ಬಾರ್ಬಡೋಸ್: ಟೆಸ್ಟ್ ಸರಣಿಯನ್ನು ಜಯಿಸಿರುವ ಭಾರತ ತಂಡವು ಇಂದಿನಿಂದ ಏಕದಿನ ಸರಣಿಗೆ ಸಜ್ಜಾಗಿದೆ. ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯು ಬಾರ್ಬಡೋಸ್ ನ ಕೆನ್ನಿಂಗ್ಸ್ಟನ್ ಓವಲ್ ನಲ್ಲಿ ಆರಂಭವಾಗಲಿದೆ.
ಆದರೆ ಏಕದಿನ ಸರಣಿಯಿಂದ ಭಾರತ ತಂಡದ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ ಗೆ ಬ್ರೇಕ್ ನೀಡಲಾಗಿದೆ. ಹೀಗಾಗಿ ಅವರು ಭಾರತಕ್ಕೆ ಮರಳಿದ್ದಾರೆ ಎಂದು ವರದಿಯಾಗಿದೆ.
2023ರ ಏಕದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಸಿರಾಜ್ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ವರದಿ ತಿಳಿಸಿದೆ. ಸಿರಾಜ್ ಅವರು ಟೆಸ್ಟ್ ತಂಡದಲ್ಲಿದ್ದು ಏಕದಿನ ಸರಣಿಯ ಭಾಗವಾಗದ ಅಶ್ವಿನ್, ಅಜಿಂಕ್ಯ ರಹಾನೆ, ಕೆಎಸ್ ಭರತ್ ಮತ್ತು ನವದೀಪ್ ಸೈನಿ ಜತೆ ಭಾರತ ವಿಮಾನವೇರಿದ್ದಾರೆ.
ಸಿರಾಜ್ ಅವರ ಅನುಪಸ್ಥಿತಿಯಲ್ಲಿ, ಶಾರ್ದೂಲ್ ಠಾಕೂರ್ ಭಾರತದ ತಂಡದಲ್ಲಿ ಅತ್ಯಂತ ಅನುಭವಿ ಸೀಮರ್ ಆಗಿದ್ದಾರೆ. ಇತರ ಮೂವರು ಸೀಮರ್ ಗಳೆಂದರೆ ಉಮ್ರಾನ್ ಮಲಿಕ್, ಜಯದೇವ್ ಉನಾದ್ಕತ್ ಮತ್ತು ಮುಖೇಶ್ ಕುಮಾರ್. ಅದರಲ್ಲೂ ಮುಖೇಶ್ ಕುಮಾರ್ ಅವರು ಇದುವರೆಗೆ ಏಕದಿನ ಮಾದರಿಯಲ್ಲಿ ಪದಾರ್ಪಣೆ ಮಾಡಿಲ್ಲ. ಮತ್ತೊಬ್ಬ ಬೌಲರ್ ಆಗಿ ಹಾರ್ದಿಕ್ ಪಾಂಡ್ಯ ಕೂಡ ಇರುವುದರಿಂದ ಭಾರತ ಸಿರಾಜ್ ಬದಲಿ ಆಟಗಾರನನ್ನು ಹುಡುಕುವ ಸಾಧ್ಯತೆಯಿಲ್ಲ.
ಭಾರತ ತಂಡ: ರೋಹಿತ್ ಶರ್ಮಾ (ನಾ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಉಮ್ರಾನ್ ಮಲಿಕ್, ಯುಜುವೇಂದ್ರ ಚಾಹಲ್, ಜಯದೇವ್ ಉನಾದ್ಕತ್, ಮುಖೇಶ್ ಕುಮಾರ್, ಶಾರ್ದೂಲ್ ಠಾಕೂರ್ , ಅಕ್ಷರ್ ಪಟೇಲ್, ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್.