Advertisement

ಕೇಂದ್ರದ ಸಾಧನೆ ಬಿಂಬಿಸುವ ಮೋದಿ ಫೆಸ್ಟ್‌

04:17 PM Jun 10, 2017 | Team Udayavani |

ದಾವಣಗೆರೆ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೂರು ವರ್ಷದಲ್ಲಿ ಮಾಡಿರುವ ಸಾಧನೆ, ಜಾರಿಗೊಳಿಸಿರುವ ವಿವಿಧ ಯೋಜನೆ, ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಮೂರು ದಿನಗಳ ಮೋದಿ ಫೆಸ್ಟ್‌ ನಡೆಸಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ ತಿಳಿಸಿದ್ದಾರೆ. 

Advertisement

ಶುಕ್ರವಾರ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಮೂರು ದಿನಗಳ ಮೋದಿ ಫೆಸ್‌ rನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಒಳಗೊಂಡಂತೆ 23 ಜಿಲ್ಲೆಯಲ್ಲಿ ಮೋದಿ ಫೆಸ್ಟ್‌ ನಡೆಯುತ್ತಿದೆ. ಕೇಂದ್ರ ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಜನರಿಗೆ ನೇರವಾಗಿ ತಲುಪಿಸುವ ಹಾಗೂ ಅಗತ್ಯ ಮಾಹಿತಿ ನೀಡಲಾಗುವುದು.

12ಕ್ಕೂ ಹೆಚ್ಚು ಮಳಿಗೆಯಲ್ಲಿ ಸಂಬಂಧಿತ ಯೋಜನೆಯ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು. ಎಲ್‌ಇಡಿ ಸೌಲಭ್ಯದ ವಾಹನದ ಮೂಲಕವೂ ಕೇಂದ್ರ ಸರ್ಕಾರದ ಯೋಜನೆ, ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತಿದೆ. ದಾವಣಗೆರೆ ಒಳಗೊಂಡಂತೆ ಅನೇಕ ಕಡೆ ಎಲ್‌ಇಡಿ ಸೌಲಭ್ಯದ ವಾಹನ ಸಂಚರಿಸಲಿದೆ ಎಂದರು.

ಪಕ್ಷದ ರಾಜ್ಯ ಉಸ್ತುವಾರಿ ಮುರುಳೀಧರರಾವ್‌ ದಾವಣಗೆರೆಗೆ ಭೇಟಿ ನೀಡಲಿದ್ದು, ಇನ್ನೂ ದಿನಾಂಕ ನಿಗದಿಯಾಗಿಲ್ಲ ಎಂದು ಹೇಳಿದರು. ಪಕ್ಷದ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪನವರು ಜೂ. 20ರಂದು ಬರ ಅಧ್ಯಯನಕ್ಕಾಗಿ ಜಿಲ್ಲೆಗೆ ಆಗಮಿಸುವರು. 

ಅಂದು ಬೆಳಗ್ಗೆ 8.30ಕ್ಕೆ ಗಾಂಧಿನಗರದ ಎಲ್‌.ಡಿ. ಗೋಣೆಪ್ಪ ಅವರ ಮನೆಯಲ್ಲಿ ಉಪಹಾರದ ನಂತರ ಅರಸೀಕೆರೆ, ಮಾಯಕೊಂಡ ಕ್ಷೇತ್ರದ ವಿವಿಧ ಭಾಗದಲ್ಲಿ ಭೇಟಿ ನೀಡಿ, ಪರಿಶೀಲನೆ ನಡೆಸುವರು. ಪಕ್ಷದ ಮುಖಂಡರು ದಲಿತರ ಮನೆಯಲ್ಲಿ ಉಪಹಾರ, ಊಟ ಮಾಡುವುದು ಆ ಸಮುದಾಯಕ್ಕೆ ಅಪಮಾನ ಮಾಡಿದಂತೆ ಎಂಬ ಆರೋಪ ಸರಿಯಲ್ಲ.

Advertisement

ಊಟ, ಉಪಹಾರ ಮಾಡುವುದಕ್ಕಿಂತಲೂ ದಲಿತರ ಕಾಲೋನಿಯಲ್ಲಿನ ವಾಸ್ತವಿಕ ಸಮಸ್ಯೆ ತಿಳಿಯುವ, ಅವುಗಳ ಪರಿಹಾರದ ಬಗ್ಗೆ ಚರ್ಚಿಸುವ ಉದ್ದೇಶದಿಂದ ಮುಖಂಡರು ದಲಿತರ ಕಾಲೋನಿಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ತಿಳಿಸಿದರು. ಬಿಜೆಪಿಯಿಂದಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಂಸದರು ಗೆದ್ದಿದ್ದಾರೆ.

ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದಲ್ಲಿ 7 ಮಂದಿ ದಲಿತರಿಗೆ ಸಚಿವ ಸ್ಥಾನಮಾನ ನೀಡಲಾಗಿತ್ತು. ಬಿಜೆಪಿಯೇ ನಿಜವಾಗಿ ದಲಿತರ ಪರವಾಗಿದೆ. ದಲಿತರ ಬಗ್ಗೆ ಮಾತನಾಡುವ ಕಾಂಗ್ರೆಸ್‌ ನವರು ದಲಿತರ ಮುಖಂಡ ಅಂಬೇಡ್ಕರ್‌ ಅವರಿಗೆ ಮೋಸ ಮಾಡಿದವರು. ಅಂಬೇಡ್ಕರ್‌ ನಿಧನರಾದ ಸಂದರ್ಭದಲ್ಲಿ ದೆಹಲಿಯಲ್ಲಿ ಅವರ ಸಮಾಧಿಗೆ ಜಾಗ ಕೊಡದೇ ಇದ್ದವರು ನಾವು ದಲಿತರ ಪರ ಎಂದು ಹೇಳಿಕೊಳ್ಳುತ್ತಾರೆ ಎಂದು ಟೀಕಿಸಿದರು. 

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್‌. ಎನ್‌. ಶಿವಕುಮಾರ್‌, ಎನ್‌. ರಾಜಶೇಖರ್‌, ಸಿ. ರಮೇಶ್‌ನಾಯ್ಕ, ಪಿ.ಸಿ. ಶ್ರೀನಿವಾಸ್‌, ರಾಜನಹಳ್ಳಿ ಶಿವಕುಮಾರ್‌, ಸೋಗಿ ಶಾಂತಕುಮಾರ್‌, ಎಲ್‌ .ಡಿ. ಗೋಣೆಪ್ಪ, ಟಿಂಕರ್‌ ಮಂಜಣ್ಣ, ಶಿವನಗೌಡ ಪಾಟೀಲ್‌, ಧನುಶ್‌ ಇತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next