Advertisement

ಆರೆಸ್ಸೆಸ್‌ ಶಾಖೆಗಳ ಹೆಚ್ಚಳಕ್ಕೆ ಮೋಹನ ಭಾಗವತ್‌ ಸೂಚನೆ

12:13 PM Aug 20, 2017 | |

ಹುಬ್ಬಳ್ಳಿ: ರಾಜ್ಯದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರ ಹತ್ಯೆ ವಿರುದ್ಧ ದೊಡ್ಡ ಧ್ವನಿ, ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬುವುದು, ಸಂಘದ ಶಾಖೆಗಳ ಹೆಚ್ಚಳ ಕುರಿತು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್‌ ಅವರು ಶನಿವಾರ ಮಹತ್ವದ ಸಭೆ ನಡೆಸಿದ್ದಾರೆ. 

Advertisement

ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ವಿವಿಧೆಡೆ ಆರ್‌ಎಸ್‌ಎಸ್‌ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಹೆಚ್ಚುತ್ತಿದ್ದು, ಇದರ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು. ಮುಖ್ಯವಾಗಿ ಕಾರ್ಯಕರ್ತರು ಆತ್ಮಸ್ಥೈರ್ಯ ಕಳೆದುಕೊಳ್ಳದಂತೆ ನೈತಿಕ ಬಲ ತುಂಬುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಭಾಗವತ್‌ ಅವರು ಸುದೀರ್ಘ‌ವಾಗಿ ಚರ್ಚಿಸಿದರು ಎನ್ನಲಾಗಿದೆ. 

ಶಾಖೆ ಹೆಚ್ಚಳಕ್ಕೆ ಸೂಚನೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆರಂಭವಾಗಿ 2025ಕ್ಕೆ 100 ವರ್ಷ ಪೂರ್ಣಗೊಳ್ಳುತ್ತಿದ್ದು, ಸಂಘದ ಶಾಖೆಗಳನ್ನು ಹೆಚ್ಚಿಸುವ, ಸಂಘಕ್ಕೆ ಹೆಚ್ಚು ಜನರನ್ನು ಸೇರಿಸುವ ಕಾರ್ಯಕ್ಕೆ ಮುಂದಾಗುವ ಹಾಗೂ ಹಳ್ಳಿ-ಹಳ್ಳಿಗಳಲ್ಲಿ ಸಂಘದ ಶಾಖೆ ಆರಂಭಕ್ಕೆ ಮುಂದಾಗುವಂತೆ ಸಂಘ ಪ್ರಮುಖರು ಹಾಗೂ ಕಾರ್ಯಕರ್ತರಿಗೆ ಸೂಚಿಸಿದರು ಎನ್ನಲಾಗಿದೆ. 

ಇದ್ದ ಶಾಖೆಗಳ ಬಲ ಹೆಚ್ಚಳ ಹಾಗೂ ಹೊಸ ಶಾಖೆಗಳ ಆರಂಭದ ಮೂಲಕ ಮುಂದಿನ ದಿನಗಳಲ್ಲಿ ದೇಶದ ಹಲವು ಸಮಸ್ಯೆ, ಸಂಕಷ್ಟಗಳ ಪರಿಹಾರ, ನಿವಾರಣೆ ನಿಟ್ಟಿನಲ್ಲಿ ಶಾಖೆಗಳು ಮಹತ್ವದ ಪಾತ್ರ ವಹಿಸಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಲಾಗಿದೆ. ರಾಷ್ಟ್ರೀಯ ಸೇವಿಕಾ ಸಮಿತಿ ಸದಸ್ಯರು ಹಾಗೂ ಇನ್ನಿತರರೊಂದಿಗೆ ಭಾಗವತ್‌ ಅವರು ಪ್ರತ್ಯೇಕವಾಗಿ ಸಭೆ ನಡೆಸಿ ಚರ್ಚಿಸಿದ್ದಾರೆ.

ಬಿಜೆಪಿ ಮುಖಂಡರ ಭೇಟಿ: ಈ ಮಧ್ಯೆ ಶನಿವಾರ ಬಿಜೆಪಿ ಮುಖಂಡರಾದ ಸಂತೋಷ ಹಾಗೂ ಅರುಣಕುಮಾರ ಅವರು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ರಾಜ್ಯದಲ್ಲಿಸಂಘಟನೆಯ ಜತೆಗೆ ರಾಜಕೀಯ ವಿದ್ಯಮಾನ, ಬಿಜೆಪಿ ಕೈಗೊಳ್ಳುತ್ತಿರುವ ನಿಲುವುಗಳ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ. 

Advertisement

ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರದ ದುರಾಡಳಿತ, ಆರ್‌ಎಸ್‌ಎಸ್‌ಕಾರ್ಯಕರ್ತರ ಹತ್ಯೆ ಇನ್ನಿತರ ವಿಷಯ ಕುರಿತಾಗಿ ರಾಜ್ಯ ಬಿಜೆಪಿ ನಾಯಕರು ಆಕ್ರಮಣಕಾರಿ ಪ್ರತಿರೋಧಕ್ಕೆ ಮುಂದಾಗದೆ, ನಿಸ್ತೇಜ ಸ್ಥಿತಿ ವರ್ತನೆ ತೋರುತ್ತಿರುವ ಬಗ್ಗೆ ಬಿಜೆಪಿ ಕಾರ್ಯಕರ್ತರ ಮನದಲ್ಲಿನ ಆಕ್ರೋಶದ ಮಾಹಿತಿಯೂ ಮೋಹನ ಭಾಗವತ್‌ ಅವರ ಗಮನಕ್ಕೆ ಹಲವು ಮೂಲಗಳಿಂದ ಹೋಗಿದೆ ಎಂದು ಹೇಳಲಾಗುತ್ತಿದೆ.  

Advertisement

Udayavani is now on Telegram. Click here to join our channel and stay updated with the latest news.

Next