Advertisement

ಮೊಗೇರಾ ಜಾತಿ ಪ್ರಮಾಣಪತ್ರ ವಿವಾದ ಸರ್ಕಾರದಿಂದ ಹಳೇ ಸುತ್ತೋಲೆ ವಾಪಸ್‌

11:26 PM Nov 04, 2019 | Lakshmi GovindaRaju |

ಬೆಂಗಳೂರು: ಮೊಗೇರಾ ಜನಾಂಗದವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವ ಕುರಿತು 2018ರಲ್ಲಿ ಹೊರಡಿಸ ಲಾಗಿದ್ದ ಸುತ್ತೋಲೆಯನ್ನು ಹಿಂಪಡೆಯಲಾಗಿದೆ ಎಂದು ರಾಜ್ಯ ಸರ್ಕಾರ ಸೋಮವಾರ ಹೈಕೋರ್ಟ್‌ಗೆ ತಿಳಿಸಿದೆ. ಈ ಕುರಿತು ಉತ್ತರ ಕನ್ನಡ ಜಿಲ್ಲಾ ಮೊಗೇರ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ಹಾಗೂ ನ್ಯಾ. ಎಸ್‌.ಆರ್‌. ಕೃಷ್ಣಕುಮಾರ್‌ ಅವರಿದ್ದ ವಿಭಾ ಗೀಯ ನ್ಯಾಯಪೀಠಕ್ಕೆ ಸರ್ಕಾರ ಈ ಮಾಹಿತಿ ನೀಡಿತು.

Advertisement

2018ರಲ್ಲಿ ಹೊರಡಿಸಿದ್ದ ಸುತ್ತೋಲೆಯಿಂದ ಕೆಲವು ಗೊಂದಲ ಎದುರಾಗಿದ್ದ ಹಿನ್ನೆಲೆಯಲ್ಲಿ ಹಿಂಪಡೆಯಲಾಗಿದೆ. ಅಲ್ಲದೇ “ರಾಷ್ಟ್ರಪತಿಗಳ ಅಧಿಸೂಚನೆಯಂತೆ ನೋಂದಣಿ 78ರಲ್ಲಿ ಉಲ್ಲೇಖವಾಗಿರುವ ಮೊಗೇರಾ ಜನಾಂಗಕ್ಕೆ ಎಸ್‌ಸಿ ಪ್ರಮಾಣಪತ್ರ ನೀಡಲಾಗುವುದು. ಆದರೆ ಸ್ಥಳೀಯ ತಹಶೀಲ್ದಾರ್‌, ಉಪವಿಭಾಗಾಧಿ ಕಾರಿ ಮತ್ತು ಜಿಲ್ಲಾ ಜಾತಿ ಪ್ರಮಾಣಪತ್ರ ಪರಿಶೀಲನೆ ಸಮಿತಿ ಅಥವಾ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಂತರ ಜಾತಿ ಪ್ರಮಾಣಪತ್ರ ವಿತರಿಸುತ್ತಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ರಾಜಶ್ರೀ ಎಚ್‌. ಕುಲಕರ್ಣಿ ಆದೇಶ ಹೊರಡಿಸಿದ್ದಾರೆ.

ಒಂದು ವೇಳೆ ಸರ್ಕಾರದ ನಿರ್ದೇಶನ ಉಲ್ಲಂಘಸಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹಳೆಯ ಸುತ್ತೋಲೆಯನ್ನು ವಾಪಸ್‌ ಪಡೆದು ಹೊಸ ಆದೇಶ ಹೊರಡಿಸಿರುವ ಸರ್ಕಾರದ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ ಅರ್ಜಿಯನ್ನು ವಿಲೇವಾರಿ ಮಾಡಿತು. ಸರ್ಕಾರ 2018ರ ಮೇ 31ರಂದು ಹೊರಡಿಸಿದ್ದ ಆದೇಶ ಗೊಂದಲದಿಂದ ಕೂಡಿದೆ.

ಮೊಗೇರಾ ಜಾತಿ ಮೀಸಲಿನಲ್ಲಿ ತಾರತಮ್ಯವಾಗುತ್ತಿದ್ದು, ಕೆಲವರಿಗೆ ಎಸ್‌ಸಿ, ಇನ್ನು ಕೆಲವರಿಗೆ ಹಿಂದುಳಿದ ವರ್ಗದವ ರೆಂದು ಪ್ರಮಾಣ ಪತ್ರ ನೀಡಲಾಗುತ್ತಿದೆ. ಅದು ವಿವಾದಕ್ಕೆ ಕಾರಣವಾಗಿದ್ದು, ಕಾರವಾರದ ಮೊಗೆರಾ ಸಮುದಾಯಕ್ಕೆ ಸಮಸ್ಯೆ ಎದುರಿಸುವಂತಾಗಿದೆ. ಕೆಲವೆಡೆ ಎಸ್‌ಸಿ ಜಾತಿ ಪ್ರಮಾಣಪತ್ರ ನಕಲಿ ಎಂದು ಕೇಸ್‌ ದಾಖಲಿಸಲಾಗಿತ್ತು. ಇದರಿಂದಾಗಿ ಹಲವರು ತೊಂದರೆಗೆ ಒಳಗಾಗಿದ್ದರು. ಹೀಗಾಗಿ, ಸುತ್ತೋಲೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next