ಕಲಬುರಗಿ: ಕೇಂದ್ರದಲ್ಲಿ ಕಳೆದ ಏಳು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ ಆಡಳಿತ ನೀಡಿರುವುದನ್ನು ದೇಶದ 130 ಕೋಟಿ ಜನತೆ ಮೆಚ್ಚಿಕೊಂಡಿದ್ದಾರಲ್ಲದೇ, ವಿಶ್ವ ನಾಯಕರಾಗಿ ಹೊರ ಹೊಮ್ಮಿದ್ದಾರೆ ಎಂದು ಸಂಸದ ಡಾ| ಉಮೇಶ ಜಾಧವ ಹೇಳಿದರು.
ನಗರದಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ರೈತ ಮೋರ್ಚಾ ವಿಭಾಗೀಯ ಮಟ್ಟದ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಹಿಂದಿನ ಸರ್ಕಾರದಲ್ಲಿ ಹಗರಣಗಳು ಸರದಿ ಎನ್ನುವಂತೆ ನಡೆದಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಮೋದಿ ಅವರದ್ದು ಒಂದೇ ಮಂತ್ರ ಅದುವೇ ಅಭಿವೃದ್ಧಿಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾಗಿರುವ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕಿಸಾನ್ ಮಾನ್ ಧನ್ ಯೋಜನೆ ಮುಖಾಂತರ ರೈತರಿಗೆ ಇಳಿವಯಸ್ಸಿನಲ್ಲಿ ಪಿಂಚಣಿ ಸಿಗುವಂತೆ ಜಾರಿ ಮಾಡಿರುವ ಯೋಜನೆ ಮಾದರಿಯಾಗಿದೆ. ದೇಶದ 10 ಕೋಟಿ ರೈತರಿಗೆ ಪ್ರತಿ ವರ್ಷ 75 ಸಾವಿರ ಕೋಟಿ ರೂ. ನೇರವಾಗಿ ರೈತರ ಖಾತೆಗೆ ಕಿಸಾನ ಸಮ್ಮಾನ್ ನಿಧಿ ಯೋಜನೆ ಅಡಿ ಜಮಾ ಮಾಡುತ್ತಿರುವುದು ರೈತಪರ ಕಾಳಜಿ ನಿರೂಪಿಸುತ್ತದೆ ಎಂದರು.
ದೇಶದಲ್ಲಿ 10 ಸಾವಿರ ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸಲು 15000 ಕೋಟಿ ರೂ. ಮೀಸಲಿಟ್ಟಿದ್ದು, ರೈತರು ಸಂಪೂರ್ಣವಾಗಿ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ರೈತ ಮೋರ್ಚಾ ಜಿಲ್ಲಾ ಉಸ್ತುವಾರಿ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್ ರೆಡ್ಡಿ ನಾಲವಾರ, ಎಫ್ಪಿಒ ನಗರ ಸಂಚಾಲಕ ಬಸವರಾಜ್ ಇಂಗಿನ, ಬೀದರ್ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಶಾಂತವೀರ್ ಕೆಸ್ಕರ್ ಮುಂತಾದವರು ಇದ್ದರು. ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಧರ್ಮಣ್ಣ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಮೇಶ ಆರ್. ದುತ್ತರಗಿ ಸ್ವಾಗತಿಸಿದರು. ಕಲಬುರಗಿ ನಗರ ರೈತ ಮೋರ್ಚಾ ಅಧ್ಯಕ್ಷ ಪ್ರಕಾಶ್ ಪಾಟೀಲ ವಂದಿಸಿದಿರು. ಶ್ರೀಶೈಲ ಪಾಟೀಲ ನಿರೂಪಿಸಿದರು, ಬೀದರ್, ಕಲಬುರಗಿ, ನಗರ ಹಾಗೂ ಗ್ರಾಮೀಣ ಜಿಲ್ಲೆಯ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿಭಾಗದ 18 ಮಂಡಲದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಇದ್ದರು.