Advertisement

ದೇಶದಲ್ಲಿ ಮೋದಿ ಅಲೆ ಎದ್ದಿದೆ: ಶ್ರೀರಾಮುಲು

09:53 PM Apr 07, 2019 | Lakshmi GovindaRaju |

ಚಾಮರಾಜನಗರ: ಕಳೆದ 35 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನಾಯಕ ಸಮಾಜದ ಪರ್ಯಾಯ ಪದಗಳಾದ ತಳವಾರ ಹಾಗೂ ಪರಿವಾರವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿ ಆದೇಶ ಹೊರಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿಯನ್ನು ಸಮಾಜ ಬೆಂಬಲಿಸಬೇಕು ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಶ್ರೀರಾಮುಲು ಮನವಿ ಮಾಡಿದರು.

Advertisement

ತಾಲೂಕಿನ ಯಾನಗಹಳ್ಳಿ, ಅರಕಲವಾಡಿ, ಅಮಚವಾಡಿ, ಹರದನಹಳ್ಳಿ ಭಾಗಗಳಲ್ಲಿ ಭಾನುವಾರ ರೋಡ್‌ ಶೋ ಮೂಲಕ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸಪ್ರಸಾದ್‌ ಪರವಾಗಿ ಮತಯಾಚಿಸಿ ಅವರು ಮಾತನಾಡಿ, ಮೋದಿ ಅವರ ಜನಪರ ಯೋಜನೆಗಳು ಹಾಗೂ ಕಳೆದ ಐದು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಅಭಿವೃದ್ದಿ ಕಾರ್ಯಕ್ರಮಗಳನ್ನು ನೋಡಿ ಮತ ನೀಡಿ ಎಂದರು.

ಕೈ ನಾಯಕರ ಬಂಬಬೇಡಿ: 70 ವರ್ಷಗಳ ಕಾಲ ದೇಶವನ್ನು ಆಳ್ವಿಕೆ ಮಾಡಿದ ಕಾಂಗ್ರೆಸ್‌ ಪಕ್ಷಕ್ಕೆ ತಳವಾರ, ಪರಿವಾರ ಜಾತಿಗಳ ಸಮಸ್ಯೆ ಕಾಣಿಸಲೇ ಇಲ್ಲ. ಪದೇ ಪದೇ ಹೋರಾಟ ಮಾಡಿದರೂ ಸಹ ರಾಜ್ಯದಲ್ಲಿ ಅಧಿಕಾರದಲ್ಲಿ ಕಾಂಗ್ರೆಸ್‌ ನಾಯಕರು ಕೇಂದ್ರದವರೆಗೆ ಸಮಸ್ಯೆಯನ್ನು ತಂದು ಬಗೆಹರಿಸಲು ವಿಫ‌ಲರಾದರು. ಇದನ್ನರಿತ ನಮ್ಮ ನಾಯಕ ಸಮಾಜದ ಮುಖಂಡರಾದ ಅಪ್ಪಣ್ಣ, ರಾಮಚಂದ್ರ, ಚಿಕ್ಕಮಾದು, ಕೆಲ್ಲಂಬಳ್ಳಿ ಸೋಮನಾಯಕ ಸೇರಿ ಅನೇಕ ನಾಯಕ ಮುಖಂಡರು ಈ ಭಾಗದಲ್ಲಿ ಬಹುದೊಡ್ಡ ಸಮಸ್ಯೆಯಾಗಿದ್ದ ತಳವಾರ ಹಾಗೂ ಪರಿವಾರ ಪದಗಳನ್ನು ಎಸ್ಟಿಗೆ ಸೇರ್ಪಡೆ ಮಾಡಲು ಅನೇಕ ಹೋರಾಟಗಳನ್ನು ಮಾಡಿದರು.

ಬಿಜೆಪಿಗೆ ಮತನೀಡಿ: ದೆಹಲಿಯವರೆಗೆ ಹೋಗಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ, ಬಹಳ ವರ್ಷಗಳ ಸಮಸ್ಯೆಯನ್ನು ಒಂದೇ ದಿನದಲ್ಲಿ ಬಗೆಹರಿಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ಮನವಿಯನ್ನು ಸ್ವೀಕರಿಸಿ, ಕೇಂದ್ರ ಸಚಿವ ಸಂಪುಟದಲ್ಲಿ ವಿಚಾರವನ್ನು ಪ್ರಸ್ತಾಪ ಮಾಡಿ, ಅನುಮೋದನೆ ಪಡೆದುಕೊಂಡರು. ಇಂಥ ನಾಯಕರು ನಿಮಗೆ ಬೇಕಾ, ಕಳೆದ ಹಲವಾರು ವರ್ಷಗಳಿಂದ ಸಮಸ್ಯೆಗೆ ಸೊಪ್ಪು ಹಾಕದ ನಾಯಕರು ಬೇಕಾ ಎಂಬುವದನ್ನು ಅರ್ಥ ಮಾಡಿಕೊಂಡು ಮುಂದಿನ ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಬಿಜೆಪಿಗೆ ಮತ ಎಂದು ಮನವಿ ಮಾಡಿದರು.

ಪ್ರಸಾದ್‌ಗೆ ಬೆಂಬಲ ನೀಡಿ: ಕೇಂದ್ರದಲ್ಲಿ ವಾಜಪೇಯಿ ಸಂಪುಟದಲ್ಲಿ ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿದ್ದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್‍ರನ್ನು ಗೆಲ್ಲಿಸುವುದರಿಂದ ಪ್ರಧಾನಿ ಮೋದಿ ಅವರಿಗೆ ನಾವು ಕೊಡುಗೆ ನೀಡಬೇಕು. ಉತ್ತಮ ವ್ಯಕ್ತಿತ್ವವುಳ್ಳ ಶ್ರೀನಿವಾಪ್ರಸಾದ್‌ ಅವರು ಈ ಭಾಗದಿಂದ ಗೆದ್ದರೆ ಸಚಿವರಾಗಿ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಾರೆ. ಮುಂದಿನ ದಿನಗಳಲ್ಲಿ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಪ್ರಬಲವಾಗಿ ಸಂಘಟನೆ ಮಾಡಿ ರಾಜ್ಯದಲ್ಲಿ ಬಿಜೆಪಿ ಗೆಲುವಿಗೆ ಶ್ರೀನಿವಾಸಪ್ರಸಾದ್‌ ಗೆಲುವು ಪೂರಕವಾಗಿದೆ ಎಂದು ಮನವಿ ಮಾಡಿದರು.

Advertisement

ಏಕಾಂಗಿಯಾಗಿ ಬಿಜೆಪಿ ಎದುರಿಸಲು ಆಗಲ್ವ: ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ಕೇವಲ ಆರೋಪ ಮತ್ತು ಪ್ರತ್ಯಾರೋಪಗಳನ್ನು ಮಾಡುತ್ತಾ ಕಾಲಹರಣ ಮಾಡುತ್ತಿದೆ. ಈ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಮೋದಿ ಆಲೆಯಿಂದ ಬೆಚ್ಚಿರುವ ಜೆಡಿಎಸ್‌-ಕಾಂಗ್ರೆಸ್‌ಗಳು ಮೈತ್ರಿ ಧರ್ಮ ಪಾಲನೆ ಎಂದು ಹೇಳುತ್ತಿವೆೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಿ ಹೋಗಿತ್ತು ಇವರ ಮೈತ್ರಿ. ಬಿಜೆಪಿಯನ್ನು ಏಕಾಂಗಿಯಾಗಿ ಎದುರಿಸಲು ಸಾಧ್ಯವಾಗದ ಕಾಂಗ್ರೆಸ್‌-ಜೆಡಿಎಸ್‌ಜೊತೆಗೆ ಮೈತ್ರಿ ಮಾಡಿಕೊಂಡು ತನ್ನದೇ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಸಿ, ಇಡೀ ಪಕ್ಷವನ್ನು ದೇವೇಗೌಡರ ಕುಟುಂಬಕ್ಕೆ ಒತ್ತೆ ಇಟ್ಟಿದೆ. ಇಂಥ ನಾಟಕಗಳಿಗೆ ರಾಜ್ಯದ ಜನರು ಏ. 18 ರ ಮತದಾನದಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಮಾಜಿ ಶಾಸಕ ಸಿ.ಗುರುಸ್ವಾಮಿ ಯಾನಗಹಳ್ಳಿಯಲ್ಲಿ ಶ್ರೀರಾಮುಲುರನ್ನು ಸ್ವಾಗತಿಸಿ ಮಾತನಾಡಿ, ಕ್ಷೇತ್ರದಲ್ಲಿ ಬಿಜೆಪಿ ಪರವಾದ ಆಲೆ ಇದೆ. ವಿ. ಶ್ರೀನಿವಾಸಪ್ರಸಾದರಂಥ ಹಿರಿಯ ರಾಜಕಾರಣಿ ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಶ್ರೀರಾಮುಲು ಅವರು ಶ್ರೀನಿವಾಸಪ್ರಸಾದ್‌ ಪರವಾಗಿ ಮತ ಯಾಚನೆಗೆ ನಮ್ಮ ಗ್ರಾಮಗಳಿಗೆ ಬಂದಿದ್ದಾರೆ. ಅವರನ್ನು ಬೆಂಬಲಿಸಿ ಹೆಚ್ಚಿನ ಬಹಮತದಲ್ಲಿ ಬಿಜೆಪಿಯನ್ನು ಗೆಲ್ಲಿಸೋಣ ಎಂದು ತಿಳಿಸಿದರು.

ಜಿಪಂ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಮುಖಂಡರಾದ ಚಿನ್ನಸ್ವಾಮಿ, ಆರ್‌. ಪುಟ್ಟಮಲ್ಲಪ್ಪ, ವೃಷಭೇಂದ್ರಪ್ಪ, ಬಸಪ್ಪದೇವರು, ಕರಿನಾಯಕ, ಮಹದೇವಯ್ಯ, ಚಿಕ್ಕಸ್ವಾಮಪ್ಪ, ಗುರುಸ್ವಾಮಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next