ಲಕ್ನೋ: ಈ ಬಾರಿಯ ಏಕದಿನ ವಿಶ್ವಕಪ್ ನಲ್ಲಿ ಭಾರತ ತಂಡದ ವೇಗಿ ಮೊಹಮ್ಮದ್ ಶಮಿ ಅವರು ಅತ್ಯದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಮೊದಲು ಮೂರು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆಯದ ಶಮಿ ಬಳಿಕ ಆಡಿದ ಒಂಬತ್ತು ಪಂದ್ಯಗಳಲ್ಲಿ 22 ವಿಕೆಟ್ ಕಿತ್ತು ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸೆಮಿ ಫೈನಲ್ ಪಂದ್ಯದಲ್ಲೂ ಏಳು ವಿಕೆಟ್ ಕಿತ್ತ ಶಮಿ ಅವರಿಗೆ ಇದೀಗ ತವರಿನಲ್ಲಿ ಅಪೂರ್ವ ಕೊಡುಗೆಯೊಂದು ಸಿಕ್ಕಿದೆ.
ಮೊಹಮ್ಮದ್ ಶಮಿ ಅವರ ಪೂರ್ವಜರ ಹಳ್ಳಿಯಲ್ಲಿ ಮಿನಿ ಸ್ಟೇಡಿಯಂ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ರವಾನಿಸಲು ಮತ್ತು ಜಿಮ್ನಾಷಿಯಂ ತೆರೆಯಲು ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲಾಡಳಿತವು ನಿರ್ಧರಿಸಿದೆ.
ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ರಾಜೇಶ್ ತ್ಯಾಗಿ, “ಮೊಹಮ್ಮದ್ ಶಮಿ ಅವರ ಗ್ರಾಮದಲ್ಲಿ ಮಿನಿ ಸ್ಟೇಡಿಯಂ ನಿರ್ಮಿಸುವ ಬಗ್ಗೆ ನಾವು ಪ್ರಸ್ತಾವನೆ ಕಳುಹಿಸುತ್ತೇವೆ. ಅಲ್ಲಿ ಒಂದು ಓಪನ್ ಜಿಮ್ ಕೂಡಾ ಇರಲಿದೆ. ಆ ಗ್ರಾಮದಲ್ಲಿ ಸಾಕಷ್ಟು ಜಾಗವಿದೆ” ಎಂದಿದ್ದಾರೆ.
ಉತ್ತರ ಪ್ರದೇಶ ಸರ್ಕಾರವು ರಾಜ್ಯದಾದ್ಯಂತ 20 ಕ್ರೀಡಾಂಗಣಗಳನ್ನು ನಿರ್ಮಿಸಲು ಸೂಚನೆಗಳನ್ನು ನೀಡಿತ್ತು, ಜಿಲ್ಲಾ ಅಮ್ರೋಹಾ ಕ್ರೀಡಾಂಗಣವನ್ನು ಸಹ ಅದಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಶುಕ್ರವಾರ ರಾಜೇಶ್ ತ್ಯಾಗಿ ಅವರನ್ನು ಒಳಗೊಂಡ ತಂಡವು ಶಮಿ ಗ್ರಾಮಕ್ಕೆ ಭೇಟಿ ನೀಡಿದ್ದು, ಅಲ್ಲಿ ಸೂಕ್ತ ಜಾಗದ ಪರಿಶೀಲನೆ ನಡೆಸಿದೆ.