ಹೊಸದಿಲ್ಲಿ : ಆತಿಥೇಯ ಇಂಗ್ಲಂಡ್ ಎದುರಿನ 3 ಒನ್ ಡೇ ಪಂದ್ಯಗಳ ಸರಣಿಯನ್ನು 1-2 ಅಂತರದಲ್ಲಿ ಸೋತ ಒಂದು ದಿನದ ತರುವಾಯ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಐದು ಪಂದ್ಯಗಳ ಸರಣಿಯ ಮೊದಲ ಮೂರು ಟೆಸ್ಟ್ ಪಂದ್ಯಗಳಿಗೆ ಭಾರತೀಯ ಕ್ರಿಕೆಟ್ ತಂಡವನ್ನು ಇಂದು ಬುಧವಾರ ಪ್ರಕಟಿಸಿದೆ.
ಟೆಸ್ಟ್ ತಂಡಕ್ಕೆ ವೇಗಿ ಮೊಹಮ್ಮದ್ ಶಮಿ ಅವರನ್ನು ಸೇರಿಸಿಕೊಳ್ಳಲಾಗಿದೆ. ಭುವನೇಶ್ವರ್ ಕುಮಾರ್ ಅವರ ಫಿಟ್‌ನೆಸ್ ಪರಿಶೀಲನಗೆ ಒಳಪಡಲಿದೆ. ರಿಷಬ್ ಪಂತ್ ಮತ್ತು ಶಾರ್ದೂಲ್ ಠಾಕೂರ್ ಗೆ ಅವಕಾಶ ನೀಡಲಾಗಿದೆ.
18 ಸದಸ್ಯರ ತಂಡಕ್ಕೆ ಸೇರ್ಪಡೆಗೊಂಡಿರುವ ವೇಗಿ ಜಸ್‌ಪ್ರೀತ್ ಬುಮ್ರಾ ಅವರು ಎರಡನೇ ಟೆಸ್ಟ್ ನೊಂದಿಗೆ ಫಿಟ್‌ನೆಸ್ ಆಧಾರದಲ್ಲಿ ಆಯ್ಕೆಗೆ ಲಭ್ಯರಿರುತ್ತಾರೆ.
ಟೆಸ್ಟ್ ತಂಡದಲ್ಲಿ ಇಬ್ಬರು ವಿಕೆಟ್ ಕೀಪರ್ ಗಳು ಇರುತ್ತಾರೆ. ಅವರೆಂದರೆ ದಿನೇಶ್ ಕಾರ್ತಿಕ್ ಮತ್ತು ರಿಷಬ್ ಪಂತ್. ಮೂವರು ಸ್ಪಿನ್ನರ್‌ಗಳು ಇರುತ್ತಾರೆ: ಆರ್ ಅಶ್ವಿನ್, ರವೀಂದ್ರ ಜಡೇಜ ಮತ್ತು ಕುಲದೀಪ್ ಯಾದವ್. ಯಜುವೇಂದ್ರ ಚಹಾಲ್ ಗೆ ಸ್ಥಾನ ದೊರಕಿಲ್ಲ.
ಮೊದಲ ಮೂರು ಟೆಸ್ಟ್ ಪಂದ್ಯಗಳ ಭಾರತೀಯ ತಂಡ ಹೀಗಿದೆ : ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಕೆ ಎಲ್ ರಾಹುಲ್, ಮುರಳಿ ವಿಜಯ್ , ಚೇತೇಶ್ವರ ಪೂಜಾರ, ಅಜಿಂಕ್ಯ ರಹಾಣೆ (ಉಪ ನಾಯಕ), ಕರುಣ್ ನಾಯರ್ ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೆಜ, ಕುಲದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್‌ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್.
ಪಂದ್ಯಗಳ ವೇಳಾ ಪಟ್ಟಿ :
ಮೊದಲ ಟೆಸ್ಟ್ : ದಿನಾಂಕ : ಆಗಸ್ಟ್ 1 – 5, ಸಮಯ : 15.30 (ಐಎಸ್‌ಟಿ), ಸ್ಥಳ : ಎಜ್‌ಬಾಸ್ಟನ್, ಬರ್ಮಿಂಗಂ;
ಎರಡನೇ ಟೆಸ್ಟ್ : ದಿನಾಂಕ : ಆಗಸ್ಟ್ 9 – 13, ಸಮಯ : 15.30 (ಐಎಸ್‌ಟಿ), ಸ್ಥಳ : ಲಾರ್ಡ್ಸ್, ಲಂಡನ್.
ಮೂರನೇ ಟೆಸ್ಟ್ : ದಿನಾಂಕ : ಆಗಸ್ಟ್ 18 – 22, ಸಮಯ : 15.30 (ಐಎಸ್‌ಟಿ), ಸ್ಥಳ : ಟ್ರೆಂಟ್ ಬ್ರಿಜ್, ನಾಟಿಂಗಂ.