ ಆಧ್ಯಾತ್ಮಿಕ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಸೇವೆ ಭಾರತೀಯ ಸಂಸ್ಕೃತಿಯ ಸಾರ ಮತ್ತು ಆಧಾರ. ಇದನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಸಮರ್ಪಕವಾಗಿ ಜೋಡಿಸಬೇಕು ಎಂದು ಹೇಳಿದರು.

Advertisement

ಮಾನಸಿಕವಾಗಿ ಅಲೌಕಿಕವಾಗಿರುವವನು ಲೌಕಿಕ ಜೀವನದಲ್ಲಿ ಉತ್ಸಾಹದಿಂದಿರುತ್ತಾನೆ. ಅಂಥ ವ್ಯಕ್ತಿ ಸಂಪೂರ್ಣವಾಗಿ ಲೌಕಿಕ ವ್ಯಕ್ತಿಯಾಗಿಯೇ ಕಾಣಿಸುತ್ತಾನೆ. ಆದರೆ ಆತ ಯಾವಾಗ ಬೇಕಾದರೂ ವಿರಾಗಿಯಾಗಿ ಎಲ್ಲವನ್ನೂ ತೊರೆಯಲು ಸಿದ್ಧನಿರುತ್ತಾನೆ. ಈ ರೀತಿ ಬದುಕಿದರೆ ಜೀವನ ಸಂತಸವಾಗಿರುತ್ತದೆ.
– ಡಾ| ಮೋಹನ್‌ ಭಾಗವತ್‌, ಸರಸಂಘಚಾಲಕರು, ಆರೆಸ್ಸೆಸ್‌

Advertisement

Udayavani is now on Telegram. Click here to join our channel and stay updated with the latest news.

Next