Advertisement
ಕ್ರೀಡಾರಂಗದ ಶಕ್ತಿ ಇರುವುದೇ ಯುವ ಜನರ ಅಂತಃಶಕ್ತಿಯಲ್ಲಿ. ಇಡೀ ವಿಶ್ವದಲ್ಲಿ 30 ವರ್ಷದೊಳಗಿನ ಯುವಜನರು ಭಾರತದಲ್ಲಿ ಇರುವಷ್ಟು ಬೇರೆಲ್ಲೂ ಇಲ್ಲ. ಈ ದೃಷ್ಟಿಯಲ್ಲಿ ಕ್ರೀಡಾರಂಗದಲ್ಲಿ ನಾವು ವಿಶ್ವದಲ್ಲೇ ಮುಂಚೂಣಿ ಯಲ್ಲಿರಬೇಕಾಗಿತ್ತು. ಸ್ವಾತಂತ್ರ್ಯದ ಬಳಿಕವಾದರೂ ನಾವು ವಿಶ್ವದ ಕ್ರೀಡಾರಂಗದಲ್ಲಿ ಮಿಂಚಬೇಕಿತ್ತು. ಹಾಗಾಗಿಲ್ಲ ಎಂಬುದು ನೋವಿನ ವಿಚಾರ. ಈ ಬಗ್ಗೆ ಇನ್ನಾದರೂ ನಾವು ಗಂಭೀರವಾಗಿ ಯೋಚಿಸಿ ಹೆಜ್ಜೆ ಇರಿಸಬೇಕಾಗಿದೆ.ಭಾರತದ ಭೌಗೋಳಿಕ ವಾತಾವರಣ ಎಲ್ಲ ಬಗೆಯ ದೈಹಿಕ ಚಟುವಟಿಕೆಗಳಿಗೆ ಹೇಳಿ ಮಾಡಿಸಿದಂತಿದೆ. ಉತ್ತಮ ತರಬೇತಿ ಕೊಡಬಲ್ಲವರೂ ನಮ್ಮಲ್ಲಿದ್ದಾರೆ. ಆದರೆ ನಮ್ಮ ಯುವಜನರು ಎಲ್ಲಿದ್ದಾರೆ, ಹೇಗಿದ್ದಾರೆ ಎಂದು ಒಂದಿಷ್ಟು ಯೋಚಿಸಬೇಕಿದೆ.
ಬಡವರೇ ಹೆಚ್ಚಿರುವ ಭಾರತದಲ್ಲಿ ಬಹುತೇಕ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಆ ಕಾರಣ ದೈಹಿಕ ದಾಡ್ಯìತೆ ವಿಚಾರವಿರಲಿ, ಸಾಮಾನ್ಯ ಆರೋಗ್ಯ ಸ್ಥಿತಿ ಕಾಪಾಡಿ ಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಅಪೌಷ್ಟಿಕತೆಯಿಂದ ಸಾಮಾನ್ಯ ಸ್ಥಿತಿಗೆ ಬಂದ ಬಳಿಕ ಕ್ರೀಡಾರಂಗದ ಚಟುವಟಿಕೆಗಳಿಗೆ ಮೈಒಡ್ಡುವ ದಾಡ್ಯìತೆ ನಾವು ರೂಢಿಸಬೇಕಾಗಿದೆ.
Related Articles
Advertisement
ನಿರ್ದಿಷ್ಟ ಕ್ರೀಡೆಯತ್ತ ಗಮನ ಅಗತ್ಯ: ಭಾರತೀ ಯರು ಬಹುವಿಧ ಕುಶಲಿಗರು. ಕ್ರೀಡೆಯೂ ಇದಕ್ಕೆ ಹೊರತಲ್ಲ. ಓರ್ವ ಕ್ರೀಡಾಳು ಓಟ, ಗುಂಡು ಎಸೆತ, ಈಟಿ ಎಸೆತ, ಉದ್ದ ಜಿಗಿತ, ಎತ್ತರ ಜಿಗಿತ, ಕುಸ್ತಿ ಹೀಗೆ ಭಾರತೀಯರು ಎಲ್ಲ ಕ್ರೀಡೆಗಳಿಗೆ ಸಿದ್ಧ. ಇದೇ ದೊಡ್ಡ ದೋಷ. ಒಬ್ಬ ವ್ಯಕ್ತಿಯ ನಿಜವಾದ ಕ್ಷೇತ್ರ ಯಾವುದು ಎಂಬುದನ್ನು ಗುರುತಿಸದೆ ಎಲ್ಲದರಲ್ಲೂ ಭಾಗವಹಿಸುವ ಹುಮ್ಮಸ್ಸು. ಇದರಿಂದಾಗಿ ಕ್ರೀಡಾಳು ವಿನ ದೈಹಿಕ ಸಾಮರ್ಥ್ಯ ಹತ್ತಾರು ಕ್ರೀಡೆಗಳಲ್ಲಿ ಹಂಚಿ ಹೋಗಿ ಯಾವುದರಲ್ಲೂ ಪರಿಪೂರ್ಣತೆಯತ್ತ ಸಾಗಲು ಸಾಧ್ಯವಾಗುತ್ತಿಲ್ಲ.
ಭಾರತದ ಒಟ್ಟಾರೆ ಕ್ರೀಡಾರಂಗದ ಸ್ಥಿತಿಗತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ನಾವು ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಿಸಲು ಸಿದ್ಧ. ಆದರೆ ನಮ್ಮಿಂದ ಎಷ್ಟು ಸಾಧನೆಯಾದೀತು ಎಂಬ ಹಿಡಿತವಿಲ್ಲ. ಹಾಗಾಗಿ ನಿರ್ದಿಷ್ಟ ಆಟ, ಕ್ರೀಡೆಗಳನ್ನೇ ಆರಿಸಿ ಪದಕ ಗಳಿಕೆಗೆ ಪ್ರಯತ್ನಿಸಬೇಕಾಗಿದೆ. ಮುಂದಿನ 25 ವರ್ಷಗಳಲ್ಲಿ ನಮಗೆ ಆರು ಒಲಿಂಪಿಕ್ಸ್ ಕೂಟಗಳಲ್ಲಿ ಭಾಗವಹಿಸಲು ಅವಕಾಶಗಳಿವೆ. ನಾವು ನಿರ್ದಿಷ್ಟವಾಗಿ ಕೆಲವೇ ಕೆಲವು ಕ್ರೀಡೆಗಳನ್ನು, ಗುಂಪು ಆಟಗಳನ್ನು ಆಯ್ಕೆ ಮಾಡಿಕೊಂಡು ಅದರಲ್ಲೇ ಪಾರಮ್ಯ ಸಾಧಿಸಲು ಪ್ರಯತ್ನಿಸಬೇಕಾಗಿದೆ.
ಕ್ರೀಡೆ ಮತ್ತು ರಾಜಕೀಯ: ಕ್ರೀಡೆಗಳಿಗೆ ಸಂಬಂಧಿಸಿದ ಅದೆಷ್ಟೋ ಸಂಘಟನೆಗಳಿವೆ. ಒಂದೇ ಕ್ರೀಡೆಯೊಳಗಡೆಯೇ ಹಲವು ಸಂಘಟನೆಗಳಿವೆ. ಈ ಅಸೋಸಿಯೇಶನ್‌ಗಳ ಅಧ್ಯಕ್ಷಗಿರಿಗೆ ಒಂದಷ್ಟು ಲಾಬಿ, ರಾಜಕೀಯ, ಒತ್ತಡ, ಕೋರ್ಟ್ ಕಟ್ಟೆ ಏರಿದ ಸಂಘಟನೆಗಳ ಭಿನ್ನಾಭಿಪ್ರಾಯಗಳು ಒಂದೆಡೆಯಾದರೆ ಇನ್ನೊಂದೆಡೆ ಆಯ್ಕೆಯಾದ ಅಧ್ಯಕ್ಷರ ಭರ್ಜರಿ ಪದಗ್ರಹಣ ಸಮಾರಂಭ ನಡೆಯುತ್ತದೆ. ಅಂದು ಹೇಳಿಕೆ ಕೊಟ್ಟು ಹೋದ ಮಹನೀಯರು ಮತ್ತೆ ಯಾವುದೇ ಕೂಟದಲ್ಲಿ ಕಾಣಸಿಗುವುದಿಲ್ಲ. ಸಿಕ್ಕಿದರೂ ಅಪರೂಪ. ಇಂತಹ ಶೋಕಿ, ಅಧಿಕಾರ ಲಾಲಸೆ ನಮ್ಮ ದೇಶದಲ್ಲಿ ಇರುವವರೆಗೆ ಅಸೋಸಿಯೇಶನ್‌ಗಳ ಮೂಲಕ ಕ್ರೀಡೋದ್ಧಾರ ಸಾಧ್ಯವಿಲ್ಲ. ಅರ್ಹರನ್ನು ಆರಿಸುವ ಮೂಲಕ ಮುಂದಿನ ವರ್ಷಗಳಲ್ಲಿ ಆದರೂ ಕ್ರೀಡಾ ಚಟುವಟಿಕೆಗಳು ಫಲಿತಾಂಶಪೂರಿತವಾಗಿ ನಡೆದಾವು. ಹೀಗೆಲ್ಲ ಅಧ್ಯಕ್ಷರಾಗುವ ಬದಲು ಯಾವುದಾದರೂ ರಾಜಕೀಯ ಪಕ್ಷದ ನಾಯಕರಾಗಿಯೋ, ಒಳ ಬಾಗಿಲಿನಿಂದ ಸದನ ಪ್ರವೇಶಿಸಿಸುವ ರಾಜಕಾರಣಿಗಳಾಗುವುದೋ ಲೇಸು. ಇನ್ನು ಕ್ರೀಡಾರಂಗದಲ್ಲಿರುವ ಶೋಷಣೆಯ ಹಲವು ಮುಖಗಳನ್ನು ನಿವಾರಿಸುವುದೂ ಅಗತ್ಯವಾಗಿದೆ.
ಸರಕಾರಕ್ಕೆ ಕ್ರೀಡಾ ಯೋಜನೆಗಳನ್ನು ರೂಪಿಸಿ ಸಲ್ಲಿಸುವ ತಜ್ಞರು ನಮ್ಮಲ್ಲಿದ್ದಾರೆ. ನಿಜಕ್ಕೂ ಅನುಸರಣ ಯೋಗ್ಯ ಸಲಹೆ, ಮಾರ್ಗದರ್ಶನ ನೀಡುತ್ತಾರೆ. ಆದರೆ ಈ ಯೋಜನೆ, ಯೋಚನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ನಮ್ಮ ಆಡಳಿತ ವ್ಯವಸ್ಥೆಗೆ ಸಾಧ್ಯವಾಗುತ್ತಿಲ್ಲ. ಇದನ್ನು ನಿವಾರಿಸುವ ಪ್ರಯತ್ನವನ್ನು ಮುಂದಿನ ವರ್ಷಗಳಲ್ಲಾದರೂ ಮಾಡಬೇಕಾಗಿದೆ.
ಖಾಸಗಿ ಪ್ರಯತ್ನಕ್ಕೆ ಬೆಂಬಲವಿಲ್ಲ: ಸರಕಾರ, ಇಲಾಖೆ, ಅಸೋಸಿಯೇಶನ್‌ಗಳು, ವಿಶ್ವವಿದ್ಯಾನಿಲ ಯಗಳು ಮಾಡದ, ಮಾಡಿ ತೋರಿಸದ ಕ್ರೀಡಾ ಸಾಧನೆ ಇವತ್ತು ಖಾಸಗಿ ವಲಯಗಳಿಂದ ಸಾಧ್ಯವಾಗುತ್ತಿದೆ. ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳು ಕ್ರೀಡಾಳುಗಳಿಗೆ ಉಚಿತ ಶಿಕ್ಷಣ, ಆಹಾರ ಸಹಿತ ಕ್ರೀಡಾ ತರಬೇತಿ ನೀಡಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆ ಕ್ರೀಡಾಳುಗಳು ಪದಕಗಳನ್ನು ಗಳಿಸಿದರೂ ಯಾವುದೇ ಸರಕಾರ, ಸಂಘಟನೆ, ವಿವಿ ಮೂಲಕ ಆರ್ಥಿಕ ಬೆಂಬಲವೂ ಇಲ್ಲ, ದಾಖಲೆಯ ಪ್ರಕಟನೆಯೂ ಇಲ್ಲ, ಕನಿಷ್ಠ ಶ್ಲಾಘನೆಯ ಒಂದು ಮಾತೂ ಇಲ್ಲ. ಅದಕ್ಕೂ ಮಿಗಿಲಾಗಿ ಖಾಸಗಿ ವಲಯದವರನ್ನು “ವೈರಿ’ಗಳಂತೆ ನೋಡುವ ನಮ್ಮ ವ್ಯವಸ್ಥೆ ಜುಗುಪ್ಸೆ ಹುಟ್ಟಿಸುವಂತಿದೆ. ಹಾಗಾಗಿಯೇ ಖಾಸಗಿ ವಲಯದ ಹಲವು ಶಿಕ್ಷಣ ಸಂಸ್ಥೆಗಳು ಮತ್ತದರ ಪ್ರವರ್ತಕರು ಕ್ರೀಡಾ ಕ್ಷೇತ್ರದ ಬಗೆಗಿನ ತಮ್ಮ ಆಸಕ್ತಿಯನ್ನು ಕಳೆದುಕೊಂಡ ಹಲವು ಉದಾಹರಣೆಗಳು ದೇಶದಲ್ಲಿವೆ.ಆರೋಗ್ಯ, ಶಿಕ್ಷಣ ಇವತ್ತು ಖಾಸಗಿಯವರಿಂದಾಗಿ ಮುನ್ನಡೆಗೆ ಬಂದಿವೆ. ಕ್ರೀಡೆ ಎಂಬುದು ಲಾಭ ನಷ್ಟದ ವಿಷಯ ಆಲ್ಲ. ಆಸಕ್ತಿ ಇರುವ ಖಾಸಗಿಯವರನ್ನು ಪ್ರೋತ್ಸಾಹಿಸಿದಲ್ಲಿ ಮಾತ್ರ ಭಾರತ ಕ್ರೀಡಾರಂಗದಲ್ಲಿ ಬೆಳಗೀತು. - ಡಾ| ಎಂ. ಮೋಹನ ಆಳ್ವ
ಅಧ್ಯಕ್ಷರು, ಆಳ್ವಾಸ್ ಎಜುಕೇಶನ್ ಫೌಂಡೇಶನ್ ರಿ., ಮೂಡುಬಿದಿರೆ