ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದು ಅನುಕಂಪದ ರಾಜಕಾರಣ ಮಾಡುತ್ತಿದ್ದಾರೆ. ಅದು ಬಿಜೆಪಿ ಕೈ ಹಿಡಿಯಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಪಂಚರತ್ನ ಯಾತ್ರೆ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ರಾಜಕೀಯದಲ್ಲಿ ಇರುವಾಗ ಮೋದಿ ರಾಜಕೀಯಕ್ಕೆ ಬಂದಿರಲಿಲ್ಲ. ಛತ್ರಿ ಹಿಡಿಯಲಿಲ್ಲವೆಂದು ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಿದ್ದಾರೆ. ಓರ್ವ ಪ್ರಧಾನಿ ಯಾರಿಗೆ ಛತ್ರಿ ಹಿಡಿದರು, ಏಕೆ ಹಿಡಿಯಲಿಲ್ಲ ಎಂದು ಸಾರ್ವಜನಿಕ ಸಭೆಯಲ್ಲಿ ಚರ್ಚೆ ಮಾಡುವುದು ಸರಿಯಲ್ಲ. ಇಂಥ ಅನುಕಂಪದ ರಾಜಕಾರಣ ಕರ್ನಾಟಕದಲ್ಲಿ ನಡೆಯಲ್ಲ ಎಂದರು.
ಯಡಿಯೂರಪ್ಪ ಬಿಜೆಪಿಗೆ ಅವಶ್ಯಕ ಎಂದು ಹೇಳಿ ಅವರನ್ನು ಹಾಡಿ ಹೊಗಳಿದರು. ಅವರ ಮೇಲೆ ಅಷ್ಟು ಅಭಿಮಾನ ಇದ್ದಿದ್ದರೆ ಸಿಎಂ ಸ್ಥಾನದಿಂದ ಏಕೆ ಕೆಳಗಿಳಿಸಿದರು. ಬಿಎಸ್‌ವೈ ರಾಜಕೀಯವಾಗಿ ಬೆಳೆಯಲು ಎಷ್ಟು ಕಷ್ಟಪಟ್ಟಿದ್ದಾರೆ. ಎರಡು ವರ್ಷ ಸಿಎಂ ಆದಾಗ ಹೇಗೆ ನಡೆಸಿಕೊಂಡರು ಎನ್ನುವುದು ಜನರಿಗೆ ಗೊತ್ತಿದೆ. ಈಗ ಅವರ ಮೇಲೆ ಪ್ರೀತಿ ಬಂದು ಆತ್ಮೀಯವಾಗಿ ತಬ್ಬಿಕೊಳ್ಳುತ್ತಿದ್ದಾರೆ. ವಯಸ್ಸಿನ ಕಾರಣ ಹೇಳಿ ಆಡ್ವಾಣಿ, ಮುರಳಿ ಮನೋಹರ ಜೋಶಿ ಅವರನ್ನು ಮನೆಗೆ ಕಳಿಸಿದರು. ಈಗ ಯಡಿಯೂರಪ್ಪ ಅನಿವಾರ್ಯ ಎಂದು ಏಕೆ ಹೇಳ್ತಿದ್ದೀರಿ. ಒಂದು ಸಮುದಾಯದ ಮತ ಪಡೆಯಲು ಚುನಾವಣೆವರೆಗೂ ಮಾತ್ರ ಯಡಿಯೂರಪ್ಪ ಮೇಲೆ ಪ್ರೀತಿ ತೋರಿಸುತ್ತಿದ್ದಾರೆ ಎಂದರು.
2028ಕ್ಕೆ ಚುನಾವಣೆ ರಾಜಕೀಯದಿಂದ ದೂರ ಸರಿಯುತ್ತೇನೆ ಎಂದು ಹೇಳಿದ್ದೇನೆ. ಆದರೆ ರಾಜಕೀಯದಿಂದ ದೂರ ಸರಿಯುವುದಿಲ್ಲ. ಈಗಾಗಲೇ ನಮಗೂ ವಯಸ್ಸು ಆಗಿದೆ. ಯುವ ನಾಯಕರನ್ನು ಬೆಳೆಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ಜನರ ಅಪೇಕ್ಷೆ ಮೇರೆಗೆ ನಿಖೀಲ್ ಕುಮಾರಸ್ವಾಮಿಗೆ ಟಿಕೆಟ್ ನೀಡಲಾಗಿದೆ. ಹಾಸನ ಟಿಕೆಟ್ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತೀರ್ಮಾನ ಕೈಗೊಳ್ಳುತ್ತಾರೆ. ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಕಾರ್ಯಕರ್ತರ ಭಾವನೆಗೆ ತಕ್ಕಂತೆ ನಿರ್ಧಾರ ಮಾಡುತ್ತಾರೆ ಎಂದರು.