ಕೊಪ್ಪಳ: ತಾಲೂಕಿನ ಮಹ್ಮದ ನಗರದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮದಡಿ ಕೊಪ್ಪಳ ತಹಶೀಲ್ದಾರ್ ಅಮರೇಶ ಬಿರಾದಾರ್ ಅವರು ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರ ಸಮಸ್ಯೆ ಆಲಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಹನುಮಂತ ಕಾರ್ಯಕ್ರಮ ಉದ್ಘಾಟಿಸಿದರೆ, ಮುಖಂಡರಾದ ರೂಪ್ಲಾನಾಯ್ಕ, ಹನುಮಂತರೆಡ್ಡಿ, ಮಾಜಿ ಅಧ್ಯಕ್ಷ ಟಿ. ಜನಾರ್ದನ ಅವರು, ಗ್ರಾಮದ ಹಲವು ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಗ್ರಾಮದಲ್ಲಿ ಮೂರು ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅವುಗಳಲ್ಲಿ ನೀರು ಬರುತ್ತಿಲ್ಲ. ಜೆಜೆಎಂ ಯೋಜನೆಯಡಿ 50 ಕುಟುಂಬಕ್ಕೆ 10 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಿರ್ವಹಣೆ ಮಾಡಿದ್ದು, ಇಲ್ಲಿಯವರಿಗೆ ನೀರು ಪೂರೈಕೆಯಾಗಿಲ್ಲ. 200ಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವ ಗ್ರಾಮದಲ್ಲಿ ಗಾಂಠಾಣವಿಲ್ಲ. ಗ್ರಾಪಂನಲ್ಲಿ ಫಾರಂ ನಂಬರ್ 9, 11ಎ ಕೊಡುತ್ತಿಲ್ಲ ಎಂದು ತಹಶೀಲ್ದಾರ್ ಗಮನಕ್ಕೆ ತಂದರು.
ಜೊತೆಗೆ ಶಾಲೆ, ಸ್ಮಶಾನ, ಖಬರಸ್ತಾನ್ ಗಳ ಡಾಕಿಮೆಂಟೇಶನ್ ಮಾಡಿಕೊಡುವುದು. ಮಹ್ಮದ್ ನಗರ ಸರ್ವೇ ನಂಬರ್‌ನಲ್ಲಿ ಬರುವ ಹೊಲಗದ್ದೆಗಳ ಸರ್ವೆ ನಂಬರ್ ತಿದ್ದುಪಡಿ ಮಾಡಬೇಕಿದೆ. ಇದರಿಂದ ರೈತರು ಸೌಲಭ್ಯ ವಂಚಿತರಾಗಿದ್ದಾರೆ. ಈ ಗ್ರಾಮಕ್ಕೆ ಸರ್ಕಾರಿ ಬಸ್ ಸೌಲಭ್ಯವಿಲ್ಲ. ಗ್ರಾಪಂನಲ್ಲಿ ನರೇಗಾ ಕೆಲಸ ಕೊಡುತ್ತಿಲ್ಲ. ಕಳೆದ ವರ್ಷದ ಬಾಕಿ ಹಣ ಬಂದಿಲ್ಲ ಎಂದು ಅಧಿಕಾರಿಗಳ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ತಹಶೀಲ್ದಾರ್ ಅಮರೇಶ ಬಿರಾದಾರ್, ಆದ್ಯತೆ ಮೇರೆಗೆ ಪ್ರತಿಯೊಂದು ಸಮಸ್ಯೆ ಬಗೆ ಹರಿಸಲಾಗುವುದು.
ಗ್ರಾಮದ ಜನರಿಗಾಗಿ ವಿವಿಧ ಇಲಾಖೆಗಳ ಕೌಂಟರ್ ಆರಂಭಿಸಲಾಗಿದೆ. ಅಲ್ಲಿ ಜನರು ತಮ್ಮ ಸಮಸ್ಯೆ ಕುರಿತಂತೆ ಅರ್ಜಿ ಕೊಡಬಹುದು ಎಂದರು. ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು. ಗ್ರಾಮಸ್ಥರು ತಮಗೆ ಸಂಬಂಧಿ ಸಿದ ಅರ್ಜಿಗಳನ್ನು ವಿವಿಧ ಕೌಂಟರ್ ನಲ್ಲಿ ಸಲ್ಲಿಸಿ ಪರಿಹಾರದ ನಿರೀಕ್ಷೆಯಲ್ಲಿದ್ದರು. ಕೋವಿಡ್ ಲಸಿಕೆ ಹಾಕಲು ಹಿಟ್ನಾಳ್ ಆರೋಗ್ಯ ಕೇಂದ್ರಕ್ಕೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ಎಪಿಎಂಸಿ ಅಧ್ಯಕ್ಷ ವಿಶ್ವನಾಥ ರಾಜು, ಜಿಪಂ ಮಾಜಿ ಅಧ್ಯಕ್ಷ ಟಿ. ಜನರ್ದನ, ಗ್ರಾಪಂ ಅಧ್ಯಕ್ಷೆ ರೇಖಾ ಬಸವರಾಜ, ಉಪಾಧ್ಯಕ್ಷ ಸಂತೋಷಬಾಯಿ, ಸದಸ್ಯರಾದ ವೆಂಕಟೇಶ, ಅಂದಿಗಾಲಪ್ಪ, ಮರಿಯಮ್ಮ, ಹುಲಿಗೆಮ್ಮ, ಯಮನೂರಪ್ಪ, ಮುಖಂಡರಾದ ರೂಪ್ಲಾ ನಾಯ್ಕ, ಹನುಮಂತರೆಡ್ಡಿ, ಸಿದ್ಧಿಬಾಷ ಗೊರೆಬಾಳ, ಶಿವಕುಮಾರ್, ಶಿರಸ್ತೇದಾರ್ ರೇಖಾ ದಿಕ್ಷೀತ್, ಬಿಇಒ ಉಮೇಶ ಪೂಜಾರ, ಎಇಇ ಭರತ್ ನಾಯಕ ಸೇರಿದಂತೆ ಇತರರು ಪಾಲ್ಗೊಂಡಿದ್ದರು.