ಬೆಂಗಳೂರು: ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಿಲಾನ್ಯಾಸಕ್ಕಾಗಿ ಮಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ಮತ್ತೆ “ಅಚ್ಛೆ ದಿನ ಯಾವಾಗ” ಎಂಬ ಪ್ರಶ್ನೆ ಮುಂದಿಟ್ಟಿದೆ.
ಕಳೆದ ಬಾರಿ ಬೆಂಗಳೂರು ಹಾಗೂ ಮೈಸೂರಿಗೆ ಭೇಟಿ ನೀಡಿದ್ದ ಪ್ರಧಾನಿಗೆ ಕಾಂಗ್ರೆಸ್ ಇದೇ ಪ್ರಶ್ನೆ ಮುಂದಿಟ್ಟಿತ್ತು. ಸರಣಿ ಟ್ವೀಟ್ ಮೂಲಕ ವ್ಯಂಗ್ಯವಾಡಿತ್ತು. ಈ ಬಾರಿಯೂ ಅದೇ ತಂತ್ರ ಬಳಸುವ ಮೂಲಕ ಬಿಜೆಪಿಗೆ ಇರಿಸುಮುರಿಸುಂಟು ಮಾಡಿದೆ.
ರಾಷ್ಟ್ರ ರಾಜಕಾರಣದಲ್ಲಿ ಹೊಸ ಧ್ರುವೀಕರಣ ಸೃಷ್ಟಿಯಾಗಿದೆ. ಲಂಚದ ಆರೋಪಿಗಳನ್ನು ರಕ್ಷಿಸಲು ಕೆಲವು ರಾಜಕೀಯ ಗುಂಪುಗಳು ಬಹಿರಂಗವಾಗಿಯೇ ಪ್ರಯತ್ನ ನಡೆಸುತ್ತಿವೆ ಎಂದು ಪ್ರಧಾನಿ ನೀಡಿರುವ ಹೇಳಿಕೆಯನ್ನೇ ಅಸ್ತ್ರವಾಗಿ ಬಳಸಿರುವ ಕಾಂಗ್ರೆಸ್ 40 % ಕಮಿಷನ್ ಆರೋಪದ ಬಗ್ಗೆ ಮೌನವೇಕೆ? ಎಂದು ಪ್ರಶ್ನೆ ಮಾಡಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ರೈತರಿಗೆ ಎಂಎಸ್ ಪಿ ಲೆಕ್ಕದಲ್ಲೇ ಮೋಸವಾಗುತ್ತಿದೆ. ಎಂಎಸ್ ಪಿ ದರದಲ್ಲಿ ಬೆಲೆ ಖರೀದಿಸುವವರೇ ಇಲ್ಲ. ರೈತರಿಗೆ ಅಚ್ಛೇ ದಿನ್ ಯಾವಾಗ ಮೋದಿಯವರೇ? ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ:ಲೈಂಗಿಕ ಕಿರುಕುಳ ಕೇಸ್: ಮುರುಘಾ ಶರಣರಿಗೆ 14 ದಿನ ನ್ಯಾಯಾಂಗ ಬಂಧನ
2022ಕ್ಕೆ ಎಲ್ಲರಿಗೂ ವಿದ್ಯುತ್ ಎನ್ನುತ್ತೀರಿ. ಆದರೆ ದಿನಕ್ಕೆ ಹತ್ತು ಗಂಟೆ ಕನಿಷ್ಠ ವಿದ್ಯುತ್ ಕೂಡಾ ಇಲ್ಲ. ಮಹಿಳೆಯರು ಮಸಾಲೆ ಅರೆಯಲು ವಿದ್ಯುತ್ ಕಚೇರಿಗೆ ಹೋಗಿದ್ದರಂತೆ. ಇದಕ್ಕಾಗಿಯೇ ಜನರಿಗೆ ಕ್ಯಾಂಡಲ್ ಹಚ್ಚುವಂತೆ ಕರೆ ನೀಡಿದರೇ ಮೋದಿಯವರೇ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.