Advertisement

ಇತಿಹಾಸ ಸೃಷ್ಟಿಸುವಂತೆ ಮೋದಿ ಗೆಲ್ಲಿಸಿ

10:22 AM Feb 15, 2019 | Team Udayavani |

ರಾಯಚೂರು: ನಮ್ಮ ಮೊದಲ ಆದ್ಯತೆ ದೇಶದ ಪ್ರಧಾನಿ ನರೇಂದ್ರ ಮೋದಿ ಆಗಬೇಕೇ ವಿನಃ, ನಾವು ನೀವಲ್ಲ. ಇತಿಹಾಸ ಸೃಷ್ಟಿ ಮಾಡುವ ರೀತಿಯಲ್ಲಿ ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ಗೆಲ್ಲಿಸಬೇಕು ಎಂದು ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ಕರೆ ನೀಡಿದರು.
 
ಸಿಂಧನೂರಿನಲ್ಲಿ ಗುರುವಾರ ಸಂಜೆ ನಡೆದ ಶಕ್ತಿ ಕೇಂದ್ರ ಪ್ರಮುಖರ ಸಮಾವೇಶದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು. ದೇಶದಲ್ಲಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಸಣ್ಣ ಸಣ್ಣ ಪಕ್ಷಗಳು ಒಂದಾಗಿವೆ. ಆದರೆ, ಮೋದಿಯವರ ವಿರುದ್ಧ ನಿಲ್ಲುವಂತ ಗಂಡಸು ಯಾರಾದರೂ ಇದ್ದಾರಾ ..? ಪ್ರಿಯಾಂಕಾ ಗಾಂಧಿ  ಅವರಿಗೆ ಸಾಟಿ ಆಗುವರೇ ಎಂದು ಪ್ರಶ್ನಿಸಿದ ಅವರು, ನರೇಂದ್ರ ಮೋದಿ ಸಮುದ್ರದ ಅಲೆಯಂತೆ, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

Advertisement

ಶಕ್ತಿ ಕೇಂದ್ರದ ಪ್ರಮುಖರು ಪಕ್ಷದ ದೊಡ್ಡ ಆಸ್ತಿಯಿದ್ದಂತೆ. ನೀವು ಮನಸ್ಸು ಮಾಡಿದರೆ ಹೈದರಾಬಾದ್‌ -ಕರ್ನಾಟಕ ಭಾಗದ ಐದು ಕ್ಷೇತ್ರಗಳನ್ನು ಗೆಲ್ಲಬಹುದು. ದೇಶದ ಪ್ರಧಾನಿ ನರೇಂದ್ರ ಮೋದಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ 104 ಸ್ಥಾನ ಗೆದ್ದಿದ್ದು, ಇನ್ನೊಂದಿಷ್ಟು ಸ್ಥಾನ ಬಂದಿದ್ದರೆ ರಾಜ್ಯದಲ್ಲೂ ಅಧಿಕಾರ ಹಿಡಿಯುತ್ತಿದ್ದೆವು. ಅಂಥ ತಪ್ಪು ಲೋಕಸಭೆ ಚುನಾವಣೆಯಲ್ಲಿ ಮರುಕಳಿಸದಂತೆ ಮಾಡಲು ಶಕ್ತಿಕೇಂದ್ರದ ಪ್ರಮುಖರು ಎಚ್ಚರ ವಹಿಸಬೇಕು. ರಾಜ್ಯದಲ್ಲಿ 25ಕ್ಕೂ ಅಧಿಕ ಸ್ಥಾನ ಗೆಲ್ಲುವ ಸಂಕಲ್ಪ ಮಾಡಿದ್ದೇವೆ ಎಂದರು.

ಕಾಂಗ್ರೆಸ್‌ ಆಡಳಿತದಲ್ಲಿ ದೇಶದ ಸ್ಥಿತಿಗತಿ ಏನಾಗಿತ್ತು. ಆದರೆ, ಇಂದು ದೇಶದ ಸ್ಥಿತಿ ಹೇಗಿದೆ ಎಂಬುದನ್ನು ಅವಲೋಕಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇವಲ ದೇಶ ಮಾತ್ರವಲ್ಲ ಇಡೀ ವಿಶ್ವವೇ ಒಪ್ಪಿದೆ. ಭಾರತ ಅಮೇರಿಕಾ ಮೀರಿಸಿ ನಂ.1 ಸ್ಥಾನಕ್ಕೆ ಬರುವ ಕಾಲ ದೂರವಿಲ್ಲ. ದಿನದ 24 ಗಂಟೆ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಕ್ತಿ ತುಂಬಬೇಕಾದರೆ ಬಿಜೆಪಿಯನ್ನು ಗೆಲ್ಲಿಸಬೇಕು. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದರೆ ಮಾತ್ರ ರಾಜ್ಯದಲ್ಲಿ ಸರ್ಕಾರ ಬದಲಿಸಲು ಸಾಧ್ಯ ಎಂದರು.

ಸರ್ಕಾರ ಉಳಿಸಿಕೊಳ್ಳಲು ಅಧಿವೇಶನದಲ್ಲಿ ಗದ್ದಲ: ಶೆಟ್ಟರ್‌
ಸಿಂಧನೂರು: ವಿಧಾನಸಭೆ ಬಜೆಟ್‌ ಅಧಿವೇಶನದಲ್ಲಿ ಯಾವುದೇ ಜನಪರ ವಿಷಯಗಳನ್ನು ಚರ್ಚಿಸಲು ಅವಕಾಶ ನೀಡದೇ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಹಾಗೂ ಸಚಿವರು ಸರ್ಕಾರ ಉಳಿಸಿಕೊಳ್ಳಲು ಬಿಜೆಪಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಗದ್ದಲ ಎಬ್ಬಿಸಿದ್ದಾರೆ. ಇದೊಂದು ಗೂಂಡಾ
ಸರ್ಕಾರ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ದೂರಿದರು. 

ಗುರುವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ದಿನಗಳ ಕಾಲ ನಡೆದ ಅಧಿವೇಶನದಲ್ಲಿ ಬರೀ ಸರ್ಕಾರ ಉಳಿಸಿಕೊಳ್ಳುವ ಕಸರತ್ತನ್ನು ಮೈತ್ರಿ ಸರ್ಕಾರದ ಪಕ್ಷಗಳ ನಾಯಕರು ಮಾಡಿದ್ದಾರೆ. ಮುಖ್ಯಮಂತ್ರಿ
ಹಾಗೂ ಸಚಿವರು ಮುಂಚಿತವಾಗಿ ಮಾತನಾಡಿಕೊಂಡೇ ಸದನದಲ್ಲಿ ಗದ್ದಲ ಎಬ್ಬಿಸಿದ್ದಾರೆ. ವಿರೋಧ ಪಕ್ಷಕ್ಕೆ ಜನಸಾಮಾನ್ಯರ ವಿಷಯಗಳ ಬಗ್ಗೆ ಚರ್ಚಿಸಲು ಅವಕಾಶ ನೀಡಲಿಲ್ಲ ಎಂದರು.

Advertisement

ಮೈತ್ರಿ ಪಕ್ಷಗಳ ನಾಯಕರಿಗೆ ಪ್ರಧಾನಿ ಮೋದಿ, ರಾಜ್ಯ ಬಿಜೆಪಿ ನಾಯಕರೇ ಟಾರ್ಗೆಟ್‌ ಆಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಬೆಳೆಯಬಾರದು ಎಂಬ ದುರ್ಬುದ್ಧಿ ಇವರದಾಗಿದೆ. ಆಪರೇಷನ್‌ ಕಮಲ ಆಡಿಯೋ ಬಗ್ಗೆ ಎಸ್‌ಐಟಿ ತನಿಖೆ ಬೇಡ, ನ್ಯಾಯಾಂಗ ತನಿಖೆ ನಡೆಸಬೇಕೆಂಬ ಬೇಡಿಕೆಗೂ ಸ್ಪಂದಿಸಿಲ್ಲ. ಈ ಹಿಂದೆ ರಾಮಕೃಷ್ಣ ಹೆಗಡೆ ಅವರು ಸಿಎಂ ಆಗಿದ್ದಾಗ ಇಂಥದೇ ಪ್ರಕರಣದಲ್ಲಿ ನ್ಯಾಯಾಂಗ ತನಿಖೆಗೆ ಕೊಟ್ಟ ಉದಾಹರಣೆ ಇದೆ ಎಂದರು.

ಕಾಂಗ್ರೆಸ್‌ ಪಕ್ಷದವರು ರಾಹುಲ್‌ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳಲಿ. ದೇಶದಲ್ಲಿ ಎಲ್ಲ ಪಕ್ಷದವರನ್ನು ಖರೀದಿ ಮಾಡಿಕೊಂಡಿದ್ದಾರೆ. ಹಾಗಾಗಿ ಖರೀದಿ ಆದವರೆಲ್ಲ ನಾನು ಪ್ರಧಾನಿ ಆಗುತ್ತೇನೆ ಎನ್ನುತ್ತಿದ್ದಾರೆ. ಆದರೆ ಬಿಜೆಪಿಯಲ್ಲಿ ಮೋದಿ ಒಬ್ಬರೇ ಪ್ರಧಾನಿ ಅಭ್ಯರ್ಥಿ ಎಂದು ನಮ್ಮೆಲ್ಲ ನಾಯಕರು ಗಟ್ಟಿ ಧ್ವನಿಯಿಂದ ಹೇಳುತ್ತೇವೆ. ಕಾಂಗ್ರೆಸ್‌ನವರಿಗೆ ತಾಕತ್‌ ಇದ್ದರೆ ಒಬ್ಬರ ಹೆಸರು ಹೇಳಲಿ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಆ ಭಯದಿಂದಲೇ ರಾಜ್ಯದಲ್ಲಿ ಯುವ ಕಾಂಗ್ರೆಸ್‌ ನಾಯಕರು ನಮ್ಮ ನಾಯಕರ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next