ಹೊಸದಿಲ್ಲಿ : ಭೀತಿವಾದದ ವಿರುದ್ಧ ಪ್ರಬಲ ಕ್ರಮ ತೆಗೆದುಕೊಂಡರೆ ಮಾತ್ರವೇ ಭಾರತ-ಪಾಕಿಸ್ಥಾನ ಸಂಬಂಧ ಸುಧಾರಿಸಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಪತ್ರ ಬರೆದಿದ್ದಾರೆ.
ಇಮ್ರಾನ್ ಖಾನ್ ಅವರು ಈಚೆಗಷ್ಟೇ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು “ಪಾಕಿಸ್ಥಾನವು ಹೊಸದಿಲ್ಲಿಯೊಂದಿಗೆ ಮಾತುಕತೆ ನಡೆಸಲು ಉತ್ಸುಕವಾಗಿದ್ದು ಕಾಶ್ಮೀರ ಸಹಿತ ಎಲ್ಲ ವಿಷಯಗಳನ್ನು ಬಗೆಹರಿಸಲು ಬಯಸಿದೆ’ ಎಂದು ಹೇಳಿದ್ದರು.
ಇದಕ್ಕೆ ಉತ್ತರವಾಗಿ ಪ್ರಧಾನಿ ಮೋದಿ ಅವರು ಯಾವುದೇ ಮಾತುಕತೆಗೆ ಭಯೋತ್ಪಾದನೆ ನಿಗ್ರಹದ ಪೂರ್ವ ಶರತ್ತನ್ನು ವಿಧಿಸಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಮಾತುಕತೆಗೆ ಮೊದಲು ವಿಶ್ವಾಸದ ವಾತಾವರಣ ನಿರ್ಮಿಸಬೇಕು; ಅದು ಭಯೋತ್ಪಾದನೆ, ಹಿಂಸೆ ಮತ್ತು ದ್ವೇಷದಿಂದ ಮುಕ್ತವಾಗಿರಬೇಕು; ಭಯೋತ್ಪಾದನೆ ಮತ್ತು ಮಾತುಕತೆ ಜತೆಜತೆಗೆ ಸಾಗಲಾರದು ಎಂದು ಮೋದಿ ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ಥಾನದ ಅಭಿನಂದನಾ ಸಂದೇಶಕ್ಕೆ ಉತ್ತರಿಸುವ ಸ್ಥಾಪಿತ ರಾಜತಾಂತ್ರಿಕ ಪರಿಪಾಠಕ್ಕೆ ಅನುಗುಣವಾಗಿ ಪ್ರಧಾನಿ ಮೋದಿ ಅವರು ಪಾಕ್ ಪ್ರಧಾನಿಯ ಪತ್ರಕ್ಕೆ ಉತ್ತರಿಸಿದ್ದಾರೆ ಎಂದು ವಿದೇಶ ವ್ಯವಹಾರಗಳ ಸಚಿವಾಲಯ ಈ ವಿದ್ಯಮಾನವನ್ನು ದೃಢಪಡಿಸಿದೆ.
ಪ್ರಧಾನಿ ಮೋದಿ ಅವರು ಪಾಕ್ ಪ್ರಧಾನಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ‘ಭಾರತವು ಮಾತುಕತೆಗೆ ಒಪ್ಪಿದೆ’ ಎಂದು ಪಾಕ್ ಮಾಧ್ಯಮ ವರದಿ ಮಾಡಿದೆ. ಆದರೆ ಅಂತಹ ಯಾವುದೇ ವಿದ್ಯಮಾನ ಸಂಭವಿಸಿಲ್ಲ ಎಂದು ಹೊಸದಿಲ್ಲಿ ಸ್ಪಷ್ಟನೆ ನೀಡಿದೆ.