ಜೆರುಸಲೇಂ: ಮುಂದಿನ ತಿಂಗಳ ನಾಲ್ಕರಂದು ಪ್ರಧಾನಿ ಮೋದಿ ಅವರು ಇಸ್ರೇಲ್‌ಗೆ ಭೇಟಿ ನೀಡಲಿದ್ದು, ಅವರಿಗೆ ರತ್ನಗಂಬಳಿ ಹಾಸಿ ಭವ್ಯ ಸ್ವಾಗತ ನೀಡಲು ಆ ದೇಶ ಭರ್ಜರಿ ತಯಾರಿ ನಡೆಸಿದೆ. ಮೋದಿ ಭೇಟಿಯನ್ನು ಅಪರೂಪದಲ್ಲಿ ಅಪರೂಪ ಎಂದು ಪರಿಗಣಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಅವರು, ಆ ಘಳಿಗೆಯನ್ನು ಸದಾಕಾಲ ನೆನಪಿನಲ್ಲಿ ಉಳಿಯುವಂತೆ ಮಾಡಲು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಜು.4ರಂದು ನೇತಾನ್ಯಾಹು ಅವರೇ ಖುದ್ದು ಬೆನ್ ಗುರಿಯನ್ ಏರ್‌ಪೋರ್ಟ್‌ನಲ್ಲಿ ಉಪಸ್ಥಿತರಿದ್ದು, ಪ್ರಧಾನಿ ಮೋದಿಯವರನ್ನು ಸ್ವಾಗತಿಸಲಿದ್ದಾರೆ. ಅದೇ ಸಂದರ್ಭದಲ್ಲಿ ಭಾರತದ ಮೂಲದ ಇಸ್ರೇಲಿ ಹಾಡುಗರ ಲಿಯೋರಾ ಇಟ್‌ಝಕ್ ಅವರು ಎರಡೂ ದೇಶಗಳ ರಾಷ್ಟ್ರಗೀತೆ ಹಾಡಲಿದ್ದಾರೆ. ಮೋದಿ ಗೌರವಾರ್ಥ ಭರ್ಜರಿ ಔತಣಕೂಟವನ್ನೂ ಏರ್ಪಡಿಸಲಾಗಿದೆ. 5ರಂದು ಟೆಲ್ ಅವಿವ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ. ಇದೇ ವೇಳೆ, ಪ್ರಸಕ್ತ ವರ್ಷಾಂತ್ಯದಲ್ಲಿ ನೇತಾನ್ಯಾಹು ಅವರೂ ಭಾರತಕ್ಕೆ ಭೇಟಿ ನೀಡಲಿದ್ದಾರೆ.