Advertisement

ಕೊಹಿನೂರ್‌ ವಜ್ರವನ್ನು ಮರಳಿ ತರಲು ಮೋದಿ ಯತ್ನ

10:11 PM May 14, 2023 | Team Udayavani |

ನವದೆಹಲಿ: “ಬೆಳಕಿನ ಶಿಖರ” ಎಂದೇ ಕರೆಯಲ್ಪಡುವ ಕೊಹಿನೂರು ವಜ್ರವನ್ನು ಮರಳಿ ಭಾರತಕ್ಕೆ ತರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊಸ ಹೆಜ್ಜೆಯಿಟ್ಟಿದೆ. ಕೊಹಿನೂರು ಮಾತ್ರವಲ್ಲದೇ ಬ್ರಿಟಿಷರ ಆಡಳಿತಾವಧಿಯಲ್ಲಿ ಭಾರತದಿಂದ ಹೊತ್ತೂಯ್ದಿದ್ದ ಇತರೆ ಅನೇಕ ಅಮೂಲ್ಯ ವಸ್ತುಗಳನ್ನು ವಾಪಸ್‌ ತರುವ ಉದ್ದೇಶದಿಂದ ಶೀಘ್ರದಲ್ಲೇ ರಾಜತಾಂತ್ರಿಕ ಅಭಿಯಾನವೊಂದನ್ನು ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿದೆ.

Advertisement

ಮೋದಿ ಆಸ್ಥೆ:

ಈ ರಾಜತಾಂತ್ರಿಕ ಅಭಿಯಾನವನ್ನು “ಗತಕಾಲದ ಪರಿಗಣನೆ’ ಎಂದು ವ್ಯಾಖ್ಯಾನಿಸಲಾಗಿದ್ದು, ಯುನೈಟೆಡ್‌ ಕಿಂಗ್‌ಡಮ್‌ ಎದುರಿಸಲಿರುವ ಅತಿದೊಡ್ಡ “ವಾಪಸಾತಿ ಬೇಡಿಕೆ’ ಇದಾಗಿರಲಿದೆ. ಕೊಹಿನೂರು ವಜ್ರ ಮತ್ತು ಭಾರತದ ಕಲಾಕೃತಿಗಳನ್ನು ಮರಳಿ ತರುವುದಕ್ಕೆ ಖುದ್ದು ಪ್ರಧಾನಿ ಮೋದಿಯವರೇ ಆಸ್ಥೆ ವಹಿಸಿದ್ದು, ಆದ್ಯತೆಯ ಮೇರೆಗೆ ಈ ಕೆಲಸ ನಡೆಯಬೇಕೆಂದು ಸೂಚಿಸಿದ್ದಾರೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ್‌ ಮೋಹನ್‌ ಹೇಳಿದ್ದಾರೆ.

ಈ ವರ್ಷವೇ ಆರಂಭ:

ಭಾರತ ಮೂಲದ ಅಮೂಲ್ಯ ಕಲಾಕೃತಿಗಳನ್ನು ಹೊಂದಿರುವ, ಖರೀದಿಸಿರುವಂಥ ಯುಕೆಯಲ್ಲಿನ ವಿವಿಧ ಸಂಸ್ಥೆಗಳನ್ನು ಮೊದಲಿಗೆ ಲಂಡನ್‌ನಲ್ಲಿರುವ ರಾಜತಾಂತ್ರಿಕ ಅಧಿಕಾರಿಗಳು ಸಂಪರ್ಕಿಸಿ, ಔಪಚಾರಿಕ ಕೋರಿಕೆ ಸಲ್ಲಿಸಲಿದ್ದಾರೆ. ಈ ಪ್ರಕ್ರಿಯೆಯು ಪ್ರಸಕ್ತ ವರ್ಷವೇ ಆರಂಭವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

1849ರಿಂದಲೂ ಕೊಹಿನೂರು ವಜ್ರವು ಬ್ರಿಟಿಷ್‌ ರಾಜಮನೆತನದ ವಶದಲ್ಲಿದೆ. 1849ರಲ್ಲಿ 10 ವರ್ಷದವರಾಗಿದ್ದ ಭಾರತದ ಮಹಾರಾಜ ದುಲೀಪ್‌ ಸಿಂಗ್‌ ಅವರಿಂದ ಬಲವಂತವಾಗಿ ಲಾಹೋರ್‌ ಒಪ್ಪಂದಕ್ಕೆ ಸಹಿ ಹಾಕಿಸಿ, ಕೊಹಿನೂರು ವಜ್ರವನ್ನು ಬ್ರಿಟಿಷರು ಒಯ್ದರು ಎನ್ನಲಾಗಿದೆ. ಆದರೆ, “ಕೊಹಿನೂರು ವಜ್ರವು ಭಾರತದಿಂದ ಈಸ್ಟ್‌ ಇಂಡಿಯಾ ಕಂಪನಿಗೆ ನೀಡಲ್ಪಟ್ಟ ಉಡುಗೊರೆಯಾಗಿದೆ’ ಎನ್ನುವುದು ಬ್ರಿಟಿಷರ ವಾದ. ನಂತರದಲ್ಲಿ, ಕೊಹಿನೂರ್‌ ವಜ್ರವು ಬ್ರಿಟನ್‌ ರಾಣಿಯ ಕಿರೀಟದಲ್ಲಿ 2 ಸಾವಿರದಷ್ಟು ಇತರೆ ವಜ್ರಗಳೊಂದಿಗೆ ಸ್ಥಾನ ಪಡೆದುಕೊಂಡಿತು. ಈ ವಜ್ರವು ಭಾರತದಿಂದ ಕೊಂಡೊಯ್ಯುವ ವೇಳೆ 186 ಕ್ಯಾರೆಟ್‌ ಇತ್ತು.

ಬೇರೆ ಇನ್ನೇನಿವೆ?

ತೈಮೂರನ ಮಾಣಿಕ್ಯ, ಟಿಪ್ಪು ಸುಲ್ತಾನ್‌ ಒಡೆತನದ ರತ್ನಖಚಿತ ಹುಲಿಯ ತಲೆಯ ಕಲಾಕೃತಿ, ಟಿಪ್ಪು ಸುಲ್ತಾನನ ಹುಲಿಯ ಪ್ರತಿಕೃತಿ, ಅಮರಾವತಿ ಮಾರ್ಬಲ್‌, ಹರಿಹರ ವಿಗ್ರಹ, ಶಹಜಹಾನನ ವೈನ್‌ ಕಪ್‌ಗಳು, ಮಹಾರಾಜ ರಣಜಿತ್‌ ಸಿಂಗ್‌ನ ಸಿಂಹಾಸನ ಮತ್ತು ಹಿಂದೂ ದೇವದೇವತೆಗಳ ವಿಗ್ರಹಗಳು, ಕಲಾಕೃತಿಗಳು.

ಸಂಪತ್ತಿನ ಮೌಲ್ಯ

1765ರಿಂದ 1938ರ ಅವಧಿಯಲ್ಲಿ ಬ್ರಿಟಿಷರು ಭಾರತದಿಂದ ಹೊತ್ತೂಯ್ದ ಸಂಪತ್ತಿನ ಮೌಲ್ಯ 45 ಲಕ್ಷಕೋಟಿ ಡಾಲರ್‌ ಎಂದು 2018ರಲ್ಲಿ ಅರ್ಥಶಾಸ್ತ್ರಜ್ಞರಾದ ಉತ್ಸಾ ಪಟ್ನಾಯಕ್‌ ಅವರ ಸಂಶೋಧನಾ ವರದಿ ಹೇಳಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next