Advertisement

ಹೊಸ ದಿಕ್ಕು ತೋರಿದ ಮೋದಿ: ನಳಿನ್‌

01:20 AM Sep 18, 2020 | mahesh |

ಮಂಗಳೂರು: ರಾಜಕಾರಣ ಹಾಗೂ ಆಡಳಿತಕ್ಕೆ ಹೊಸ ದಿಕ್ಕು-ದೃಷ್ಟಿಯನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿ ದೇಶ ಕಂಡ ಓರ್ವ ಆದರ್ಶ ನಾಯಕ ಎಂದು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದ್ದಾರೆ.

Advertisement

ಪ್ರಧಾನಿ ಮೋದಿ ಅವರ 70ನೇ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಹಾಗೂ ವಿವಿಧ ಮೋರ್ಚಾಗಳ ವತಿಯಿಂದ ನಡೆಯುವ ಸೇವಾ ಸಪ್ತಾಹವನ್ನು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ರಾಜಕಾರಣದ ಬಗ್ಗೆ ಜನತೆಯಲ್ಲಿ ನಕಾರಾತ್ಮಕ ಭಾವನೆ ಉಂಟಾಗಿದ್ದ, ದೇಶದ ಆಡಳಿತ ವ್ಯವಸ್ಥೆ ಜಡ್ಡುಗಟ್ಟಿದ್ದ ಕಾಲಘಟ್ಟದಲ್ಲಿ ಪ್ರಧಾನಿಯಾಗಿ ದೇಶದ ಆಡಳಿತ ಚುಕ್ಕಾಣಿಯನ್ನು ಹಿಡಿದ ಮೋದಿಯವರು ವ್ಯಕ್ತಿಗಿಂತ ಪಕ್ಷ ಮುಖ್ಯ; ಪಕ್ಷಕ್ಕಿಂತ ದೇಶ ಮುಖ್ಯ ಎಂಬುದನ್ನು ತೋರಿಸಿಕೊಟ್ಟವರು. ಆ ಮೂಲಕ ದೇಶವನ್ನು ವಿಶ್ವದಲ್ಲಿ ಎತ್ತರದ ಸ್ಥಾನಕ್ಕೇರಿಸಿದ ಧೀಮಂತ ನಾಯಕ ಎಂದು ಬಣ್ಣಿಸಿದರು.

ಭ್ರಷ್ಟಾಚಾರ, ಡ್ರಗ್ಸ್‌, ಪ್ಲಾಸ್ಟಿಕ್‌ ಮುಕ್ತ ಜಿಲ್ಲೆ
ದ.ಕ. ಜಿಲ್ಲೆಯನ್ನು ಭ್ರಷ್ಟಾಚಾರ,ಡ್ರಗ್ಸ್‌ ಹಾಗೂ ಪ್ಲಾಸ್ಟಿಕ್‌ ಮುಕ್ತ ಜಿಲ್ಲೆಯಾಗಿಸುವ ಸಂಕಲ್ಪ ತೊಟ್ಟಿದ್ದು ಈ ನಿಟ್ಟಿನಲ್ಲಿ ಪಕ್ಷದ ವತಿಯಿಂದ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸರಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ದೂರು ಸ್ವೀಕರಿಸಲು ಪಕ್ಷದ ಎಲ್ಲ ಶಾಸಕರ ಕಚೇರಿಗಳಲ್ಲಿ ಪ್ರತ್ಯೇಕ ವಿಭಾಗವೊಂದನ್ನು ತೆರೆಯುವಂತೆ ಸೂಚಿಸಿದ್ದೇನೆ. ಪಕ್ಷದಲ್ಲಿಯೂ ಕಾರ್ಯಕರ್ತರು ಯಾರಾದರೂ ಅಕ್ರಮ, ಭ್ರಷ್ಟಾಚಾರದಲ್ಲಿ ನಿರತರಾಗಿರುವುದು ಸಾಬೀತಾದರೆ ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಕ್ರಮ ಮರಳುಗಾರಿಕೆ ವಿರುದ್ಧವೂ ಕಠಿನ ಕ್ರಮಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸೂಚಿಸಲಾಗಿದೆ. ಜಿಲ್ಲೆಯನ್ನು ಪ್ಲಾಸ್ಟಿಕ್‌ ಮುಕ್ತವಾಗಿಸುವುದು ಬಿಜೆಪಿಯ ಸಂಕಲ್ಪವಾಗಿದ್ದು, ಫ್ಲೆಕ್ಸ್‌ಗಳಿಗೆ ಅನುಮತಿ ನೀಡದಂತೆ ಜಿಲ್ಲಾಧಿಕಾರಿಯವರನ್ನು ಕೋರಲಾಗಿದೆ ಎಂದು ಹೇಳಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಎಂ. ಅವರು, ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆ ಸಂಭ್ರಮವನ್ನು ಜಿಲ್ಲೆಯಲ್ಲಿ ವಿವಿಧ ಸೇವಾ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತಿದೆ ಎಂದರು.

ಶಾಸಕರಾದ ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ, ಮೇಯರ್‌ ದಿವಾಕರ ಪಾಂಡೇಶ್ವರ, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಧೀರ್‌ ಶೆಟ್ಟಿ, ಯುವ ಮೋರ್ಚಾ ಪ್ರಭಾರಿ ಸತೀಶ್‌ ಕುಂಪಲ, ರಾಜ್ಯ ಉಪಾಧ್ಯಕ್ಷ ಧೀರಜ್‌, ವೆನ್ಲಾಕ್‌ ರಕ್ತನಿಧಿಯ ಮುಖ್ಯಸœ ಡಾ| ಶರತ್‌ ಕುಮಾರ್‌ ಉಪಸ್ಥಿತರಿದ್ದರು. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಗುರುದತ್‌ ಸ್ವಾಗತಿಸಿದರು. ಸುದರ್ಶನ್‌ ಬಜ ನಿರೂಪಿಸಿದರು.

ಚರ್ಚೆಗೆ ಬನ್ನಿ: ಕಾಂಗ್ರೆಸ್‌ಗೆ ಸವಾಲು
ಕಾಂಗ್ರೆಸ್‌ ನಾಯಕರು ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ, ಡ್ರಗ್ಸ್‌ ಹಾಗೂ ಕಾನೂನು ಸುವ್ಯವಸ್ಥೆ ಕುರಿತಂತೆ ಆಧಾರರಹಿತ ವೃಥಾರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಆಡಳಿತ ಕಾಲದಲ್ಲಿ ಜಿಲ್ಲೆಯಲ್ಲಿ ಅಕ್ರಮ ಮರಳು ಮಾಫಿಯಾ ಯಾವ ರೀತಿ ಇತ್ತು, ಸರಕಾರಿ ಜಾಗದಲ್ಲಿ ಎಲ್ಲೆಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು ಹಾಗೂ ಅದರಲ್ಲಿ ಯಾರೆಲ್ಲಾ ಇದ್ದರು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಆಗ ಯಾವ ರೀತಿ ಇತ್ತು ಮತ್ತು ಈಗ ಹೇಗಿದೆ, ಎಷ್ಟು ಹತ್ಯೆ-ಹಲ್ಲೆಗಳು ನಡೆದಿದ್ದವು, ಡ್ರಗ್ಸ್‌ ಜಾಲದಲ್ಲಿ ಯಾರೆಲ್ಲಾ ಹೆಸರು ಕೇಳಿಬಂದಿತ್ತು ಮತ್ತು ಎಷ್ಟು ಮಂದಿ ಸಿಕ್ಕಿಬಿದ್ದಿದ್ದರು, ಎಷ್ಟು ಕೋಮು ಸಂಘರ್ಷಗಳು ನಡೆದಿದ್ದವು ಎಂಬ ಬಗ್ಗೆ ಅಂಕಿ-ಅಂಶ ಸಮೇತ ಪಟ್ಟಿ ನೀಡಲು ನಾವು ಸಿದ್ಧರಿದ್ದೇವೆ. ಹೀಗಿರುವಾಗ ಕಾಂಗ್ರೆಸ್‌ ನಾಯಕರು ಬಹಿರಂಗ ಚರ್ಚೆಗೆ ಬರಲಿ ಎಂದು ನಳಿನ್‌ ಕುಮಾರ್‌ ಕಟೀಲು ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next