ಪಟಿಯಾಲ: ಪಂಜಾಬ್‌ನಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ ಡ್ರಗ್ಸ್ ದಂಧೆ ಜೋರಾಗಿದ್ದು, ಸರಕಾರ ಸಾಲದಲ್ಲಿದೆ ಎಂದು ಕಿಡಿ ಕಾರಿದ್ದಾರೆ.
ಜೂನ್ 1 ರಂದು ಏಳನೇ ಹಂತದ ಲೋಕಸಭಾ ಚುನಾವಣೆಗಾಗಿ ರಾಜ್ಯದಲ್ಲಿ ತಮ್ಮ ಮೊದಲ ಚುನಾವಣ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಪಂಜಾಬ್ ದೇಶಕ್ಕೆ ಕೃಷಿಯಿಂದ ಉದ್ಯಮದವರೆಗೆ ವಿವಿಧ ಕ್ಷೇತ್ರಗಳಲ್ಲಿ ನಾಯಕತ್ವವನ್ನು ನೀಡಿದೆ ಎಂದರು.
ಡ್ರಗ್ ದಂಧೆ ಬೆಳೆಯುತ್ತಿರುವಾಗಲೇ ಕೈಗಾರಿಕೆಗಳು ಈಗ ಪಂಜಾಬ್ ತೊರೆಯುತ್ತಿವೆ. ಸಂಪೂರ್ಣ ಸರಕಾರ ಸಾಲದ ಮೇಲೆ ನಡೆಯುತ್ತಿದೆ.ಮರಳು ಮತ್ತು ಡ್ರಗ್ಸ್ ಮಾಫಿಯಾ ಮತ್ತು ಶೂಟರ್ ಗ್ಯಾಂಗ್‌ಗಳು ಆಡಳಿತ ನಡೆಸುತ್ತಿರುವಾಗ ಸರಕಾರಿ ರಿಟ್ ಇಲ್ಲಿ ನಡೆಯುವುದಿಲ್ಲ ಎಂದು ಮೋದಿ ಹೇಳಿದರು.
ಭಗವಂತ್ ಮಾನ್ ಮೇಲೆ ಕಿಡಿ
“ಎಲ್ಲಾ ಮಂತ್ರಿಗಳು ಆನಂದಿಸುತ್ತಿದ್ದಾರೆ ಮತ್ತು ಮುಖ್ಯಮಂತ್ರಿ(ಭಗವಂತ್ ಮಾನ್) ಕೇವಲ ಕಾಗದದ ಸಿಎಂ ಆಗಿ ಯಾವಾಗಲೂ ‘ದಿಲ್ಲಿ ದರ್ಬಾರ್’ ನಲ್ಲಿ ತಮ್ಮ ಉಪಸ್ಥಿತಿಯನ್ನು ಗುರುತಿಸುವಲ್ಲಿ ನಿರತರಾಗಿದ್ದಾರೆ. ಅಂತಹ ಜನರು ಪಂಜಾಬ್‌ನಲ್ಲಿ ಅಭಿವೃದ್ಧಿಯನ್ನು ಕೈಗೊಳ್ಳಬಹುದೇ? ಎಂದು ಪ್ರಶ್ನಿಸಿದರು.
ಲೋಕಸಭೆ ಚುನಾವಣೆಯಲ್ಲಿ ದೆಹಲಿಯಲ್ಲಿ ಮೈತ್ರಿ ಮತ್ತು ಪಂಜಾಬ್‌ನಲ್ಲಿ ಪರಸ್ಪರ ಹೋರಾಟ ನಡೆಸುತ್ತಿರುವುದಕ್ಕಾಗಿ ಆಪ್ ಮತ್ತು ಕಾಂಗ್ರೆಸ್ ವಿರುದ್ಧ ಪ್ರಧಾನಿ ವಾಗ್ದಾಳಿ ನಡೆಸಿದರು. ಪಂಜಾಬ್‌ನಲ್ಲಿ ದಿಲ್ಲಿಯ ಘೋರ ಭ್ರಷ್ಟ ಪಕ್ಷ ಮತ್ತು ಸಿಖ್ ವಿರೋಧಿ ದಂಗೆಯಲ್ಲಿ ತಪ್ಪಿತಸ್ಥ ಪಕ್ಷವು ಪರಸ್ಪರ ಹೋರಾಟದ ನಾಟಕವನ್ನು ಮಾಡುತ್ತಿದೆ’ ಎಂದು ಪ್ರಧಾನಿ ಕಿಡಿ ಕಾರಿದರು.