ಮುಂಬಯಿ : ಭಗವಾನ್ ಶ್ರೀರಾಮ ಜನಿಸಿದ ಪುಣ್ಯಭೂಮಿ ಅಯೋಧ್ಯೆಗೆ ಪ್ರಧಾನಿ ನರೇಂದ್ರ ಮೋದಿ ಈ ತನಕವೂ ಒಂದು ಬಾರಿಯೂ ಏಕೆ ಭೇಟಿ ಕೊಟ್ಟಿಲ್ಲ ? ಎಂದು ಪ್ರಶ್ನಿಸುವ ಮೂಲಕ ಶಿವ ಸೇನೆ, ಮೋದಿ ವಿರುದ್ದದ ತನ್ನ ವಾಕ್ ದಾಳಿಯನ್ನು ಮತ್ತೆ ಚುರುಕುಗೊಳಿಸಿದೆ.
ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಬರೆದಿರುವ ಲೇಖನದಲ್ಲಿ ಶಿವ ಸೇನೆ, “ಪ್ರಧಾನಿ ಮೋದಿ ಈ ವರೆಗೆ ಮೂರು ಬಾರಿ ಕೇದಾರನಾಥಕ್ಕೆ ಭೇಟಿ ನೀಡಿದ್ದಾರೆ; ತಮ್ಮ ಲೋಕಸಭಾ ಕ್ಷೇತ್ರವಾಗಿರುವ ವಾರಾಣಸಿಗೆ ಹಲವು ಬಾರಿ ಭೇಟಿ ಕೊಟ್ಟಿದ್ದಾರೆ; ಆದರೆ ಶ್ರೀರಾಮನ ಜನ್ಮಸ್ಥಳವಾಗಿರುವ ಅಯೋಧ್ಯೆಗೆ ಅವರು ಈ ತನಕವೂ ಒಂದು ಬಾರಿಯೂ ಏಕೆ ಭೇಟಿ ಕೊಟ್ಟಿಲ್ಲ’ ಎಂದು ಕೆಣಕಿದೆ.
ಪ್ರಧಾನಿ ಮೋದಿ ಅವರು ತಮ್ಮ ವಿದೇಶ ಭೇಟಿಗಳ ಸಂದರ್ಭದಲ್ಲಿ ವಿವಿದ ಮಸೀದಿಗಳಿಗೆ ಭೇಟಿ ಕೊಟ್ಟಿದ್ದಾರೆ ಎಂಬುದನ್ನೂ ಶಿವ ಸೇನೆ ಎತ್ತಿ ತೋರಿಸಿದೆ.
ಅಯೋಧ್ಯೆಯ ಜನರಿಗೂ ಪ್ರಧಾನಿ ಮೋದಿ ಅವರು ಈ ತನಕವೂ ಈ ಪುಣ್ಯ ಭೂಮಿಗೆ ಇನ್ನೂ ಏಕೆ ಭೇಟಿ ಕೊಟ್ಟಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ ಎಂದು ಶಿವ ಸೇನೆ ಲೇವಡಿ ಮಾಡಿದೆ. ಪ್ರಧಾನಿ ಮೋದಿ ಅವರಿಗೆ ಅಯೋಧ್ಯೆ ಮತ್ತು ಭಗವಾನ್ ಶ್ರೀರಾಮ ಮರೆತೇ ಹೋಗಿರಬಹುದೇ ಎಂಬ ಸಂದೇಹವನ್ನು ಶಿವ ಸೇನೆ ಎತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಲ್ಲಿ ರಾಮ ಮಂದಿರವನ್ನು ಕಟ್ಟಿಸಿದ್ದಾರೆ; ಆದರೆ ಅಯೋಧ್ಯೆಯಲ್ಲಿ ಮಾತ್ರ ರಾಮ ಮಂದಿರ ನಿರ್ಮಿಸಲು ಮುಂದಾಗದಿರುವುದು ಏಕೆ ಎಂದು ಶಿವಸೇನೆ ಕೇಳಿದೆ.