Advertisement

ಸ್ಪೇನ್‌ ಜತೆ ಭಾರತ 7 ಒಪ್ಪಂದ

03:10 AM Jun 01, 2017 | Team Udayavani |

ಮ್ಯಾಡ್ರಿಡ್‌: ಜರ್ಮನಿ ಪ್ರವಾಸ ಪೂರ್ಣಗೊಳಿಸಿ ಬುಧವಾರ ಸ್ಪೇನ್‌ಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅವರು, ಐರೋಪ್ಯ ರಾಷ್ಟ್ರಗಳ ಉನ್ನತ ನಾಯಕತ್ವವನ್ನು ಭೇಟಿಯಾಗಿ ದ್ವಿಪಕ್ಷೀಯ ಸಂಬಂಧ ವೃದ್ಧಿಯ ನಿಟ್ಟಿನಲ್ಲಿ ಮಾತುಕತೆ ನಡೆಸಿದರು. 1992ರ ಬಳಿಕ ಸ್ಪೇನ್‌ಗೆ ಭೇಟಿ ನೀಡುತ್ತಿರುವ ಮೊದಲ ಭಾರತದ ಪ್ರಧಾನಿ ಎಂಬ ಹೆಗ್ಗಳಿಕೆಗೂ ಮೋದಿ ಪಾತ್ರರಾದರು. ಬೆಳಗ್ಗೆ ಸ್ಪೇನ್‌ ಅಧ್ಯಕ್ಷ ಮರಿಯಾನೋ ರಜೋಯ್‌ ಅವರೊಂದಿಗೆ ಮೋದಿ ಅವರು ದೀರ್ಘ‌ ಮಾತುಕತೆ ನಡೆಸಿದರು. ಬಳಿಕ ಸೈಬರ್‌ ಭದ್ರತೆ, ನಾಗರಿಕ ವಿಮಾನಯಾನದಲ್ಲಿ ತಾಂತ್ರಿಕ ಸಹಕಾರ, ಜೈಲುಶಿಕ್ಷೆಗೆ ಒಳಗಾಗಿರುವ ವ್ಯಕ್ತಿಗಳ ಪರಸ್ಪರ ಬಿಡುಗಡೆ, ರಾಜತಾಂತ್ರಿಕ ಪಾಸ್‌ಪೋರ್ಟ್‌ ಹೊಂದಿದವರಿಗೆ ವೀಸಾ ವಿನಾಯ್ತಿ ಸೇರಿದಂತೆ 7 ಒಪ್ಪಂದಗಳಿಗೆ ಭಾರತ – ಸ್ಪೇನ್‌ ಸಹಿ ಹಾಕಿತು. 

Advertisement

ಇದೇ ವೇಳೆ, ಸಿಇಒಗಳ ಜತೆ ನಡೆಸಿದ ಸಂವಾದದಲ್ಲಿ ತಮ್ಮ ಮೇಕ್‌ ಇನ್‌ ಇಂಡಿಯಾ ಯೋಜನೆಗೆ ಒತ್ತು ನೀಡಿ ಮಾತನಾಡಿದ ಪ್ರಧಾನಿ ಮೋದಿ, ಭಾರತದಲ್ಲಿ ಹೂಡಿಕೆ ಮಾಡುವಂತೆ ಉದ್ಯಮಿಗಳನ್ನು ಆಹ್ವಾನಿಸಿದರು. ಭಾರತದಲ್ಲಿ ಹೂಡಿಕೆ ಮಾಡಿರುವ ರಾಷ್ಟ್ರಗಳ ಪೈಕಿ 12ನೇ ಸ್ಥಾನ ಸ್ಪೇನ್‌ನದ್ದು. ಸ್ಪೇನ್‌ನ 200ಕ್ಕೂ ಹೆಚ್ಚು ಕಂಪನಿಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಂತೆಯೇ ಭಾರತದ 40ಕ್ಕೂ ಹೆಚ್ಚು ಕಂಪೆ‌ನಿಗಳು ಸ್ಪೇನ್‌ನಲ್ಲಿ ಹೂಡಿಕೆ ಮಾಡಿವೆ. ಏತನ್ಮಧ್ಯೆ, ಭದ್ರತಾ ವಿಚಾರದಲ್ಲೂ ಸಹಕಾರ ಕೋರಿದ ಪ್ರಧಾನಿ ಮೋದಿ ಅವರು, ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಕೈಜೋಡಿಸುವಂತೆ ಕರೆ ನೀಡಿದರು. ಇದಾದ ಬಳಿಕ, ಅವರು ಸ್ಪೇನ್‌ನ ದೊರೆ ಫೆಲಿಪ್‌ 6 ಅವರನ್ನು ಮ್ಯಾಡ್ರಿಡ್‌ ಹೊರವಲಯದಲ್ಲಿ ಭೇಟಿಯಾದರು. ನಂತರ, ಸ್ಪೇನ್‌ ಪ್ರವಾಸ ಮುಗಿಸಿ ಪ್ರಧಾನಿ ರಷ್ಯಾದತ್ತ ಪ್ರಯಾಣ ಬೆಳೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next