ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಭಾರತಕ್ಕೆ ಕೋವಿಡ್ ಲಸಿಕೆ ಪೂರೈಕೆ ಬಗ್ಗೆ ಚರ್ಚೆ ನಡೆಸಿದ ಮೋದಿ, ಸಂಕಷ್ಟ ಕಾಲದಲ್ಲಿ ಯುಎಸ್ ಸರ್ಕಾರ ಮತ್ತು ಭಾರತೀಯ ವಲಸಿಗರ ಬೆಂಬಲ ಹಾಗೂ ಒಗ್ಗಟ್ಟಿಗೆ ಧನ್ಯವಾದಗಳನ್ನು ತಿಳಿಸಿದರು.
ಪ್ರಧಾನಮಂತ್ರಿ ಕಾರ್ಯಾಲಯ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಜಾಗತಿಕ ಲಸಿಕಾ ಹಂಚಿಕೆ ಕಾರ್ಯತಂತ್ರದ ಅಡಿಯಲ್ಲಿ ಭಾರತ ಸೇರಿದಂತೆ ಇತರೆ ದೇಶಗಳಿಗೂ ಕೋವಿಡ್ ಲಸಿಕೆ ಹಂಚಿಕೆ ಮಾಡುವ ಬಗ್ಗೆ ಅಮೆರಿಕ ಚಿಂತಿಸುತ್ತಿದೆ ಎಂದು ಕಮಲಾ ಹ್ಯಾರಿಸ್ ತಿಳಿಸಿದ್ದಾರೆಂದು ಹೇಳಲಾಗಿದೆ.
ಅಮೆರಿಕದ ಈ ನಿರ್ಧಾರಕ್ಕಾಗಿ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಗೆ ಪ್ರಧಾನಮಂತ್ರಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ಯುಎಸ್ ಸರ್ಕಾರ, ವ್ಯವಹಾರಗಳು ಮತ್ತು ಯುಎಸ್ ನಲ್ಲಿರುವ ಭಾರತೀಯ ವಲಸಿಗ ಸಮುದಾಯದಿಂದ ಭಾರತಕ್ಕೆ ದೊರೆತ ಎಲ್ಲಾ ರೀತಿಯ ಬೆಂಬಲ ಮತ್ತು ಒಗ್ಗಟ್ಟಿನ ಬಗ್ಗೆಯೂ ಮೋದಿ ಮೆಚ್ಚುಗೆ ಸೂಚಿಸಿದರು.
ಲಸಿಕೆ ತಯಾರಿಕೆ ಕ್ಷೇತ್ರ ಸೇರಿದಂತೆ ಅಮೆರಿಕ ಮತ್ತು ಭಾರತದ ನಡುವೆ ಆರೋಗ್ಯ ಸವಲತ್ತು ಪೂರೈಕೆ ಸರಪಳಿಯನ್ನು ಬಲಪಡಿಸುವ ನಿರಂತರ ಪ್ರಯತ್ನಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು.
ಜಾಗತಿಕ ಆರೋಗ್ಯ ಪರಿಸ್ಥಿತಿಯ ನಿಯಂತ್ರಣಕ್ಕೆ ಬಂದ ಕೂಡಲೇ ಅಮೆರಿಕದ ಉಪಾಧ್ಯಕ್ಷರನ್ನು ಭಾರತಕ್ಕೆ ಸ್ವಾಗತಿಸುವ ಭರವಸೆಯನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದ್ದಾರೆ.