Advertisement

ಸರ್ಜಿಕಲ್‌ ಸ್ಟ್ರೈಕ್‌ ಹೆಸರಲ್ಲಿ ಮೋದಿ ಪ್ರಚಾರ

06:58 AM Feb 28, 2019 | Team Udayavani |

ಸೇಡಂ: ದೇಶದ ಜನರ ರಕ್ಷಣೆ ದೃಷ್ಟಿಯಿಂದ ನಡೆಯುತ್ತಿರುವ ಪಾಕಿಸ್ತಾನ ಉಗ್ರವಾದಿಗಳ ಮೇಲಿನ ಸರ್ಜಿಕಲ್‌ ಸ್ಟ್ರೈಕ್‌ನ್ನು ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಲೋಕಸಭೆ ಕಾಂಗ್ರೆಸ್‌ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದರು.

Advertisement

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಮತ್ತು ಪೂರ್ಣಗೊಂಡ ಕಟ್ಟಡ ಕಾಮಗಾರಿ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಸೇನೆ ದೇಶದ ರಕ್ಷಣೆಗಾಗಿ ಸದಾ ಹೋರಾಡುತ್ತದೆ. ವಿರೋಧಿಗಳ ಮೇಲೆ ದಾಳಿ ಮಾಡುತ್ತದೆ. ಈ ಪ್ರಕ್ರಿಯೆ ಪ್ರಜೆಗಳ ರಕ್ಷಣೆಗಾಗಿ ಹೊರತು, ಇದೇನು ಮೋದಿ ಸರ್ಜಿಕಲ್‌ ಸ್ಟ್ರೈಕ್‌ ಅಲ್ಲ ಎಂದು ಹೇಳಿದರು. ಎಲ್‌ಒಸಿ ದಾಟಿ ಉಗ್ರರನ್ನು ಸದೆಬಡಿದ ಯೋಧರ ಕಾರ್ಯವನ್ನು ಪಕ್ಷಾತೀತವಾಗಿ ಎಲ್ಲರೂ ಜತೆಗೂಡಿ ಅಭಿನಂದಿಸಬೇಕು. ಯುಪಿಎ ಅವಧಿಯಲ್ಲೂ ಅನೇಕ ಸರ್ಜಿಕಲ್‌ ದಾಳಿಗಳು ನಡೆದಿವೆ. ಆಗ ನಮ್ಮ ಸರ್ಕಾರ ಯಾವುದೇ ಪ್ರಚಾರ ಗಿಟ್ಟಿಸಿಕೊಳ್ಳಲು ಹೋಗಿಲ್ಲ. ಬದಲಾಗಿ ದೇಶದ ರಕ್ಷಣೆಗೆ ಒತ್ತು ಕೊಟ್ಟಿತ್ತು ಎಂದು ಹೇಳಿದರು.

ಹೈದ್ರಾಬಾದ ಕರ್ನಾಟಕ ಭಾಗದ ಜನರಿಗೆ ಎಲ್ಲ ರಂಗದಲ್ಲಿ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ 371(ಜೆ) ಅನುಷ್ಠಾನ ಮಾಡುವಂತೆ ಆಗಿನ ಸರ್ಕಾರದಲ್ಲಿ ಎಲ್‌.ಕೆ. ಅಡ್ವಾಣಿ ಅವರಲ್ಲಿ ಮನವಿ ಮಾಡಲಾಗಿತ್ತು. ಆಗ ಅವರು 371(ಜೆ) ವಿರೋಧಿಸಿದ್ದರು. ನಾವು ಕೊಟ್ಟ ಮನವಿ ಕಸದ ಬುಟ್ಟಿಗೆ ಹಾಕಿದ್ದರು. ಆದರೂ ಈ ಭಾಗದ ಜನರ ಅನುಕೂಲಕ್ಕಾಗಿ ಎಲ್ಲರ ಮನವೊಲಿಸಿ ಕೆಳಮನೆ ಮತ್ತು ಮೇಲ್ಮನೆಯಲ್ಲಿ ಬೇಡಿ ಸಂವಿಧಾನ ಪರಿಚ್ಛೇದ 371(ಜೆ) ಜಾರಿಗೆ ತರಲಾಗಿದೆ. ಇದರಿಂದ ಹೈಕ ಭಾಗದ ಜನರಿಗೆ ಶೇ. 70ರಿಂದ 80ರಷ್ಟು ಮೀಸಲಾತಿ ದೊರೆಯುತ್ತಿದೆ ಎಂದು ಹೇಳಿದರು.

ಅಭಿವೃದ್ಧಿ ವಿಚಾರದಲ್ಲಿ ನನಗೆ ಯಾರ ಸಲಹೆ ಬೇಕಾಗಿಲ್ಲ. ಅಭಿವೃದ್ಧಿ ಎಂಬುದು ನನ್ನ ರಕ್ತದಲ್ಲೇ ಇದೆ. ಜನರ ಕೆಲಸ ಮಾಡಿದರೆ ನನ್ನ ಗಂಟೇನೂ ಹೋಗಲ್ಲ. ನಮ್ಮಪ್ಪಂದಂತೂ ಇಲ್ಲವೇ ಇಲ್ಲ. ತಮ್ಮ ಅವಧಿಯಲ್ಲಿ ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಅನೇಕ ಅಭಿವೃದ್ದಿಪರ ಕೆಲಸ ಮಾಡಿದ್ದಾರೆ. ಈಗ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಸರದಿ ಎಂದು ಹೇಳಿದರು. 

ದೇಶದ 130 ಕೋಟಿ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಸಂವಿಧಾನ ರಚಿಸಿದ್ದಾರೆ. ಅದರ ಸದುಪಯೋಗವಾಗಬೇಕು ಎಂದು ಪ್ರತಿಪಾದಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ, ಇಡೀ ವಿಶ್ವಕ್ಕೆ ಭಯೋತ್ಪಾದನೆ ಅಂಟು ರೋಗವಿದ್ದಂತೆ. ಪಾಕಿಸ್ತಾನದ ಒಳಹೊಕ್ಕು ಸೇಡು ತೀರಿಸಿಕೊಂಡ ಯೋಧರ ಶೌರ್ಯಕ್ಕೆ ಪ್ರತಿಯೊಬ್ಬರೂ ಸೆಲ್ಯೂಟ್‌ ಹೊಡೆಯಲೇಬೇಕು. ಸರ್ವ ಪಕ್ಷಗಳು ಯೋಧರ ಕಾರ್ಯಕ್ಕೆ ಜತೆಯಾಗಿ ಕೈಜೋಡಿಸಿ ನಿಂತಿರುವುದು ಶ್ಲಾಘನೀಯ ಕಾರ್ಯ. ಭಾರತ ನಡೆಸಿದ ದಾಳಿಯಿಂದ ಪಾಕ್‌ ಸರ್ಕಾರ ಕಂಗಾಲಾಗಿದೆ. ಅಲ್ಲಿನ ಪ್ರಧಾನಿ ಮೇಲೆ ಜನ ಪ್ರಶ್ನೆಗಳ ಸುರಿಮಳೆಗೈಯ್ಯುತ್ತಿದ್ದಾರೆ. ದೇಶದ ರಕ್ಷಣೆ ವಿಷಯಕ್ಕೆ ಬಂದರೆ ಎಲ್ಲ ಪಕ್ಷಗಳು ಒಂದಾಗಿ ನಿಲ್ಲಲಿವೆ. ಈ ನಿಟ್ಟಿನಲ್ಲಿ ಕೈಜೋಡಿಸಿದ ಡಾ| ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಯೂಟ್‌ ಎಂದು ಹೇಳಿದರು.

Advertisement

ಬರುವ ದಿನಗಳಲ್ಲಿ ಕಾಗಿಣಾ ನದಿಗೆ 2 ಟಿಎಂಸಿ ಅಡಿ ನೀರು ಬಿಟ್ಟು ಏತ ನೀರಾವರಿ ಯೋಜನೆ ಜಾರಿಗೆ ತಂದಲ್ಲಿ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಕಾಗಿಣಾ ತಟದ ರೈತರಿಗೆ ವಿದ್ಯುತ್‌ ಪೂರೈಕೆಗಾಗಿ ಹೊಸ ಲೈನ್‌ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಶಾಸಕ ತೇಲ್ಕೂರ ಖರ್ಗೆ ಅವರಿಗೆ ಮನವಿ ಮಾಡಿದರು.

ಜಿಪಂ ಅಧ್ಯಕ್ಷೆ ಸುವರ್ಣ ಮಲಾಜಿ, ಉಪಾಧ್ಯಕ್ಷ ಶೋಭಾ ಸಿದ್ದು ಸಿರಸಗಿ, ತಾಪಂ ಅಧ್ಯಕ್ಷೆ ಇಂದಿರಾದೇವಿ, ಜಿಪಂ ಸದಸ್ಯರಾದ ದಾಮೋದರರೆಡ್ಡಿ, ಶರಣು ಮೆಡಿಕಲ್‌, ಜಯಶ್ರೀ ಊಡಗಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಗುರುನಾಥರೆಡ್ಡಿ, ಸತೀಶರೆಡ್ಡಿ ಪಾಟೀಲ ರಂಜೋಳ, ಮಹಾಂತಪ್ಪ ಸಂಗಾವಿ, ಪುರಸಭೆ ಮುಖ್ಯಾಧಿಕಾರಿ ಶರಣಯ್ಯಸ್ವಾಮಿ ಇದ್ದರು. ತಹಶೀಲ್ದಾರ ಸುಬ್ಬಣ್ಣ ಜಮಖಂಡಿ ಸ್ವಾಗತಿಸಿ, ವಂದಿಸಿದರು.

ಕೆಲ ಭಾಗಗಳಲ್ಲಿ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿನ ಕಾಮಗಾರಿಗಳ ಗುಣಮಟ್ಟಕ್ಕೆ ಹೆಚ್ಚು ಬೆಲೆ ಕೊಡದೆ ಗುತ್ತಿಗೆದಾರರಿಂದ ಕಮಿಷನ್‌ ಪಡೆಯುವ ದಂಧೆಗೆ ಕೈ ಹಾಕಿದ್ದಾರೆ. ಈಗಂತೂ ತಮ್ಮ ಎಸ್ಟಿಮೇಟ್‌ನಲ್ಲೇ ಗುತ್ತಿಗೆದಾರರು ಕೊಡಬೇಕಾದ ಕಮಿಷನ್‌ ಸೇರಿಸಿ
ಕೊಡುತ್ತಿದ್ದಾರೆ.
ಡಾ| ಮಲ್ಲಿಕಾರ್ಜುನ ಖರ್ಗೆ,

ಚಾಯ್‌ ಹೆಸರಲ್ಲಿ ಮೋದಿ ಅಪಮಾನ ಪ್ರಧಾನಿ ನರೇಂದ್ರ ಮೋದಿ ಎಲ್ಲೆಂದರಲ್ಲಿ ನಾನು ಚಾಯ್‌ ವಾಲಾ, ಚಾಯ್‌ ಮಾರುವವನು ಎಂದು ಹೇಳಿಕೊಳ್ಳುತ್ತಿರುವುದು ಅವರಿಗೆ ಅಪಮಾನ ತರುವ ವಿಚಾರವಾಗಿದೆ. ನಾನೂ ಕಾರ್ಮಿಕನ ಮಗ. ಹೀಗೆ ನೀವು ಚಾಯಾವಾಲಾ, ನಾನು ಕಾರ್ಮಿಕನ ಮಗ ಎಂದು ಹೇಳಿಕೊಳ್ಳುತ್ತಲೇ ಹೋದರೆ ಹೇಗೆ ಎಂದು ಖರ್ಗೆ ಪ್ರಶ್ನಿಸಿದರು. 11 ತಿಂಗಳು ರೈಲ್ವೆ ಸಚಿವನಾಗಿದ್ದಾಗ 27 ಹೊಸ ರೈಲುಗಳನ್ನು ಓಡಿಸಿದ್ದೇನೆ. ಸತತ 11 ಬಾರಿ ಇಲ್ಲಿನ ಜನರು ನನ್ನನ್ನು ಆಯ್ಕೆ ಮಾಡಿದ್ದರಿಂದ ವಿವಿಧ ಹುದ್ದೆ ನಿಭಾಸಿದ್ದೇನೆ. ಇನ್ನೊಂದು ಬಾರಿ ಚುನಾಯಿಸಿದರೆ ಸಾಕು ಮತ್ತೆ ಚುನಾವಣೆಗೆ ನಿಲ್ಲಲ್ಲ ಎಂದು ಸ್ಪಷ್ಟನೆ ನೀಡಿದರು. ನರೇಂದ್ರ ಮೋದಿ ವಿರುದ್ಧ ನಾವು ಎಂದಿಗೂ ನಿಂತಿಲ್ಲ. ಅವರ ವಿಚಾರ, ನೀತಿಗಳನ್ನು ವಿರೋಧಿಸುತ್ತೇವೆ. ನಮ್ಮದೇನಿದ್ದರೂ ಸಂವಿಧಾನ ಉಳಿಸುವ ಕೆಲಸ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next