ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 2024ರ ಜ.22ರಂದು ಭವ್ಯ ರಾಮ ಮಂದಿರವು ಲೋಕಾರ್ಪಣೆಗೊಳ್ಳಲಿದೆ. ಈ ಸಂದರ್ಭದಲ್ಲಿ ಶ್ರೀರಾಮನ ಉತ್ಸವ ಮೂರ್ತಿಯನ್ನು ಹೊತ್ತು ಪ್ರಧಾನಿ ನರೇಂದ್ರ ಮೋದಿ ಸಾಗಲಿದ್ದಾರೆ.
ತಾತ್ಕಾಲಿಕ ದೇಗುಲದ ಸ್ಥಳದಿಂದ ನೂತನವಾಗಿ ನಿರ್ಮಿಸಿರುವ ರಾಮ ಮಂದಿರದ ಗರ್ಭಗುಡಿ ವರೆಗೆ 500 ಮೀಟರ್‌ಗೂ ಹೆಚ್ಚು ದೂರ ಬರಿಗಾಲಿನಲ್ಲಿ ಪ್ರಭು ರಾಮನ ಉತ್ಸವ ಮೂರ್ತಿಯನ್ನು ಹೊತ್ತು ಮೋದಿ ಬರಲಿದ್ದಾರೆ. ಇವರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜತೆಯಾಗಲಿದ್ದಾರೆ. ಸಮಾರಂಭದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮೂಲಗಳು ತಿಳಿಸಿವೆ.
ಗರ್ಭಗುಡಿಯ ಪಕ್ಕದಲ್ಲಿ ಈ ಉತ್ಸವ ಮೂರ್ತಿ ವಿರಾಜಮಾನವಾಗಲಿದೆ. ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠೆ ಆಗಲಿರುವ ರಾಮನ ಮೂರ್ತಿಯನ್ನು ಟ್ರಸ್ಟ್ ಇನ್ನು ಅಂತಿಮಗೊಳಿಸಿಲ್ಲ. ಇದಕ್ಕಾಗಿ ಶಿಲ್ಪಿಗಳಿಂದ ಮೂರು ವಿಗ್ರಹಗಳನ್ನು ಕೆತ್ತಿಸಲಾಗಿದೆ. ಈ ಪೈಕಿ ಒಂದು ಮೂರ್ತಿ ಪ್ರಾಣ ಪ್ರತಿಷ್ಠೆಗೊಳ್ಳಲಿದೆ. ಮುಂದಿನ ವರ್ಷ ಜ.22ರಂದು ಪ್ರಾಣ ಪ್ರತಿಷ್ಠೆ ಸಮಾರಂಭ ನಡೆಯಲಿದೆ ಎಂದು ಟ್ರಸ್ಟ್ ತಿಳಿಸಿದೆ.
ನೀವು ಕೂಡ ಆಚರಿಸಿ
2024ರ ಜ.22ರಂದು ಪೌಷ ಶುಕ್ಲ ದ್ವಾದಶಿಯ ಸೋಮವಾರದಂದು ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರಾಮ ಮಂದಿರದ ಗರ್ಭಗುಡಿಯಲ್ಲಿ ಭಗವಾನ್ ಶ್ರೀರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು.
ಭಕ್ತರು ಅಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ನಿಮ್ಮ ಗ್ರಾಮ, ಪ್ರದೇಶದಲ್ಲಿರುವ ದೇವಸ್ಥಾನದಲ್ಲಿ ನೆರೆಹೊರೆಯ ರಾಮ ಭಕ್ತರನ್ನು ಒಟ್ಟುಗೂಡಿಸಿ, ಭಜನೆ-ಕೀರ್ತನೆ ಮಾಡಿ, ಅಯೋಧ್ಯೆಯ ಪ್ರತಿಷ್ಠಾಪನೆ ಸಮಾರಂಭವನ್ನು ದೊಡ್ಡ ಎಲ್‌ಇಡಿ ಪರದೆಯಲ್ಲಿ ಹಾಕಿ ಎಲ್ಲರೂ ನೋಡುವಂತೆ ಮಾಡಿ, ಶಂಖ ಊದುವ ಮೂಲಕ, ಘಂಟಾ ನಾದದ ಮೂಲಕ, ಆರತಿ ಮಾಡುವ ಮೂಲಕ, ಪ್ರಸಾದ ವಿತರಿಸುವ ಮೂಲಕ, ನಿಮ್ಮ ಮನೆಯ ಮುಂದೆ ದೀಪವನ್ನು ಹಚ್ಚುವ ಮೂಲಕ ಅವಿಸ್ಮರಣೀಯ ದಿನಕ್ಕೆ ಸಾಕ್ಷಿಯಾಗಿ ಎಂದು ಟ್ರಸ್ಟ್ ಮನವಿ ಮಾಡಿದೆ.