Advertisement

ಮೋದಿ ರ್ಯಾಲಿಗೆ ಸಕಲ ಸಿದ್ಧತೆ

12:37 AM Apr 13, 2019 | Team Udayavani |

ಬೆಂಗಳೂರು: ರಾಜಧಾನಿಯ ನಾಲ್ಕು ಲೋಕಸಭಾ ಕ್ಷೇತಗಳ ಬಿಜೆಪಿ ಅಭ್ಯರ್ಥಿಗಳ ಮತ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಅರಮನೆ ಮೈದಾನದಲ್ಲಿ ನಡೆಸಲಿರುವ ಬೃಹತ್‌ ರ್ಯಾಲಿಗೆ ವೇದಿಕೆ ಸಜ್ಜುಗೊಳಿಸಲಾಗಿದೆ.

Advertisement

ಸಂಜೆ 4.30ಕ್ಕೆ ಸರಿಯಾಗಿ ಮೋದಿ ರ್ಯಾಲಿ ಆರಂಭವಾಗಲಿದೆ. 20ಕ್ಕೂ ಅಧಿಕ ಜನರು ಕೂರಬಹುದಾದ 8 ಅಡಿ ಎತ್ತರ ಹಾಗೂ 2500 ಚದರ ಅಡಿ ವಿಸ್ತೀರ್ಣರದ ಬೃಹತ್‌ ವೇದಿಕೆ ಸಿದ್ಧಪಡಿಸಲಾಗಿದೆ. ಬೆಂಗಳೂರು ಕೇಂದ್ರ, ದಕ್ಷಿಣ, ಉತ್ತರ ಹಾಗೂ ಗ್ರಾಮಾಂತರ ಲೋಕಸಭಾ ಕ್ಷೇತ್ರದ 1.50 ಲಕ್ಷ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸೇರುವ ನಿರೀಕ್ಷೆ ಇದೆ.

ಶುಕ್ರವಾರ ಬೆಳಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‌ ರಾವ್‌, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ರಾಜ್ಯ ಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌, ಲೇಹರ್‌ ಸಿಂಗ್‌, ಮುನಿರಾಜು ಮೊದಲಾದವರು ಅರಮನೆ ಮೈದಾನಕ್ಕೆ ಭೇಟಿ ನೀಡಿ, ಕಾರ್ಯಕ್ರಮದ ಸಿದ್ಧತೆಯ ಪರಿಶೀಲನೆ ನಡೆಸಿದರು.

ನಂತರ ಮಾತನಾಡದ ಆರ್‌.ಅಶೋಕ್‌, 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಇದೇ ಜಾಗದಲ್ಲಿ ಬೃಹತ್‌ ರ್ಯಾಲಿ ನಡೆಸಿ ಯಶಸ್ವಿಯಾಗಿದ್ದೆವು. ಈ ಮೈದಾನ ಬಿಜೆಪಿಗೆ ಅದೃಷ್ಟವಾಗಿದ್ದು, ಶನಿವಾರದ ಕಾರ್ಯಕ್ರಮದಲ್ಲಿ ಒಂದುವರೆ ಲಕ್ಷಕ್ಕೂ ಅಧಿಕ ಜನರು ಸೇರಲಿದ್ದಾರೆ. ಮೋದಿ ಅಲೆ ದಿನೇದಿನೇ ಹೆಚ್ಚುತ್ತಿದ್ದು, ಕಾರ್ಯಕ್ರಮಕ್ಕೆ ಸ್ವಯಂ ಪ್ರೇರಿತರಾಗಿ ಬರುವವರ ಸಂಖ್ಯೆಯೂ ಹೆಚ್ಚಾಗಿದೆ ಎಂದರು.

ಮೋದಿ ರ್ಯಾಲಿಗೆ ಬರಲು ಯಾವುದೇ ಪಾಸ್‌ ಅಗತ್ಯವಿಲ್ಲ. ಯಾರು ಬೇಕಾದರೂ ಬರಹುದು. ಇದೇ ಮೊದಲ ಬಾರಿಗೆ ಆನ್‌ಲೈನ್‌ ಮೂಲಕ ನೋಂದಣಿಗೆ ಅವಕಾಶ ನೀಡಿದ್ದೇವೆ. ಎರಡು ದಿನದಲ್ಲಿ 6 ಸಾವಿರಕ್ಕೂ ಅಧಿಕ ಜನರು ನೋಂದಣಿ ಮಾಡಿಕೊಂಡಿದ್ದಾರೆ ಸಾಮಾಜಿಕ ಜಾಲತಾಣದಲ್ಲೂ ಪ್ರಚಾರ ವ್ಯಾಪಕವಾಗಿ ಮಾಡುತ್ತಿದ್ದೇವೆ ಎಂದು ವಿವರ ನೀಡಿದರು.

Advertisement

ಕ್ಷಮೆ ಯಾಚಿಸಲಿ: ಮನೆಯಲ್ಲಿ ಊಟಕ್ಕೆ ಇಲ್ಲದೇ ಇರುವುದರಿಂದ ಸೈನ್ಯಕ್ಕೆ ಸೇರುತ್ತಿದ್ದಾರೆ ಎಂದು ದೇಶ ಕಾಯುವ ಸೈನಿಕರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಹಿರಂಗ ಕ್ಷಮೆ ಯಾಚಿಸಬೇಕು.

ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದವರು ವರ್ಷವಾಗುತ್ತಿದ್ದರೂ ರೈತರ ಸಾಲಮನ್ನಾ ಮಾಡಿಲ್ಲ. ಅಭಿವೃದ್ಧಿ ಕಾಮಗಾರಿ ಮಾಡದೆಯೇ ಗುತ್ತಿದಾರರು ಬಿಲ್‌ ಪಡೆಯುತ್ತಿದ್ದಾರೆ. ಮಂಡ್ಯ, ಹಾಸನ, ಮೈಸೂರು, ಕೋಲಾರ ಮೊದಲಾದ ಕಡೆಗಳಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ನವರು ಹೊಡೆದಾಡುಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ ಶಾಸಕರಿಗೆ ಪಾಕಿಸ್ತಾನದ ಮೇಲೆ ಅಭಿಮಾನ ಜಾಸ್ತಿಯಾಗಿದೆ. ಇದೇ ಅಭಿಮಾನ ಭಾರತ ಮೇಲಿದ್ದಿದ್ದರೆ ಒಳ್ಳೆಯದಾಗುತಿತ್ತು ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮಾತನಾಡಿ, ಬೆಂಗಳೂರು ಮಹಾನಗರ ವ್ಯಾಪ್ತಿಯ ನಾಲ್ಕು ಲೋಕಸಭಾ ಕ್ಷೇತ್ರದ ಕಾರ್ಯಕರ್ತರು ಹಾಗೂ ಬಿಜೆಪಿ ಅಭಿಮಾನಿಗಳು ಸಮಾವೇಶಕ್ಕೆ ಬರಲಿದ್ದಾರೆ. ವಿಧಾನಸಭಾ ಕ್ಷೇತ್ರವಾರು ಜವಾಬ್ದಾರಿಯನ್ನು ಪಕ್ಷದ ಅಧ್ಯಕ್ಷರಿಗೆ ನೀಡಿದ್ದೇವೆ. ವೇದಿಕೆಯಲ್ಲಿರುವ ಒಂದು ಎಲ್‌ಇಡಿ ಸ್ಕ್ರೀನ್‌ ಸಹಿತವಾಗಿ 11 ಬೃಹದಾಕಾರದ ಸ್ಕ್ರೀನ್‌ಗಳನ್ನು ಮೈದಾನದಲ್ಲಿ ಅವಳಡಿಸಲಾಗುತ್ತದೆ ಎಂದರು.

ಹೆಲಿಕಾಪ್ಟರ್‌ನಲ್ಲಿ ಮೋದಿ ಆಗಮನ: ಶನಿವಾರ ಮಧ್ಯಾಹ್ನ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಬೃಹತ್‌ ರ್ಯಾಲಿಯಲ್ಲಿ ಭಾಗವಹಿಸಿ ಅಲ್ಲಿಂದ ಸಂಜೆ 4.30ರ ಸುಮಾರಿಗೆ ಎಚ್‌ಎಎಲ್‌ ಮೂಲಕ ಅರಮನೆ ಮೈದಾನಕ್ಕೆ ಆಗಮಿಸಲಿದ್ದಾರೆ. ಮಂಗಳೂರಿನಿಂದ ಎಚ್‌ಎಎಲ್‌ ವರೆಗೂ ವಿಶೇಷ ವಿಮಾನದಲ್ಲಿ ಬಂದು, ಎಚ್‌ಎಎಲ್‌ನಿಂದ ಅರಮನೆ ಮೈದಾನದ ಸಮೀಪವಿರುವ ವಾಯು ಪಡೆಯ ಜಾಗದ ವರೆಗೂ ಹೆಲಿಕಾಪ್ಟರ್‌ನಲ್ಲಿ ಆಗಮಿಸಲಿದ್ದಾರೆ. ಅಲ್ಲಿಂದ ವಾಹನದ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

Advertisement

Udayavani is now on Telegram. Click here to join our channel and stay updated with the latest news.

Next