ಹೊಸದಿಲ್ಲಿ: ಆಸ್ಟ್ರೇಲಿಯ ವಿರುದ್ಧ 2015ರಲ್ಲಿ ನಡೆದಿದ್ದ ವಿಶ್ವಕಪ್ ಸೆಮಿಫೈನಲ್ ಪಂದ್ಯದ ವೇಳೆ ವೇಗಿ ಮೊಹಮ್ಮದ್ ಶಮಿ ಆಡುವ ಸ್ಥಿತಿಯಲ್ಲಿರಲಿಲ್ಲ. ಹೀಗಿದ್ದರೂ ಧೋನಿ ಒತ್ತಾಯದ ಮೇರೆಗೆ ಶಮಿ ಕಣಕ್ಕೆ ಇಳಿದಿದ್ದರು ಎನ್ನುವುದನ್ನು ಸ್ವತಃ ಮೊಹಮ್ಮದ್ ಶಮಿ ಬಹಿರಂಗಪಡಿಸಿದ್ದಾರೆ.
ಇನ್ಸಾಗ್ರಾಂನಲ್ಲಿ ಇರ್ಫಾನ್ ಪಠಾಣ್ ಜತೆಗಿನ ಚಾಟ್‌ನಲ್ಲಿ ಶಮಿ ಈ ಮಾಹಿತಿ ನೀಡಿದ್ದಾರೆ. ಪಂದ್ಯದ ದಿನದಂದೇ ಗಂಭೀರ ಮೊಣಕಾಲು ಗಾಯವಿತ್ತು. ನೋವಿನ ಬಗ್ಗೆ ತಂಡದ ಸಹ ಆಟಗಾರರೊಂದಿಗೆ ಹೇಳಿಕೊಂಡಿದ್ದೆ, ತಂಡದ ಆಡಳಿತ ಮಂಡಳಿ ಜತೆಗೂ ಈ ಬಗ್ಗೆ ಮಾತನಾಡಿದ್ದೆ, ಅವರು ಕೂಡ ಆಡದಿರಲು ನನಗೆ ಒಪ್ಪಿಗೆ ನೀಡಿದ್ದರು.
ಆದರೆ ಆಸೀಸ್ ವಿರುದ್ಧದ ಪಂದ್ಯದಲ್ಲಿಮತ್ತೋರ್ವ ಬೌಲರ್ ಆಡಿಸಲು ಧೋನಿ ಭಾಯ್‌ಗೆ ಇಷ್ಟವಿರಲಿಲ್ಲ. ಹೊಸ ಬೌಲರ್ ನೊಂದಿಗೆ ಆಡಲು ಸಾಧ್ಯವಿಲ್ಲ, ನೀನೆ ಆಡಬೇಕು ಎಂದು ಧೈರ್ಯ ತುಂಬಿದ್ದರು ಎಂದು ಶಮಿ ನೆನಪಿಸಿಕೊಂಡಿದ್ದಾರೆ.
ವೈದ್ಯರು ಮೊಣಕಾಲಿನಿಂದ ವಸರುತ್ತಿದ್ದ ದ್ರವವನ್ನು ಹೊರತೆಗೆದರು, ಮೂರು ನೋವು ನಿವಾರಕ ಚುಚ್ಚುಮದ್ದನ್ನು ಹಾಕಿಕೊಂಡು ಕಣಕ್ಕೆ ಇಳಿದೆ. ನಡೆಯಲಾಗದ ಸ್ಥಿತಿಯಲ್ಲಿದ್ದ ನನ್ನ ಬಳಿ ಬಂಧು ಧೋನಿ “ನಿನ್ನ ಮೇಲೆ ನಂಬಿಕೆ ಇದೆ, 60 ರನ್ ಒಳಗೆ ರನ್ ನೀಡಬೇಕು’ ಎಂದು ಹೇಳಿದ್ದರು ಎಂದು ಶಮಿ ನೆನಪಿಸಿಕೊಂಡರು.
2015ರ ವಿಶ್ವಕಪ್ ನಲ್ಲಿ ಶಮಿ ಒಟ್ಟಾರೆ 17 ವಿಕೆಟ್ ಕಬಳಿಸಿದ್ಧಾರೆ. ಉಮೇಶ್ ಯಾದವ್ ಬಳಿಕ ಭಾರತದ ಪರ ಹೆಚ್ಚು ವಿಕೆಟ್ ಸಾಧನೆ ಮಾಡಿದ್ದರು.