ಬೆಂಗಳೂರು: ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ರಣೋತ್ಸಾಹದಿಂದ ಎದ್ದು ನಿಂತಿರುವ ಕರ್ನಾಟಕ ಕೇಸರಿ ಪಡೆಗೆ, ಈಗ ಪ್ರಧಾನಿ ಮೋದಿ ರೋಡ್ ಶೋ ಬಲ ಸಿಗುವ ಸಾಧ್ಯತೆ ಇದೆ. ಇದೇ ಕಾರಣದಿಂದ ಜ.19ರಂದು ನಡೆಯಬೇಕಿದ್ದ ಬಿಜೆಪಿ ವಿಶೇಷ ಕಾರ್ಯಕಾರಿಣಿಯನ್ನು ಮುಂದೂಡಲಾಗಿದೆ.
ಅದೇ ದಿನ ಬೆಂಗಳೂರು ಅಥವಾ ಚಾಮರಾಜನಗರದಲ್ಲಿ ರೋಡ್ ಶೋ ನಡೆಸಲು ಸಿದ್ಧತೆ ಪ್ರಾರಂಭವಾಗಿದೆ.
“ಖೇಲೋ ಇಂಡಿಯಾ’ ಕಾರ್ಯಕ್ರಮದ ಉದ್ಘಾಟನೆಗಾಗಿ ಜ.19ರಂದು ತಮಿಳುನಾಡಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಯಾಣ ಬೆಳೆಸಲಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ ತಮಿಳುನಾಡಿಗೆ ಹೋಗುವುದಕ್ಕೆ ಮುನ್ನ ಪ್ರಧಾನಿ ಹೆಲಿಕಾಪ್ಟರ್ ಬೆಂಗಳೂರಿನಲ್ಲಿ ಲ್ಯಾಂಡ್ ಆಗಲಿದೆ. ಆ ಸಂದರ್ಭದಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ರೋಡ್ ಶೋ ನಡೆಸುವ ಸಾಧ್ಯತೆ ಇದೆ. ಅಥವಾ ಚಾಮರಾಜನಗರದ ಆದಿವಾಸಿ ಸಮುದಾಯದೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿ ಅದೇ ಭಾಗದಲ್ಲಿ ರೋಡ್ ಶೋ ನಡೆಸುವ ಸಾಧ್ಯತೆಯೂ ಇದೆ.
ಪ್ರಧಾನಿ ಕಾರ್ಯಾಲಯದಿಂದಲೇ ರೋಡ್ ಶೋ ಬಗ್ಗೆ ಸೂಚನೆ ಬಂದಿದೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ನಾಲ್ವರು ಪ್ರಧಾನ ಕಾರ್ಯದರ್ಶಿಗಳು ತುರ್ತು ಸಭೆ ನಡೆಸಿ ರೂಪುರೇಷೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ರೋಡ್ ಶೋ ಎಲ್ಲಿಂದ ಪ್ರಾರಂಭವಾಗುತ್ತದೆ, ಎಷ್ಟು ದೂರು ಆಯೋಜನೆ ಮಾಡಬೇಕು ? ಎಂಬಿತ್ಯಾದಿ ವಿಚಾರಗಳು ಇನ್ನೂ ನಿಗದಿಯಾಗಿಲ್ಲ. ಈ ಬಗ್ಗೆ ಪ್ರಧಾನಿ ಕಾರ್ಯಾಲಯದಿಂದ ಬರುವ ಮಾಹಿತಿಗಾಗಿ ಕಾಯಲಾಗುತ್ತಿದೆ.
ಎಚ್ಚರಿಕೆಯ ಹೆಜ್ಜೆ : ಈ ರೋಡ್ ಶೋ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ಬಿಜೆಪಿ ನಿರ್ಧರಿಸಿದೆ. ಈ ಹಿಂದೆ ಚಂದ್ರಯಾನ ಯಶಸ್ಸಿನ ಬಳಿಕ ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಪ್ರಧಾನಿ ಆಗಮಿಸಿದ ಸಂದರ್ಭದಲ್ಲಿ ಬಿಜೆಪಿಯ ಬೆಂಗಳೂರು ನಾಯಕರು ರೋಡ್ ಶೋಗೆ ಕರೆ ನೀಡಿದ್ದರು. ಆದರೆ ಪ್ರಧಾನಿ ಕಾರ್ಯಾಲಯದಿಂದ ಯಾವುದೇ ಸೂಚನೆ ಇರಲಿಲ್ಲ. ಮಾಧ್ಯಮಗಳಿಗೆ ಈ ಬಗ್ಗೆ ಹೇಳಿಕೆ ಕೊಟ್ಟು ಬಿಜೆಪಿ ನಾಯಕರು ಮುಜುಗರಕ್ಕೆ ಒಳಗಾಗಿದ್ದರು. ಈ ಬಾರಿ ಅಂಥ ಯಾವುದೇ ಅಚಾತುರ್ಯ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.
ಮುಂದೂಡಿಕೆ :
ಲೋಕಸಭಾ ಚುನಾವಣೆಗೆ ಪಕ್ಷವನ್ನು ಚುರುಕುಗೊಳಿಸುವ ಉದ್ದೇಶದಿಂದ ಬಿಜೆಪಿ ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಜ.18ರಂದು ಆಯೋಜಿಸಲಾಗಿತ್ತು. ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ, ಪ್ರಧಾನ ಕಾರ್ಯದರ್ಶಿಗಳಾದ ವಿ ಸುನೀಲ್ ಕುಮಾರ್, ಪಿ.ರಾಜೀವ್, ನಂದೀಶ್ ರೆಡ್ಡಿ, ಪ್ರೀತಮ್ ಗೌಡ ಸಿದ್ಧತಾ ಸಭೆ ನಡೆಸಿದ್ದರು. ಅನ್ಯ ಕಾರಣಗಳ ಹಿನ್ನೆಲೆಯಲ್ಲಿ ಈ ಸಭೆಯನ್ನು ಜ.19ಕ್ಕೆ ಮುಂದೂಡಲಾಗಿತ್ತು. ಆದರೆ ಸೋಮವಾರ ಸಾಯಂಕಾಲದ ವೇಳೆಗೆ ಮೋದಿ ರೋಡ್ ಶೋ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕಾರ್ಯಕಾರಿಣಿಯನ್ನು ಮತ್ತೆ ಮುಂದೂಡಲಾಗಿದೆ.