Advertisement
ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗಿಯಾಗಲು ರಷ್ಯಾದ ಕಜಾನ್ಗೆ ತೆರಳಿರುವ ಪ್ರಧಾನಿ ಮೋದಿ ಅವರು ಚೀನದ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಭಾರತ ಮತ್ತು ಚೀನ ಗಡಿಯಲ್ಲಿ ಗಸ್ತು ತಿರುಗಲು ಒಪ್ಪಂದ ಮಾಡಿಕೊಂಡ ಎರಡು ದಿನಗಳ ಬಳಿಕ ಹಲವು ವಿಷಯಗಳ ಬಗ್ಗೆ ಉಭಯ ನಾಯಕರು ಮಾತನಾಡಿದ್ದಾರೆ. ಈ ಹಿಂದೆ 2019ರಲ್ಲಿ ಮಾತುಕತೆ ನಡೆಸಿದ್ದ ಉಭಯ ದೇಶಗಳ ನಾಯಕರು ಬಳಿಕ ಹಲವು ಸಭೆಗಳಲ್ಲಿ ಮುಖಾಮುಖೀಯಾದರೂ ದ್ವಿಪಕ್ಷೀಯ ಮಾತುಕತೆ ನಡೆಸಿರಲಿಲ್ಲ.
ಪರಸ್ಪರ ಗೌರವ ಮತ್ತು ಸೂಕ್ಷ್ಮತೆಯ ಆಧಾರದ ಮೇಲೆ ನಮ್ಮ ಸಂಬಂಧ ಇರಲಿದೆ. ಗಡಿಯಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವುದು ನಮ್ಮ ಮೊದಲ ಆದ್ಯತೆ. ಭಾರತ ಮತ್ತು ಚೀನ ಶಾಂತಿಯಿಂದ ಇರುವುದು ಈ ಎರಡು ದೇಶಗಳ ಜನರಿಗಷ್ಟೇ ಅಲ್ಲ; ಜಾಗತಿಕವಾಗಿಯೂ ಮಹತ್ತರವಾದುದಾಗಿದೆ. ಉಭಯ ದೇಶಗಳ ನಡುವೆ ಕಳೆದ ನಾಲ್ಕು ವರ್ಷಗಳಲ್ಲಿ ಮೂಡಿರುವ ಸಮಸ್ಯೆಗಳ ಪರಿಹಾರದ ಬಗ್ಗೆ ಈಗ ಒಮ್ಮತ ಮೂಡಿರುವುದನ್ನು ಸ್ವಾಗತಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ. ಜಿನ್ಪಿಂಗ್ ಹೇಳಿದ್ದೇನು?
ನಮ್ಮ ಭೇಟಿಯ ಮೇಲೆ ಉಭಯ ದೇಶಗಳ ಜನರು ಹಾಗೂ ಜಾಗತಿಕ ಸಮುದಾಯ ಕಣ್ಣಿಟ್ಟಿದೆ. ಉಭಯ ದೇಶಗಳು ಕೂಡ ಪ್ರಾಚೀನ ನಾಗರಿಕತೆಗಳನ್ನು ಹೊಂದಿವೆ. ಜಾಗತಿಕ ದಕ್ಷಿಣದಲ್ಲಿ ಈ ಎರಡು ದೇಶಗಳು ಪ್ರಮುಖವಾಗಿವೆ. ಹೀಗಾಗಿ ಉಭಯ ದೇಶಗಳು ಸಹಕಾರದಿಂದ ಇರುವುದು ಅಗತ್ಯ. ನಮ್ಮ ನಡುವೆ ಇರುವ ಭಿನ್ನತೆಗಳನ್ನು ಹೋಗಲಾಡಿಸಿಕೊಂಡು ಶಾಂತಿ ಕಾಪಾಡಬೇಕಿದೆ ಎಂದು ಜಿನ್ಪಿಂಗ್ ಹೇಳಿದರು.
Related Articles
Advertisement
ಗಡಿಗೆ ಸಂಬಂಧಿಸಿ ಹೊಸ ಮಾತುಕತೆ2020ರ ಬಳಿಕ ಚೀನ ಹಾಗೂ ಭಾರತದ ನಡುವಣ ರಾಜ ತಾಂತ್ರಿಕ ಸಂಬಂಧ ಬಿಗಡಾಯಿಸಿತ್ತು. ಗಾಲ್ವನ್ನಲ್ಲಿ ನಡೆದ ದಾಳಿಯಲ್ಲಿ 20ಕ್ಕೂ ಹೆಚ್ಚು ಭಾರತೀಯ ಸೈನಿಕರು ಮೃತಪಟ್ಟಿದ್ದು ಇದಕ್ಕೆ ಕಾರಣವಾಗಿತ್ತು. ಮೋದಿಯವರ ರಷ್ಯಾ ಭೇಟಿಗೆ ಮುನ್ನ ಉಭಯ ದೇಶಗಳು ಗಡಿಯಲ್ಲಿ ಗಸ್ತು ತಿರುಗುವ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದವು. ಈಗ ದ್ವಿಪಕ್ಷೀಯ ಮಾತುಕತೆ ನಡೆದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಗಡಿಗೆ ಸಂಬಂಧಿಸಿ ಮತ್ತಷ್ಟು ಮಹತ್ವದ ಮಾತುಕತೆ ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ. “ಯುದ್ಧ ಹಾಗೂ ಸಂಘರ್ಷಮಯ ವಾತಾವರಣಕ್ಕೆ ಭಾರತ ಎಂದೂ ಬೆಂಬಲ ನೀಡುವುದಿಲ್ಲ. ಅಂಥ ಪರಿಸ್ಥಿತಿ ಎದುರಾದರೆ ಅದನ್ನು ರಾಜತಾಂತ್ರಿಕ ಮಾತುಕತೆಗಳ ಮೂಲಕವೇ ಪರಿಹರಿಸಿಕೊಳ್ಳಲು ಆದ್ಯತೆ ನೀಡಬೇಕು.” – ನರೇಂದ್ರ ಮೋದಿ, ಪ್ರಧಾನಿ