ನವದೆಹಲಿ: ಈಗ ದೇಶದ ಮೂಲೆ ಮೂಲೆಯಲ್ಲೂ ಪ್ರಧಾನಿ ನರೇಂದ್ರ ಮೋದಿಯವರು ಬರೆದಿರುವ ಪತ್ರದ್ದೇ ಸುದ್ದಿ. ಗ್ರಾಮ ಪಂಚಾಯತಿ ಅಧ್ಯಕ್ಷರುಗಳಂತೂ ಪತ್ರ ಬಂದಿರುವ ವಿಚಾರವನ್ನು ಪದೇ ಪದೆ ಹೇಳಿಕೊಂಡು ಬೀಗಿದ್ದೇ ಬೀಗಿದ್ದು!
ಅಲ್ಲದೆ, ಗ್ರಾಮ ಸಭೆ ಕರೆದು ಪತ್ರವನ್ನು ಓದಿ ಹೇಳಬೇಕು ಎಂದೂ ಸೂಚಿಸಲಾಗಿದೆ. ಗ್ರಾಮ ಸಭೆಯಲ್ಲಿ ನೀರು ರಕ್ಷಣೆ ಮಾಡುವ ಕುರಿತು ಚರ್ಚೆ ನಡೆಸುವಂತೆಯೂ ಸಲಹೆ ನೀಡಲಾಗಿದೆ. ಚೆಕ್ ಡ್ಯಾಮ್‌ಗಳು ಮತ್ತು ಕೊಳಗಳನ್ನು ನಿರ್ಮಾಣ ಮಾಡುವಂತೆಯೂ, ಕೊಳಗಳನ್ನು ಸ್ವಚ್ಛಗೊಳಿಸುವಂತೆಯೂ ಪತ್ರದಲ್ಲಿ ಶಿಫಾರಸು ಮಾಡಲಾಗಿದೆ.
ಜಿಲ್ಲಾಧಿಕಾರಿಯಿಂದಲೇ ಹಸ್ತಾಂತರ: ಜಿಲ್ಲಾಧಿಕಾರಿಗಳೇ ನೇರವಾಗಿ ಪ್ರತಿ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಖುದ್ದಾಗಿ ಪತ್ರ ಹಸ್ತಾಂತರಿಸಬೇಕೆಂದು ಸೂಚಿಸಲಾಗಿದೆ. ಅದರಂತೆ, ಅವರು ಪತ್ರಗಳ ಹಸ್ತಾಂತರ ಕಾರ್ಯ ನಡೆಸುತ್ತಿದ್ದಾರೆ. ಈ ಪತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಿ ಮಾಡಿದ್ದು, ಮಳೆಗಾಲದಲ್ಲಿ ಮಳೆ ನೀರನ್ನು ಸಂರಕ್ಷಿಸಿಕೊಳ್ಳುವುದಕ್ಕಾಗಿ ಕ್ರಮ ಕೈಗೊಳ್ಳುವಂತೆ ಹಾಗೂ ಆ ಮೂಲಕ ಜಲಸಂರಕ್ಷಣೆಯನ್ನು ಜನಾಂದೋಲನವಾಗಿ ರೂಪಿಸುವಂತೆ ಸೂಚಿಸಲಾಗಿದೆ.
ನವಭಾರತ ನಿರ್ಮಾಣಕ್ಕೆ ಕೈಜೋಡಿಸಿ: ನೀವು ಸ್ವಚ್ಛತೆಯನ್ನು ಹೇಗೆ ಯಶಸ್ವಿ ಜನಾಂದೋಲನವನ್ನಾಗಿ ಬದಲಾಯಿಸಿದಿರೋ, ಅದೇ ರೀತಿ ಜಲ ಸಂರಕ್ಷಣೆಯ ಅಭಿಯಾನವನ್ನೂ ಜನಾಂದೋಲನವನ್ನಾಗಿ ಪರಿವರ್ತಿಸುತ್ತೀರಿ ಎಂಬ ವಿಶ್ವಾಸ ನನಗಿದೆ. ಅಸಾಧ್ಯವಾದದ್ದನ್ನೂ ಸಾಧಿಸುವ ಮೂಲಕ ನೀವೆಲ್ಲರೂ ನವಭಾರತದ ನಿರ್ಮಾಣಕ್ಕೆ ಕೈಜೋಡಿಸಿ ಎಂದೂ ಮೋದಿ ಕರೆ ನೀಡಿದ್ದಾರೆ.
Advertisement
ಅಂದ ಹಾಗೆ ಏನಿದು ‘ಪತ್ರ’ದ ಕಥೆ ಎಂದು ಯೋಚಿಸುತ್ತಿದ್ದೀರಾ? ದೇಶದ ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ನಿವಾರಣೆ ಕುರಿತು ದೇಶಾದ್ಯಂತ ಎಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ. ಈ ಪತ್ರ ಈಗ ಭಾರಿ ಜನಪ್ರಿಯವಾಗಿದೆ ಮಾತ್ರವಲ್ಲ, ಪತ್ರದ ಜೊತೆಗೆ ಇದನ್ನು ತಲುಪಿಸಿದ ರೀತಿ ಕೂಡ ವಿಶಿಷ್ಟವಾಗಿದೆ.
Related Articles
ಆರೋಗ್ಯವಾಗಿದ್ದೀರಾ…?
ಹಿಂದಿ ಮತ್ತು ಇಂಗ್ಲಿಷಿನಲ್ಲಿ ಪತ್ರ ಬರೆಯಲಾಗಿದ್ದು, ಪತ್ರದಲ್ಲಿ ಆತ್ಮೀಯ ಭಾವವಿದೆ. ‘ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ನಮಸ್ಕಾರ. ನೀವು ಮತ್ತು ನಿಮ್ಮ ಗ್ರಾಮದ ಜನರು ಆರೋಗ್ಯವಂತರಾಗಿದ್ದೀರಿ ಎಂದು ನಾನು ಭಾವಿಸುತ್ತೇನೆ. ಮಳೆಗಾಲ ಇನ್ನೇನು ಶುರುವಾಗಲಿದೆ. ಮಳೆಯ ಮೂಲಕ ಇಷ್ಟೆಲ್ಲ ನೀರು ನಮಗೆ ಸಿಗುತ್ತಿರುವುದಕ್ಕೆ ನಾವು ದೇವರಿಗೆ ಆಭಾರಿಯಾಗಿದ್ದೇವೆ. ನಿಸರ್ಗವು ನೀಡಿರುವ ಈ ಕೊಡುಗೆಯನ್ನು ಗೌರವಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ. ಮಳೆಗಾಲ ಶುರುವಾದ ಕೂಡಲೇ, ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಮಳೆ ನೀರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಾವು ಎಲ್ಲ ಪ್ರಯತ್ನವನ್ನೂ ನಡೆಸಬೇಕಿದೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.
Advertisement