Advertisement

ದೇವೇಗೌಡರ ಜತೆ ಮೋದಿ “ಫೋನ್‌ ಪೆ ಚರ್ಚಾ’

12:26 AM Apr 06, 2020 | Sriram |

ಬೆಂಗಳೂರು: ಕೋವಿಡ್ 19 ಮಹಾಮಾರಿ ವಿರುದ್ಧ ಸಮರ ಸಾರಿರುವ ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಜತೆ ದೂರವಾಣಿ ಮೂಲಕ ಚರ್ಚಿಸಿ ಸಲಹೆ ಮತ್ತು ಬೆಂಬಲ ಕೋರಿದರು.

Advertisement

ಅಪರಾಹ್ನ 2.30 ರ ವೇಳೆಗೆ ಕರೆ ಮಾಡಿದ್ದ ಮೋದಿ ಅವರು ಐದು ನಿಮಿಷಗಳ ಕಾಲ ಕೋವಿಡ್ 19 ಪರಿಸ್ಥಿತಿ ನಿಭಾವಣೆ ಸಂಬಂಧ ದೇವೇಗೌಡರಿಂದ ಸಲಹೆಗಳನ್ನು ಪಡೆದುಕೊಂಡರು. ಇತ್ತೀಚೆಗೆ ದೇವೇಗೌಡ ಅವರು ಕೋವಿಡ್ 19  ನಿಯಂತ್ರಣಕ್ಕಾಗಿ ಕೇಂದ್ರ ಕೈಗೊಂಡ ಕ್ರಮಗಳನ್ನು ಸ್ವಾಗತಿಸಿ ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಪಾಲಿಸುವಂತೆ ದೇಶದ ಜನತೆಗೆ ಮನವಿ ಮಾಡಿದ್ದ ಬಗ್ಗೆಯೂ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿ ಸಂಕಷ್ಟ ಸಂದರ್ಭದಲ್ಲಿ ಸರಕಾರದ ಕ್ರಮಗಳಿಗೆ ಸಹಕಾರ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಮುಂದೆಯೂ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿ ಅಗತ್ಯ ಸಲಹೆ ಸೂಚನೆ ನೀಡುವಂತೆ ಕೋರಿದರು.

ಪ್ರಧಾನಿ ಮೋದಿ ಅವರು ಕರೆ ಮಾಡಿದ ಬಗ್ಗೆ “ಉದಯವಾಣಿ’ ಜತೆ ಮಾತನಾಡಿದ ದೇವೇಗೌಡರು, ಪ್ರಧಾನಮಂತ್ರಿ ಅವರು ನನ್ನ ಜತೆ ದೂರವಾಣಿ ಕರೆ ಮಾಡಿ ಮಾತನಾಡಿ ದೇಶದ ಕೋವಿಡ್ 19 ಪರಿಸ್ಥಿತಿ ಬಗ್ಗೆ ಚರ್ಚಿಸಿದರು. ಕೈಗೊಂಡಿರುವ ಕ್ರಮಗಳ ಬಗ್ಗೆಯೂ ವಿವರಿಸಿದರು. ನನ್ನ ಅನುಭವದ ಆಧಾರದ ಮೇಲೆ ಸಲಹೆ ಪಡೆದರಲ್ಲದೆ ಜತೆಗೆ ಬೆಂಬಲ ಕೋರಿದರು ಎಂದು ತಿಳಿಸಿದರು.
ನಾನು ಸಂಪೂರ್ಣವಾಗಿ ಸರಕಾರದ ಜತೆಗೆ ಇರುವುದಾಗಿ ಭರವಸೆ ನೀಡಿದೆ. ಕೋವಿಡ್ 19 ವಿರುದ್ಧದ ಹೋರಾಟಕ್ಕೆ ವೈಯಕ್ತಿಕವಾಗಿ ಮತ್ತು ಜೆಡಿಎಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷನಾಗಿ ಸಂಪೂರ್ಣ ಸಹಕಾರ ನೀಡುವುದಾಗಿಯೂ ಹೇಳಿದ್ದೇನೆ ಎಂದರು.

ಜನತೆಯ ಸಹಕಾರ ಮುಖ್ಯ
ಇಡೀ ವಿಶ್ವವನ್ನು ವ್ಯಾಪಿಸಿರುವ ಕೋವಿಡ್ 19 ಭಾರೀ ಸಾವು ನೋವಿಗೆ ಕಾರಣವಾಗಿದೆ. ಭಾರತದಲ್ಲೂಕೋವಿಡ್ 19 ಸೋಂಕು ವ್ಯಾಪಿಸಿ ಆತಂಕ ತಂದೊಡ್ಡಿದೆ. ಇಂಥ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕ್ರಮ ಕೈಗೊಂಡು ನಿಯಂತ್ರಣಕ್ಕೆ ಶ್ರಮಿಸುತ್ತಿದೆ. ಇಡೀ ದೇಶ ಒಂದಾಗಿ ಇದರ ವಿರುದ್ಧ ಹೋರಾಡುವ ಅಗತ್ಯವಿದೆ. ಜನತೆ ಸಹಕಾರ ನೀಡಬೇಕು ಎಂದು ಹೇಳಿದರು.

ಅಗತ್ಯ ಕ್ರಮ ಕೈಗೊಳ್ಳಲು ಪ್ರಧಾನಿಗೆ ಸಲಹೆ
ಕೋವಿಡ್ 19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ ನಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತ ಸಮುದಾಯಕ್ಕೆ ಪರಿಹಾರ ಕ್ರಮ ತೆಗೆದುಕೊಳ್ಳಿ. ಅಸಂಘಟಿತ ವಲಯದ ಕೋಟ್ಯಂತರ ಕೂಲಿ ಕಾರ್ಮಿಕರು ಕೆಲಸ ಇಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದ್ದು ಅವರ ಬಗ್ಗೆ ಗಮನಹರಿಸಿ. ಬಡ ವರ್ಗಕ್ಕೆ ಆಹಾರ ಧಾನ್ಯ ಒದಗಿಸುತ್ತಿದ್ದೀರಿ, ಆದರೆ ಈ ವರ್ಗಕ್ಕೆ ಮನೆ ಬಾಡಿಗೆ, ಮಕ್ಕಳ ಶಿಕ್ಷಣ ಸಹಿತ ಇತರ ವೆಚ್ಚ ಭರಿಸುವುದು ಕಷ್ಟವಾಗಿದ್ದು ಅದರ ಬಗ್ಗೆ ಯೂ ಗಮನಹರಿಸಿ, ದೊಡ್ಡ ದೊಡ್ಡ ಯೋಜನೆಗಳನ್ನು ಕೆಲವು ಕಾಲ ನಿಲ್ಲಿಸಿ ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಿ ಅಗತ್ಯ ಕ್ರಮ ಕೈಗೊಳ್ಳಲು ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದರು ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next