ಮಡಿಕೇರಿ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾತ್ಯತೀತ ನೆಲೆಗಟ್ಟಿನ ಆಧಾರದಲ್ಲಿ ಕೆಲಸ ಮಾಡಿದ್ದರಿಂದ ಎಲ್ಲಾ ವಿರೋಧ ಪಕ್ಷಗಳು ಒಗ್ಗೂಡಿದರೂ ಅವರನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಇತರ ಪಕ್ಷಗಳು ಹಿಂದೂ ಧರ್ಮವನ್ನು ಹಿಯ್ನಾಳಿಸಿದ್ದರಿಂದ ಅವರಿಗೆ ದುರ್ಗತಿ ಬಂದಿದೆ ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.
ಮೈಸೂರಿನ ಶ್ರೀ ಕೃಷ್ಣ ಧಾಮದ ರಜತೋತ್ಸವ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಅವರು ರವಿವಾರ ಸುಂಟಿಕೊಪ್ಪ ಸಮೀಪದ ಅಂದಗೋವೆ ಗ್ರಾಮದ ಎಂ.ಎನ್.ಗಣೇಶ ಉಪಾಧ್ಯಾಯ ಅವರ ಮನೆಗೆ ಖಾಸಗಿ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಸ್ವಾಮೀಜಿ ಅವರು ಮಾತನಾಡಿದರು.
ಪ್ರಧಾನಿ ನರೆಂದ್ರ ಮೋದಿ ಅವರನ್ನು ವಿರೋಧ ಪಕ್ಷ ಮತ್ತು ಅದರ ಮಿತ್ರ ಪಕ್ಷಗಳು ಒಗ್ಗೂಡಿ ಸೋಲಿಸಲು ಶ್ರಮ ವಹಿಸಿದರೂ ಅದು ಫಲಕಾರಿಯಾಗಲಿಲ್ಲ. ರಾಜ್ಯದಲ್ಲೂ ಕೆಲವು ರಾಜಕಾರಣಿಗಳು ಹಿಂದೂ ಧರ್ಮದ ಬಗ್ಗೆ ಅಪಪ್ರಚಾರ ಮಾಡಿ ಹಿಯ್ನಾಳಿಸುತ್ತಿರುವುದು ಸರಿಯಲ್ಲ. ಜಾತ್ಯತೀತ ನೆಲೆಗಟ್ಟಿನ ಮೇಲೆ ಕೆಲಸ ಮಾಡಿದ್ದರಿಂದ ನರೇಂದ್ರ ಮೋದಿ ಅವರಿಗೆ ಜಯ ಲಭಿಸಿದೆ.ಎಂದವರು ಹೇಳಿದರು.
ಉಳಿದ ಪಕ್ಷಕಗಳು ಹಿಂದೂ ಧರ್ಮವನ್ನು ಹಿಯ್ನಾಳಿಸಿದ್ದರಿಂದ ಅವರಿಗೆ ಈ ದುರ್ಗತಿ ಬಂದಿದೆ ಎಂದು ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ನುಡಿದರು.
ಒಳ್ಳೆಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರೆ ಮುಂದಿನ ಚುನಾವಣೆಗಳಲ್ಲೂ ನರೇಂದ್ರ ಮೋದಿ ಅವರೇ ಪ್ರಧಾನಿಯಾಗುವುದರಲ್ಲಿ ಸಂಶಯವಿಲ್ಲ ಎಂದೂ ಸ್ವಾಮೀಜಿ ಭವಿಷ್ಯ ನುಡಿದರು.
ರಾಜ್ಯ ರಾಜಕಾರಣ ಮಾತ ನಾಡಲು ಬಯಸುವುದಿಲ್ಲ
ರಾಜ್ಯ ರಾಜಕಾರಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ರಾಜಕಾರಣದ ಬಗ್ಗೆ ತಾನೇನೂ ಮಾತನಾಡಲು ಬಯಸುವುದಿಲ್ಲ ಎಂದು ಹೇಳಿದರು.
ಈ ಸಂದರ್ಭ ಮಠದಿಂದ ಅವರ ಶಿಷ್ಯರೂ ಸೇರಿದಂತೆ ಸಮಾರು 20 ಮಂದಿ ಆಗಮಿಸಿದ್ದರು. ಸ್ವಾಮೀಜಿ ಅವರನ್ನು ಪೂರ್ಣಕುಂಭ ಕಲಶದೊಂದಿಗೆ ಬರಮಾಡಿಕೊಳ್ಳಲಾಯಿತು. ಶ್ರೀ ವಿಶ್ವೇಶತೀರ್ಥ ಸ್ವಾಮಿಜಿಯವರು ಎಂ.ಎನ್.ಗಣೇಶ ಉಪಾಧ್ಯಾಯ ಅವರ ಕುಟುಂಬದವರಿಗೆ ಆಶೀರ್ವಚನ ನೀಡಿ ಫಲಾಹಾರ ಸೇವಿಸಿ ಅನಂತರ ಮೈಸೂರಿಗೆ ಪ್ರಯಾಣ ಬೆಳೆಸಿದರು.