ಬಿಲಾಸ್ಪುರ/ಭೋಪಾಲ್: “ನಾನು ಒಬಿಸಿ (ಇತರ ಹಿಂದುಳಿದ ವರ್ಗ)ಗೆ ಸೇರಿದವನು ಎಂಬ ಕಾರಣಕ್ಕೇ ಕಾಂಗ್ರೆಸ್ ನನ್ನನ್ನು ದ್ವೇಷಿಸುತ್ತಿದೆ. ಆ ಪಕ್ಷದ ನಾಯಕನಿಗೆ ನ್ಯಾಯಾಲಯವೇ ಜೈಲು ಶಿಕ್ಷೆ ಘೋಷಿಸಿದ್ದರೂ, ಹಿಂದುಳಿದವರು, ದಲಿತರು ಮತ್ತು ಬುಡಕಟ್ಟು ಜನಾಂಗೀಯರ ಅವಹೇಳನವನ್ನು ಕಾಂಗ್ರೆಸ್ ನಿಲ್ಲಿಸಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿರುವ ಹಾಗೂ ಕಾಂಗ್ರೆಸ್ ಆಡಳಿತವಿರುವ ಛತ್ತೀಸ್‌ಗಢದಲ್ಲಿ ಶನಿವಾರ ಬಿಜೆಪಿಯ “ಪರಿವರ್ತನ್ ಮಹಾಸಂಕಲ್ಪ ರ್ಯಾಲಿ’ಯಲ್ಲಿ ಅವರು ಕಾಂಗ್ರೆಸ್ ವಿರುದ್ಧ “ಒಬಿಸಿ ಅಸ್ತ್ರ’ ಪ್ರಯೋಗಿಸಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆಯಲ್ಲಿ ಒಬಿಸಿ ಮಹಿಳೆಯರಿಗೆ ಒಳಮೀಸಲಾತಿ ನೀಡುವಂತೆ ಆಗ್ರಹಿಸುತ್ತಿರುವ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದ ಮೋದಿ “ಜಾತಿಯ ಹೆಸರಲ್ಲಿ ಮಹಿಳೆ ಯರನ್ನು ವಿಭಜಿಸಲು ಕಾಂಗ್ರೆಸ್ ಯತ್ನಿಸುತ್ತಿದೆ’ ಎಂದು ದೂಷಿಸಿ ದ್ದಾರೆ. ಜತೆಗೆ “ಹಿಂದುಳಿದ ವರ್ಗದ ವ್ಯಕ್ತಿಯೊಬ್ಬ ಪ್ರಧಾನಿಯಾಗಿ ದ್ದನ್ನು ಕಾಂಗ್ರೆಸ್‌ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಪ್ರಧಾನಿ ಕುರ್ಚಿಯು ತನಗೇ “ಮೀಸಲು’ ಎಂದು ಆ ಪಕ್ಷ ಭಾವಿಸಿತ್ತು. ಹಾಗಾಗಿ ಒಬಿಸಿ ನಾಯಕನೊಬ್ಬ ಆ ಕುರ್ಚಿಯಲ್ಲಿ ಕುಳಿತಿದ್ದಕ್ಕಾಗಿ ನನ್ನನ್ನು ಆ ಪಕ್ಷ ಅಷ್ಟೊಂದು ದ್ವೇಷಿಸುತ್ತಿದೆ. ಮೋದಿ ಎಂಬ ಹೆಸರಲ್ಲಿ ಇಡೀ ಹಿಂದುಳಿದ ಸಮುದಾಯವನ್ನೇ ಅವಹೇಳನ ಮಾಡಲು ಕಾಂಗ್ರೆಸ್ ಹಿಂಜರಿಯುವುದಿಲ್ಲ’ ಎಂದಿದ್ದಾರೆ.
ಸಿಎಂ ಅಭ್ಯರ್ಥಿ ಘೋಷಿಸಲ್ಲ: ಇದೇ ವೇಳೆ ಛತ್ತೀಸ್‌ಗಢದಲ್ಲಿ ಬಿಜೆಪಿಯು ಸದ್ಯಕ್ಕೆ ಯಾವುದೇ ಸಿಎಂ ಅಭ್ಯರ್ಥಿಯನ್ನು ಮುಂದಿಟ್ಟು ಕೊಂಡು ಚುನಾವಣೆ ಎದುರಿಸಲ್ಲ ಎಂದು ಪ್ರಧಾನಿ ಮೋದಿ ಸ್ಪಷ್ಟ ಪಡಿಸಿದ್ದಾರೆ. “ನಾವು ಪ್ರತೀ ಬೂತ್‌ನಲ್ಲೂ ಪ್ರತೀ ಮತ ದಾರನ ಹೃದ ಯವನ್ನೂ ಗೆಲ್ಲಬೇಕು. ಭ್ರಷ್ಟಾಚಾರ ಮತ್ತು ಹಗರಣ ದಲ್ಲಿ ಮುಳು ಗಿರುವ ಕಾಂಗ್ರೆಸ್ ಪಕ್ಷವನ್ನು ಕಿತ್ತೂಗೆಯಲು ಜನ ನಿರ್ಧರಿಸಿದ್ದಾರೆ. ರಾಜ್ಯದಲ್ಲಿರುವ ಏಕೈಕ ನಾಯಕ ಮತ್ತು ಏಕೈಕ ಅಭ್ಯರ್ಥಿಯೆಂದರೆ ಅದು “ಕಮಲ’ದ ಚಿಹ್ನೆ ಮಾತ್ರ’ ಎಂದು ಹೇಳಿದ್ದಾರೆ.
ಇಂದು ತೆಲಂಗಾಣದಲ್ಲಿ ಮೋದಿ ಹವಾ: ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಮತ್ತೂಂದು ರಾಜ್ಯವಾದ ತೆಲಂಗಾಣದಲ್ಲಿ ರವಿವಾರ ಪ್ರಧಾನಿ ಮೋದಿಯವರ ಸರಣಿ ಕಾರ್ಯಕ್ರಮ ನಡೆಯಲಿದೆ. 13,500 ಕೋಟಿ ರೂ. ಮೌಲ್ಯದ ಯೋಜನೆಗಳ ಶಿಲಾನ್ಯಾಸ ಹಾಗೂ ಉದ್ಘಾಟನೆಯನ್ನು ಮೋದಿ ನೆರವೇರಿಸಲಿದ್ದಾರೆ. ಜತೆಗೆ ಮೆಹಬೂಬ್ ನಗರದಲ್ಲಿ ಸಾರ್ವ ಜನಿಕ ರ್ಯಾಲಿ ಉದ್ದೇಶಿಸಿಯೂ ಮಾತನಾಡಲಿದ್ದಾರೆ. ಇದೇ ವೇಳೆ ಕಾಚಿಗುಡ- ರಾಯಚೂರು ರೈಲು ಸೇವೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ಅಲ್ಲದೆ 2,170 ಕೋಟಿ ರೂ. ವೆಚ್ಚದ ಹಾಸನ-ಚೆರ್ಲಪಳ್ಳಿ ಎಲ್‌ಪಿಜಿ ಪೈಪ್‌ಲೈನ್ ಯೋಜನೆಯನ್ನೂ ಲೋಕಾರ್ಪಣೆ ಮಾಡಲಿದ್ದಾರೆ.
ಮುಂದಿನ ವರ್ಷ ನಾನೇ ಬರುವೆ
ಹೊಸದಿಲ್ಲಿ: ಜಿಲ್ಲೆಗಳ ಅಭಿವೃದ್ಧಿಗಾಗಿ “ಮಹತ್ವಾಕಾಂಕ್ಷೆಯ ಜಿಲ್ಲೆಗಳು’ ಯೋಜನೆಯನ್ನು ರೂಪಿಸಲಾಗಿದೆ. ಇದರ ಯಶಸ್ಸು ಪರಿಶೀಲಿಸಲು ಮುಂದಿನ ವರ್ಷ ನಾನೇ ಬರುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು. ಹೊಸದಿಲ್ಲಿಯ ಭಾರತ ಮಂಟಪಂನಲ್ಲಿ ನಡೆದ “ಸಂಕಲ್ಪ ಸಪ್ತಾಹ’ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, “ಮಹತ್ವಾಕಾಂಕ್ಷೆಯ ಜಿಲ್ಲೆಗಳು ಯೋಜನೆಯು 112 ಜಿಲ್ಲೆಗಳಲ್ಲಿ 25 ಕೋಟಿಗೂ ಅಧಿಕ ಜನರ ಜೀವನದ ಗುಣಮಟ್ಟ ಸುಧಾರಿಸಿದೆ. ಮುಂದಿನ ಒಂದು ವರ್ಷದಲ್ಲಿ 500 ಬ್ಲಾಕ್‌ಗಳ ಪೈಕಿ ಕನಿಷ್ಠ 100 ಬ್ಲಾಕ್‌ಗಳು ಅಭಿವೃದ್ಧಿಯಾಗಲಿವೆ’ ಎಂದರು. “ನನಗೆ ವಿಶ್ವಾಸವಿದೆ. 2024ರ ಅಕ್ಟೋಬರ್- ನವೆಂಬರ್‌ನಲ್ಲಿ ಮತ್ತೆ ಭೇಟಿಯಾಗೋಣ. ಈ ಯೋಜನೆಯ ಯಶಸ್ಸಿನ ಮೌಲ್ಯಮಾಪನ ಮಾಡೋಣ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸದ್ಯದಲ್ಲೇ ಚುನಾವಣೆ ನಡೆಯಲಿರುವ ಮಧ್ಯ ಪ್ರದೇಶದಲ್ಲಿ ಶನಿವಾರ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರು ಚುನಾವಣ ಪ್ರಚಾರ ಕೈಗೊಂಡಿದ್ದಾರೆ. ಶಾಜಾಪುರದಲ್ಲಿ ಜನಾಕ್ರೋಶ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು “ಇದು ಸಿದ್ಧಾಂತಗಳ ನಡುವಿನ ಸಮರ. ಒಂದು ಬದಿ ಯಲ್ಲಿ ಕಾಂಗ್ರೆಸ್ ಪಕ್ಷವಿದೆ. ಮತ್ತೂಂದು ಬದಿ ಯಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿಯಿದೆ. ಅಂದರೆ ಒಂದು ಕಡೆ ಗಾಂಧಿಯಿದ್ದರೆ, ಮತ್ತೂಂದು ಕಡೆ ಇರುವುದು ಗಾಂಧಿ ಹಂತಕ ಗೋಡ್ಸೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಹೋರಾಟವು ಪ್ರೀತಿ ಮತ್ತು ದ್ವೇಷದ ನಡುವಿನ ಕದನವಿದ್ದಂತೆ’ ಎಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕ್ಕೇರಿದರೆ ಜಾತಿಗಣತಿ ನಡೆಸಿ, ಒಟ್ಟು ಒಬಿಸಿಗಳ ಸಂಖ್ಯೆಯೆಷ್ಟು ಎಂಬುದನ್ನು ಅರಿತು ಅದರಂತೆ ಯೋಜನೆಗಳನ್ನು ರೂಪಿಸಲಿದ್ದೇವೆ ಎಂದಿದ್ದಾರೆ.