ಭಾರತದ ರಾಜಕೀಯ ರಂಗದಲ್ಲಿ ಹೊಸ ಆಶಾಭಾವ ಮೂಡಿಸುವ ಮೂಲಕ 2013ರಲ್ಲಿ ಅಸ್ತಿತ್ವಕ್ಕೆ ಬಂದ ಆಮ್ ಆದ್ಮಿ ಪಕ್ಷ (ಎಎಪಿ), ಈ ಬಾರಿ ಮೋದಿ ಅಲೆಯಲ್ಲಿ ಕೊಚ್ಚಿ ಹೋಗಿದೆ. 2013ರಲ್ಲಿ ದಿಲ್ಲಿಯ ಮೂರು ಬಾರಿಯ ಸಿಎಂ, ಕಾಂಗ್ರೆಸ್‌ನ ಪ್ರಭಾವಿ ನಾಯಕಿ ಶೀಲಾ ದೀಕ್ಷಿತ್ ಅವರ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ, ಅಧಿಕಾರದ ಗದ್ದುಗೆ ಏರಿದ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಅರವಿಂದ ಕೇಜ್ರಿವಾಲ್, ಈ ಬಾರಿಯ ಮೋದಿ ಅಲೆಯಲ್ಲಿ ಮಂಕಾದಂತೆ ಕಂಡು ಬರುತ್ತಿದ್ದಾರೆ.
2013ರಲ್ಲಿ ದಿಲ್ಲಿಯ ಅಧಿಕಾರದ ಗದ್ದುಗೆ ಏರುವ ಮೂಲಕ ಕೇಜ್ರಿವಾಲ ದೇಶದ ಗಮನ ಸೆಳೆದಿದ್ದರು. ಬಳಿಕ, 2014ರ ಲೋಕಸಭಾ ಚುನಾವಣೆಯಲ್ಲಿ ಅವರ ಪಕ್ಷ 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು. ಜೊತೆಗೆ, ವಾರಣಾಸಿಯಲ್ಲಿ ನರೇಂದ್ರ ಮೋದಿ ಎದುರೇ ಕೇಜ್ರಿವಾಲ್ ಸ್ಪರ್ಧೆ ಮಾಡಿದ್ದರು. ಮೋದಿ ಎದುರು ಅವರು ಸೋತರಾದರೂ, ಪಕ್ಷದ ನಾಲ್ವರು ಅಭ್ಯರ್ಥಿಗಳು ಸಂಸತ್ ಪ್ರವೇಶಿಸಿದರು.
ನಂತರ, ತಮ್ಮ ಅಲ್ಪಮತದ ಸರ್ಕಾರವನ್ನು ವಿಸರ್ಜಿಸಿ, ಚುನಾವಣೆಗೆ ಹೋದರು. 2015ರಲ್ಲಿ 70 ಕ್ಷೇತ್ರಗಳ ದಿಲ್ಲಿಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ 67 ಸ್ಥಾನಗಳನ್ನು ಗೆಲ್ಲುವ ಮೂಲಕ ಅವರ ಪಕ್ಷ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಕೇಜ್ರಿವಾಲ್ 2ನೇ ಬಾರಿಗೆ ದಿಲ್ಲಿಯ ಸಿಎಂ ಆದರು. ಅದಾದ 5 ವರ್ಷಗಳ ಬಳಿಕ, ಈಗ ಪರಿಸ್ಥಿತಿ ಬದಲಾಗಿದೆ. ಮೋದಿ ಅಲೆಯಲ್ಲಿ ಕೊಚ್ಚಿ ಹೋದ ಎಎಪಿ, ಲೋಕಸಭಾ ಚುನಾವಣೆಯಲ್ಲಿ ದಿಲ್ಲಿಯಲ್ಲಿ ಶೂನ್ಯ ಸಂಪಾದನೆ ಮಾಡಿದೆ.
7ಕ್ಕೆ 7 ಕ್ಷೇತ್ರಗಳಲ್ಲೂ ಬಿಜೆಪಿ ವಿಜಯ ಪತಾಕೆ ಹಾರಿಸಿದೆ. ಜತೆಗೆ, ಪಕ್ಷದ ಮತಗಳಿಕೆ ಪ್ರಮಾಣದಲ್ಲೂ ಕುಸಿತ ಕಂಡಿದೆ. ಕಾಂಗ್ರೆಸ್ ಜತೆ ಮೈತ್ರಿ ಸಾಧಿಸಿ, ಪಕ್ಷ ಚುನಾವಣೆಗೆ ಇಳಿದಿದ್ದರೂ, ದಿಲ್ಲಿ, ಹರಿಯಾಣ, ಪಂಜಾಬ್‌ನಲ್ಲಿ ಪಕ್ಷದ ಮತಗಳಿಕೆ ಪ್ರಮಾಣ ಶೇ.18.26ಕ್ಕೆ ಕುಸಿತವಾಗಿದೆ. 2014ರಲ್ಲಿ ಮತಗಳಿಕೆ ಪ್ರಮಾಣ ಶೇ.32.9ರಷ್ಟಿತ್ತು.