Advertisement

ಗೋ ಸೇವೆಯಿಂದ ಅಪರಾಧಿ ಮನೋಭಾವ ಇಳಿಕೆ

09:56 AM Dec 10, 2019 | Team Udayavani |

ಹೊಸದಿಲ್ಲಿ: “ಗೋವುಗಳ ಆರೈಕೆಯಿಂದ ಕೈದಿಗಳ ಮನಃ ಪರಿವರ್ತನೆಯಾಗಿ ಅವರಲ್ಲಿನ ಅಪರಾಧಿ ಮನೋಭಾವ ಗಣನೀಯವಾಗಿ ತಗ್ಗುವುದು ಕಂಡು ಬಂದಿದೆ. ಇದನ್ನು ಕೂಲಂಕಷವಾಗಿ ಅಧ್ಯಯನ ಮಾಡಿ, ವೈಜ್ಞಾನಿಕವಾಗಿ ಅಂಕಿ-ಅಂಶಗಳನ್ನು ದಾಖಲಿಸುವ ಮೂಲಕ ಗೋವುಗಳ ಸೇವೆಯಿಂದ ಮಾನವನಲ್ಲಿ ಕಂಡು ಬರುವ ಪರಿವರ್ತನೆಗಳನ್ನು ವಿಶ್ವಕ್ಕೆ ತೋರ್ಪಡಿಸುವ ಆವಶ್ಯಕತೆಯಿದೆ’ ಎಂದು ಆರ್‌ಎಸ್‌ಎಸ್‌ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

Advertisement

ದಿಲ್ಲಿಯಲ್ಲಿ ರವಿವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಗೋವುಗಳು ಈ ವಿಶ್ವದ ಮಾತೆಯರು. ಇವು ಮಣ್ಣನ್ನು, ಜಗದ ಜೀವರಾಶಿಗಳನ್ನು, ಪಕ್ಷಿಗಳನ್ನು, ಮನುಷ್ಯರನ್ನು ಕಾಯಿಲೆಗಳಿಂದ ರಕ್ಷಿಸುತ್ತವೆ. ಜತೆಗೆ ಮನುಷ್ಯರ ಹೃದಯವನ್ನು ಹೂವಿನಷ್ಟು ಕೋಮಲವಾಗಿಸುತ್ತವೆ ಎಂದರು. ಜೈಲಿನಲ್ಲಿರುವ ಕೈದಿಗಳನ್ನು ಜೈಲಿನ ಗೋ ಶಾಲೆಗಳ ಸೇವೆಗೆ ನಿಯೋಜಿಸಿದ ಅನಂತರ ಅವರ ಮನೋಭಾವದಲ್ಲಿ ದೊಡ್ಡ ಬದಲಾವಣೆಯಾಗಿರುವುದನ್ನು ಕಂಡುಕೊಳ್ಳಲಾಗಿದೆ. ಇದನ್ನು ಮತ್ತಷ್ಟು ವ್ಯವಸ್ಥಿತವಾಗಿ ಅಧ್ಯಯನ ಮಾಡಿ, ಅಂಕಿ-ಅಂಶಗಳ ಮೂಲಕ ಗೋವುಗಳ ಮಹತ್ವವನ್ನು ಜಗತ್ತಿಗೆ ಸಾರಬೇಕಿದೆ ಎಂದು ಅವರು ಆಗ್ರಹಿಸಿದರು.

ಗೋ ಶಾಲೆಗಳಲ್ಲಿನ ಅವ್ಯವಸ್ಥೆಗಳ ಬಗ್ಗೆ ಮಾತನಾಡಿದ ಅವರು, ಸೀಮಿತ ಸಂಖ್ಯೆಯಲ್ಲಿ ಗೋವುಗಳನ್ನು ಸಾಕುವ ಕಡೆಗೆ ಮಿತಿಮೀರಿದ ಸಂಖ್ಯೆಯಲ್ಲಿ ಗೋವುಗಳು ಬಂದು ಸೇರಿಕೊಂಡರೆ ಸಮಸ್ಯೆಗಳು ಉಲ್ಬಣವಾಗುವುದು ಖಚಿತ. ಹಾಗಾಗಿ ದೇಶದ ಒಬ್ಬೊಬ್ಬರೂ ಒಂದೊಂದು ಗೋವನ್ನು ಸಾಕುವ ಜವಾಬ್ದಾರಿ ಹೊತ್ತರೆ, ಬೀದಿದನಗಳ ಹಾವಳಿಯೂ ನಿಯಂತ್ರಣವಾಗಿ, ಗೋ ಶಾಲೆಗಳ ಸಮಸ್ಯೆಯೂ ನಿರ್ಮೂಲನೆಯಾಗುತ್ತದೆ ಎಂದು ತಿಳಿಸಿದ್ದಾರೆ.

ರಾಸುಗಳ ಸಂರಕ್ಷಣೆಗೆ “ಗೋವು ಸಫಾರಿ’
ಬೀದಿ ಗೋವುಗಳ ಹಾವಳಿಯಿಂದ ಕಂಗೆಟ್ಟಿರುವ ಉತ್ತರ ಪ್ರದೇಶದ ಜನತೆಯ ಸಮಸ್ಯೆಗೆ ಸ್ಪಂದಿಸಿರುವ ಅಲ್ಲಿನ ಸರಕಾರ, ಸದ್ಯದಲ್ಲೇ ಗೋವು ಸಫಾರಿ ಎಂಬ ಹೆಸರಿನ ವಿನೂತನ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ.

ಬೀದಿಹಸುಗಳ ಸಂರಕ್ಷಣೆ, ಪುನರುಜ್ಜೀವನಕ್ಕಾಗಿ ಈ ಯೋಜನೆಯನ್ನು ಆರಂಭಿಸಲು ನಿರ್ಧರಿಸಿದೆ. ಅಗಾಧ ಸಂಖ್ಯೆಯಲ್ಲಿರುವ ಗೋ ಶಾಲೆಗಳಲ್ಲಿ ಗೋವುಗಳಿಗೆ ಒದಗಿಸಲಾಗಿರುವ ಸೌಲಭ್ಯಗಳು ಹಾಗೂ ಅವುಗಳಿಂದ ಪಡೆಯಲಾಗುತ್ತಿರುವ ಪ್ರಯೋಜನಗಳ ಕುರಿತಂತೆ ಪ್ರವಾಸಿಗರಿಗೆ ತೋರಿಸುವ ಉದ್ದೇಶವನ್ನು ಈ ಯೋಜನೆ ಒಳಗೊಂಡಿದೆ.

Advertisement

ಇದರ ವಿವರಣೆ ನೀಡಿದ ಪಶುಸಂಗೋಪನ ಸಚಿವ ಲಕ್ಷ್ಮೀ ನಾರಾಯಣ್‌ ಚೌಧರಿ, ಅಧಿಕ ಸಂಖ್ಯೆಯಲ್ಲಿ ಗೋವುಗಳನ್ನು ಇರಿಸಬಲ್ಲ ಬೃಹತ್‌ ಗೋ ಶಾಲೆಗಳು ಉತ್ತರ ಪ್ರದೇಶದ ಬಾರಾಬಂಕಿ ಹಾಗೂ ಮಹಾರಾಜಗಂಜ್‌ ಪ್ರಾಂತ್ಯಗಳಲ್ಲಿವೆ. ಈ ಪ್ರದೇಶಗಳಲ್ಲಿ ಸಫಾರಿಗಳನ್ನು ಆರಂಭಿಸಿದರೆ, ಪ್ರವಾಸೋದ್ಯಮಕ್ಕೂ ನೆರವಾಗುತ್ತದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next