ಹೊಸದಿಲ್ಲಿ: ಕೋವಿಡ್ ತಡೆಗಟ್ಟುವ ಸಲುವಾಗಿ ಶೀಘ್ರ ಲಸಿಕೆ ವಿತರಿಸಲು ಕೇಂದ್ರ ಸರಕಾರ ನಿರ್ಧರಿಸಿದ್ದು, ಇದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಲಸಿಕೆ ಪೂರೈಸಲಿರುವ ಕಂಪೆನಿಗಳ ಜತೆ ಸರಕಾರ ಒಂದು ಹಂತದ ಮಾತುಕತೆಯನ್ನು ಈಗಾಗಲೇ ಪೂರೈಸಿದೆ.
ಈ ಕುರಿತಂತೆ ಸರ್ವಪಕ್ಷಗಳ ಸಭೆ ಕರೆದು ಅವರ ಅಭಿಪ್ರಾಯವನ್ನು ಪಡೆದುಕೊಳ್ಳಲು ಸರಕಾರ ಯೋಚಿಸಿದ್ದು, ಡಿಸೆಂಬರ್ 4ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಶುಕ್ರವಾರ ಬೆಳಗ್ಗೆ 10.30ಕ್ಕೆ ಆರಂಭವಾಗಲಿರುವ ಸಭೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಯಲಿದೆ. ಲಸಿಕೆ ಪೂರೈಸುವ ಸಂಸ್ಥೆಗಳ ಜತೆ ಸಭೆ ನಡೆಸಲಾದ ಬಳಿಕ ನಡೆಯುವ ಮಹತ್ವದ ಮೊದಲ ಸಭೆ ಇದಾಗಿದೆ.
ಕೋವಿಡ್ ಕುರಿತು ಸರಕಾರ ಎರಡನೇ ಬಾರಿಗೆ ಸರ್ವಪಕ್ಷಗಳ ಸಭೆ ಕರೆದಿದೆ. ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಹರ್ಷ್ ವರ್ಧನ್ ಕೂಡ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮತ್ತು ಸಂಸದೀಯ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಭಾಗಿಯಾಗಲಿದ್ದಾರೆ.
ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಬಜೆಟ್ ಅಧಿವೇಶನದೊಂದಿಗೆ ವಿಲೀನಗೊಳಿಸುವ ಚರ್ಚೆ ನಡೆಯುತ್ತಿದೆ. ಈ ಸಮಯದಲ್ಲಿ ಸರ್ವ ಪಕ್ಷಗಳ ಸಭೆ ಮಹತ್ವವೆನಿಸಿದೆ.
ಪ್ರಧಾನಿ ಮೋದಿ ಅವರು ಸೋಮವಾರ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಜಿನೋವಾ ಬಯೋಫಾರ್ಮಾ, ಜೈವಿಕ ಇ ಮತ್ತು ಡಾ. ರೆಡ್ಡಿ ತಂಡಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಲಸಿಕೆಯ ಮಹತ್ವ ಮತ್ತು ಪರಿಣಾಮಗಳನ್ನು ಜನರಿಗೆ ಸರಳವಾಗಿ ವಿವರಿಸಬೇಕು. ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡಲು ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕೆಂದು ಪ್ರಧಾನಿ ಅವರಿಗೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ದೇಶದಲ್ಲಿ ಕೋವಿಡ್‌ನಿಂದಾಗಿ 94.32 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದಾರೆ. ಇವರಲ್ಲಿ 88.46 ಲಕ್ಷ ಜನರು ಗುಣಮುಖರಾಗಿದ್ದಾರೆ. 1.37 ಲಕ್ಷ ರೋಗಿಗಳು ಸಾವನ್ನಪ್ಪಿದ್ದಾರೆ.