ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಓಟಿಗಾಗಿ ಸೈನಿಕರನ್ನು ಬಳಸಿಕೊಳ್ಳಲು ಯತ್ನಿಸುತ್ತಿರುವರಾದರೂ ಭಾರತೀಯ ಸೇನೆ ಯಾವತ್ತೂ ದೇಶದೊಂದಿಗೆ ಇದೆಯೇ ಹೊರತು ಕೇಸರಿ ಪಕ್ಷದೊಂದಿಗೆ ಇಲ್ಲ ಎಂದು ಕಾಂಗ್ರೆಸ್ ಪಕ್ಷ ಪ್ರಧಾನಿ ಮೋದಿ ಗೆ ಟಾಂಗ್ ನೀಡಿದೆ.
ಸುಮಾರ 156 ಮಾಜಿ ಸೈನಿಕರು ದೇಶದ ರಾಷ್ಟ್ರಪತಿ ಮತ್ತು ಸೇನಾ ಕಮಾಂಡರ್ ಇನ್ ಚೀಫ್ ಆಗಿರುವ ರಾಮ್ ನಾಥ್ ಕೋವಿಂದ್ ಅವರಿಗೆ ಪತ್ರ ಬರೆದು ಲೋಕಸಭಾ ಚುನಾವಣೆಗೆ ಮುನ್ನ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ಸೇನೆಯನ್ನು ಬಳಸಿಕೊಳ್ಳುತ್ತಿವೆ ಎಂದು ದೂರಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಈ ರೀತಿಯಾಗಿ ಪ್ರತಿಕ್ರಿಯಿಸಿದೆ.
ಯೋಧರು ಯಾವತ್ತೂ ಭಾರತದೊಂದಿಗಿದ್ದಾರೆ ಎಂಬುದು ಇದರಿಂದ ಸ್ಪಷ್ಟವಿದೆ ಎಂದು ಕಾಂಗ್ರೆಸ್ ಹೇಳಿದೆ.
ರಾಷ್ಟ್ರಪತಿಗೆ ಪತ್ರ ಬರೆದು ಚುನಾವಣೆಗಾಗಿ ರಾಜಕೀಯ ಪಕ್ಷಗಳು ಸೇನೆಯ ದುರ್ಬಳಕೆ ಮಾಡುತ್ತಿವೆ ಎಂದು ದೂರಿರುವವ 156 ಮಂದಿ ಮಾಜಿ ಯೋಧರಲ್ಲಿ ಮೂವರು ಮಾಜಿ ಸೇನಾ ಮುಖ್ಯಸ್ಥರು, ನಾಲ್ವರು ಮಾಜಿ ನೌಕಾಪಡೆ ಮುಖ್ಯಸ್ಥರು ಮತ್ತು ಓರ್ವ ಮಾಜಿ ವಾಯು ಪಡೆ ಮುಖ್ಯಸ್ಥರು ಸೇರಿದ್ದು ಅವರೆಲ್ಲ ಪತ್ರಕ್ಕೆ ಸಹಿ ಹಾಕಿದ್ದಾರೆ ಎಂದು ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ ಹೇಳಿದೆ.
ರಾಜಕೀಯ ಉದ್ದೇಶಕ್ಕಾಗಿ ಸೇನೆಯನ್ನು ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿರುವುದು ಹಾಲಿ ಮತ್ತು ಮಾಜಿ ಯೋಧರಿಗೆ ತೀವ್ರ ಕಳವಳದ ವಿಷಯವಾಗಿದೆ ಎಂದು ಪತ್ರದಲ್ಲಿ ದೂರಲಾಗಿದೆ.