Advertisement

ಬರಾಕ್‌ ಡೀಲ್‌: ಮೋದಿ ಇಸ್ರೇಲ್ ಪ್ರವಾಸದ ಆದ್ಯತೆ

03:45 AM Jul 04, 2017 | Harsha Rao |

ಜೆರುಸಲೇಮ್‌: ಪ್ರಧಾನಿ ನರೇಂದ್ರ ಮೋದಿ ಅವರ ಮೂರು ದಿನಗಳ ಇಸ್ರೇಲ್‌ ಪ್ರವಾಸ ಮಂಗಳವಾರದಿಂದ ಆರಂಭವಾಗಲಿದೆ. ರಕ್ಷಣಾ ಕ್ಷೇತ್ರದಲ್ಲಿನ ಒಪ್ಪಂದ ಪ್ರವಾಸದ ಕೇಂದ್ರ ಬಿಂದುವಾಗಲಿದೆ. ಭಾರತ ಮತ್ತು ಇಸ್ರೇಲ್‌ ನಡುವೆ ರಾಜತಾಂತ್ರಿಕ ಸಂಬಂಧ ಆರಂಭವಾಗಿ 25 ವರ್ಷಗಳು ಪೂರ್ತಿಗೊಂಡಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ.

Advertisement

ಇದರ ಜತೆಗೆ ವಿಶ್ವಾದ್ಯಂತ ಪ್ರಮುಖ ಸಂಸ್ಥೆಗಳ ಮೇಲೆ ಸೈಬರ್‌ ದಾಳಿ ನಡೆದಿರುವ ಹಿನ್ನೆಲೆಯಲ್ಲಿಯೂ ಈ ಪ್ರವಾಸ ಮಹತ್ವ ಪಡೆದುಕೊಂಡಿದೆ. ರಕ್ಷಣೆ, ಸೈಬರ್‌ ಭದ್ರತೆ, ಆಹಾರ ಭದ್ರತೆ,  ಕೃಷಿ ನೀರಿನ ನಿರ್ವಹಣೆ ಸೇರಿ ಪ್ರಮುಖ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಜು.4 ಕೇವಲ ವಿಹಾರಾರ್ಥ ಭೇಟಿಯಾಗಿ ನಿಗದಿತವಾಗಿದೆ. ಇಸ್ರೇಲ್‌ನ ವಿದೇಶಾಂಗ ಇಲಾಖೆಯ ಮಹಾ ನಿರ್ದೇಶಕ ಯುವಲ್‌ ರೋಟೆಮ್‌ ಪ್ರಧಾನಿ ಮೋದಿ ಪ್ರವಾಸದ ವಿವರ ನೀಡಿದ್ದಾರೆ. 

ಬರಾಕ್‌ ಕ್ಷಿಪಣಿಯೇ ಆದ್ಯತೆ: ಪ್ರಧಾನಿ ಮೋದಿ ಮತ್ತು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಭೇಟಿ ವೇಳೆ ಬರಾಕ್‌ 8 ಕ್ಷಿಪಣಿಯನ್ನು ಜಂಟಿಯಾಗಿ ಉತ್ಪಾದಿಸುವ ಬಗ್ಗೆ ಚರ್ಚಿಸಲಿದ್ದಾರೆ. “ಮೇಕ್‌ ಇನ್‌ ಇಂಡಿಯಾ’ ಘೋಷವಾಕ್ಯದಡಿಯಲ್ಲಿ ಅದನ್ನು ಉತ್ಪಾದಿಸುವ ಬಗ್ಗೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಕೇವಲ ಸ್ಥಳೀಯ ಕಂಪನಿಗಳೇ ಅವುಗಳನ್ನು ಉತ್ಪಾದಿಸುವ ಬಗ್ಗೆ ಟೆಂಡರ್‌ ಪಡೆದುಕೊಳ್ಳುವ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ ಎಂದು ಇಸ್ರೇಲ್‌ ಏರೋಸ್ಪೇಸ್‌ ಇಂಡಸ್ಟ್ರೀಸ್‌ನ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಎಲಿ ಅಲ್ಫಾಸಿ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಮತ್ತು ಚೀನಾದಿಂದ ಭಾರತ ಸವಾಲುಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸೇನೆಯನ್ನು ತಾಂತ್ರಿಕವಾಗಿ ಮೇಲ್ದರ್ಜೆಗೆ ಏರಿಸಬೇಕಾದ ಅಗತ್ಯವಿದೆ. ಅದಕ್ಕಾಗಿ ಕೇಂದ್ರ ಸರ್ಕಾರ 6.5 ಲಕ್ಷ ಕೋಟಿ ರೂ. ವಿನಿಯೋಗ ಮಾಡಬೇಕಾಗಿದೆ. ಇಸ್ರೇಲ್‌ನಲ್ಲಿರುವ ಕೆಲ ರಕ್ಷಣಾ ಸಾಮಗ್ರಿಗಳ ಉತ್ಪಾದನಾ ಕೇಂದ್ರಗಳಿಗೂ ಅವರು ಭೇಟಿ ನೀಡಲಿದ್ದಾರೆ. ಡ್ರೋನ್‌, ರಾಡಾರ್‌ ಮತ್ತು ಕ್ಷಿಪಣಿ ತಂತ್ರಜ್ಞಾನಗಳ ಅಭಿವೃದ್ಧಿ ಬಗ್ಗೆಯೂ ಚರ್ಚಿಸಲಿದ್ದಾರೆ. ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ನವೋದ್ಯಮಗಳ ಬಗ್ಗೆಯೂ ಚರ್ಚಿಸಲಿದ್ದಾರೆ. 

ಆಹಾರ ಭದ್ರತೆ ಬಗ್ಗೆ ಒಪ್ಪಂದ: ಆಹಾರ ಸಂಸ್ಕರಣೆಯಲ್ಲಿ ಇಸ್ರೇಲ್‌ ಅತ್ಯುನ್ನತ ತಂತ್ರಜ್ಞಾನ ಹೊಂದಿರುವುದರಿಂದ ಪ್ರಧಾನಿ ಮೋದಿ ಈ ನಿಟ್ಟಿನಲ್ಲೂ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ದೇಶದ 15 ರಾಜ್ಯಗಳಲ್ಲಿ ಇಸ್ರೇಲ್‌ ನೆರವಿನಿಂದ ಆರಂಭಿಸಲಾಗಿರುವ ಕೃಷಿ ತಂತ್ರಜ್ಞರ ಕೇಂದ್ರಗಳನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆಯೂ ಈ ಸಂದರ್ಭದಲ್ಲಿ ನಿರ್ಧರಿಸಲಾಗುತ್ತದೆ.

Advertisement

ಪ್ರಮುಖರ ಜತೆ ಭೇಟಿ: ಪ್ರವಾಸದ ವೇಳೆ ಮೋದಿ ಇಸ್ರೇಲ್‌ ಅಧ್ಯಕ್ಷ ರುÂವಿನ್‌ ರೆವಿÉನ್‌, ಪ್ರತಿಪಕ್ಷ ನಾಯಕ ಇಸಾಕ್‌ ಹಜೋìಗ್‌ರನ್ನೂ ಭೇಟಿ ಮಾಡಲಿದ್ದಾರೆ.  ಆದರೆ, ಪ್ಯಾಲೆಸ್ತೀನ್‌ನ ರಮಲ್ಲಾಗೆ ಭೇಟಿ ನೀಡುವ ಕಾರ್ಯಕ್ರಮ ಇಲ್ಲ. 

ಸಂಬಂಧ ವಿಶೇಷವಾದದ್ದು: ಇಸ್ರೇಲ್‌ ಜತೆಗಿನ ಭಾರತದ ಸಂಬಂಧ ವಿಶೇಷವಾದದ್ದು ಎಂದು  ಇಸ್ರೇಲ್‌ ಪ್ರವಾಸದ ಮುನ್ನಾದಿನವಾದ ಸೋಮವಾರ ಅಲ್ಲಿನ ಪತ್ರಿಕೆ “ಇಸ್ರೇಲ್‌ ಹೇಯೊಮ್‌’ಗೆ ನೀಡಿದ ಸಂದರ್ಶನ ದಲ್ಲಿ ಮೋದಿ ಹೇಳಿದ್ದಾರೆ.  ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಈ ಪ್ರವಾಸ ಮಹತ್ವದ್ದು ಎಂದಿದ್ದಾರೆ. ಎರಡೂ ದೇಶಗಳ ನಾಗರಿಕರ ನಡುವೆ ಶತಮಾನಗಳ ಹಿಂದಿನ ಆಳವಾದ ನಂಟಿದೆ. ಇಸ್ರೇಲ್‌ ಎನ್ನುವುದು ತಂತ್ರಜ್ಞಾನದ ದೀಪವಿದ್ದಂತೆ. ಅದು ಎಲ್ಲ ರೀತಿಯ ಸವಾಲುಗಳನ್ನೂ ಮೆಟ್ಟಿನಿಂತು ಬೆಳೆದಂಥ ದೇಶ. ಆ ದೇಶದ ಬಗ್ಗೆ ನಮ್ಮ ಜನರಲ್ಲಿರುವ ಒಳ್ಳೆಯ ಭಾವನೆಗಳನ್ನೇ ನಾನೂ ಹೊಂದಿದ್ದೇನೆ ಎಂದೂ ಅವರು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷರ ಮಾದರಿ ಅನುಸರಿಸಲಿರುವ ಇಸ್ರೇಲ್‌ ಪ್ರಧಾನಿ
ಕಳೆದ ತಿಂಗಳು ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶ್ವೇತಭವನದಲ್ಲಿ ಔತಣ ಕೂಟ ಆಯೋಜಿಸಿದ್ದರು. ಜತೆಗೆ ಒಂದು ದಿನ ಪೂರ್ತಿ ಭಾರತದ ಪ್ರಧಾನಿ ಜತೆಗೆ ಇದ್ದರು. ಮೂರು ದಿನಗಳ  ಭೇಟಿ ಅವಧಿಯಲ್ಲಿ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಟ್ರಂಪ್‌ರಂತೆ ನರೇಂದ್ರ ಮೋದಿ ಜತೆಗೆ ಇರಲಿದ್ದಾರೆ. ಜತೆಗೆ ವಿಶೇಷ ಔತಣಕೂಟವನ್ನೂ ಏರ್ಪಡಿಸಲಿದ್ದಾರೆ. ಸಾಮಾನ್ಯವಾಗಿ ಇಸ್ರೇಲ್‌ ಪ್ರಧಾನಿ ಆ ದೇಶಕ್ಕೆ ಭೇಟಿ ನೀಡುವ ವಿದೇಶಿ ನಾಯಕರ ಜತೆಗೆ ಒಂದು ಬಾರಿ ಅಧಿಕೃತ ಸಭೆ ಅಥವಾ ಔತಣ ಕೂಟದಲ್ಲಿ ಭಾಗವಹಿಸುತ್ತಾರೆ. ಆದರೆ ಮೋದಿಯವರನ್ನು ಇಸ್ರೇಲ್‌ ಪ್ರಧಾನಿಯೇ ಖುದ್ದಾಗಿ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳುವ ಸಾಧ್ಯತೆ ಇದೆ.

ಏನೇನು ಕಾರ್ಯಕ್ರಮಗಳು?
– ವಿಮಾನ ನಿಲ್ದಾಣದಲ್ಲಿ ಖುದ್ದು ಇಸ್ರೇಲ್‌ ಪ್ರಧಾನಿ ನೆತನ್ಯಾಹುರಿಂದಲೇ ಪಿಎಂ ಮೋದಿಗೆ ಸ್ವಾಗತ
– ಇಸ್ರೇಲ್‌ ಪ್ರಧಾನಿ, ಅಧ್ಯಕ್ಷ, ಪ್ರತಿಪಕ್ಷಗಳ ನಾಯಕರ ಜತೆ ಭೇಟಿ, ಮಾತುಕತೆ
– ನಾಲ್ಕು ಸಾವಿರ ಮಂದಿ ಭಾರತೀಯ ರನ್ನುದ್ದೇಶಿಸಿ ಪ್ರಧಾನಿ ಭಾಷಣ. ರಸಾಯನಶಾಸ್ತ್ರ, ಕೃಷಿ, ಜೀವಶಾಸ್ತ್ರ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಜತೆ ಪ್ರತ್ಯೇಕ ಸಂವಾದ.
– ಹೈಫಾದಲ್ಲಿರುವ ಭಾರತೀಯ ಸೈನಿಕರ ಸ್ಮಾರಕಕ್ಕೆ ಭೇಟಿ, ಗೌರವ ಸಲ್ಲಿಕೆ. 

Advertisement

Udayavani is now on Telegram. Click here to join our channel and stay updated with the latest news.

Next