ಉಪ್ಪಿನಂಗಡಿ: ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಮೇ 30ರಂದು 16 ರಿಕ್ಷಾ ಚಾಲಕರು 5 ಕಿ.ಮೀ. ವ್ಯಾಪ್ತಿಯಲ್ಲಿ ಉಚಿತ ಸೇವೆ ನೀಡಿದರು. ಶೆಣೈ ನರ್ಸಿಂಗ್ ಹೋಮ್ ಬಳಿ ಪಾರ್ಕ್ ಮಾಡುವ ಆಟೋ ರಿಕ್ಷಾದವರು ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವಠಾರದಲ್ಲಿ ಬೆಳಗ್ಗೆ ಸೇರಿದ ಆಟೋ ಚಾಲಕ – ಮಾಲಕರು ಉಚಿತ ಸೇವೆಗೆ ಚಾಲನೆ ನೀಡಿದರು.
ಐದು ಕಿ.ಮೀ. ದೂರಕ್ಕೆ 60 ರೂ. ಬಾಡಿಗೆ ಇದ್ದು, ಗುರುವಾರ ಉಚಿತವಾಗಿ ಪ್ರಯಾಣಿಕರನ್ನು ಕರೆದೊಯ್ದಿದ್ದಾರೆ. ಉಚಿತ ಸೇವೆ ನೀಡಿದ ಎಲ್ಲ ರಿಕ್ಷಾಗಳ ಮೇಲೂ ‘ಮೋದಿಜಿಯವರ ಪ್ರಮಾಣ ವಚನದ ಪ್ರಯುಕ್ತ ಇಂದು 5 ಕಿ.ಮೀ. ವರೆಗೆ ಉಚಿತ ಪ್ರಯಾಣ’ ಎಂದು ಫಲಕ ಅಳವಡಿಸಿದ್ದರು.
ಒಂದು ಕಡೆ ಬಾಡಿಗೆಗೆ ಹೋದರೆ, ವಾಪಸ್ ಬರುವಾಗ ದಾರಿಯಲ್ಲಿ ಸಿಕ್ಕಿದವರನ್ನು ಹತ್ತಿಸಿಕೊಂಡು ಬಂದಿದ್ದಾರೆ. ಅವರಿಂದಲೂ ಹಣ ಪಡೆದಿಲ್ಲ. ಇದೆಲ್ಲ ಮೋದಿಯವರ ಮೇಲಿನ ಅಭಿಮಾನದಿಂದ ಎಂದು ಚಾಲಕ ಶೀತಲ್ ಹಾಗೂ ಇತರ ಚಾಲಕರು ತಿಳಿಸಿದ್ದಾರೆ.
ವಿಎಚ್ಪಿ, ಬಜರಂಗ ದಳದಿಂದ ರಕ್ತದಾನ
ಸುಳ್ಯ: ನರೇಂದ್ರ ಮೋದಿ ಅವರು ಗುರುವಾರ ಪ್ರಧಾನ ಮಂತ್ರಿ ಯಾಗಿ ಪ್ರಮಾಣವಚನ ಸ್ವೀಕರಿಸುವ ಸಲುವಾಗಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಸುಳ್ಯ ಪ್ರಖಂಡದ ವತಿಯಿಂದ ರಕ್ತದಾನ ಶಿಬಿರ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ನಡೆಯಿತು.
ವಿಹಿಂಪ, ಬಜರಂಗ ದಳ ಜಿಲ್ಲಾ ಸಹ ಸಂಯೋಜಕ್ ಲತೀಶ್ ಗುಂಡ್ಯ, ವಿಹಿಂಪ ಸುಳ್ಯ ಪ್ರಖಂಡ ಅಧ್ಯಕ್ಷ ಮಜಿಗುಂಡಿ ಗಣಪತಿ ಭಟ್, ನಗರ ಅಧ್ಯಕ್ಷ ತಿಮ್ಮಪ್ಪ ನಾವೂರು, ಬಜರಂಗ ದಳ ಸುಳ್ಯ ಪ್ರಖಂಡ ಸಹಸಂಯೋಜಕ ವಿಘ್ನೕಶ್ ಆಚಾರ್ಯ, ನಗರ ಸಂಯೋ ಜಕ ದೀಕ್ಷಿತ್ ಪಾನತ್ತಿಲ, ಸಾಪ್ತಾಹಿಕ ಮಿಲನ್ ರಕ್ಷಿತ್ ಐವರ್ನಾಡು, ವಿದ್ಯಾರ್ಥಿ ಪ್ರಮುಖ್ ನಿಕೇಶ್ ಉಬರಡ್ಕ, ಬಜರಂಗ ದಳ ನಗರ ಕಾರ್ಯದರ್ಶಿ ಪ್ರವೀಣ ಜಯನಗರ ಉಪಸ್ಥಿತರಿದ್ದರು. ಕೆವಿಜಿ ಮೆಡಿಕಲ್ ಕಾಲೇಜು ಆಸ್ಪತ್ರೆ ರಕ್ತನಿಧಿ ಅಧಿಕಾರಿ ಮಹಂತದೇವರು, ಸಿಬಂದಿ ಗೋಪಾಲಕೃಷ್ಣ, ಚಂದ್ರಶೇಖರ, ಶಶಿಧರ ಹಾಗು ಪ್ರಕಾಶ್ ಯಾದವ್ ಸಹಕರಿಸಿದರು.