ಹೊಸದಿಲ್ಲಿ: “ಭಾರತವು ಅಭಿವೃದ್ಧಿ ನೀತಿಯನ್ನು ಬೆಂಬಲಿಸುತ್ತದೆಯೇ ವಿನಃ ವಿಸ್ತರಣ ವಾದವನ್ನಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
ದಕ್ಷಿಣ ಚೀನ ಸಮುದ್ರ (ಎಸ್‌ಸಿಎಸ್), ಪೂರ್ವ ಚೀನ ಸಮುದ್ರ (ಇಸಿಎಸ್)ಗಳಲ್ಲಿ ಚೀನದ ಕ್ಯಾತೆ ಹೆಚ್ಚಿರುವಂತೆಯೇ ಚೀನವನ್ನು ಉಲ್ಲೇಖೀಸದಯೇ ಅವರು ಈ ರೀತಿ ಟಾಂಗ್ ನೀಡಿದ್ದಾರೆ.
ಬ್ರೂನೈ ರಾಜ ಸುಲ್ತಾನ್ ಹಸನಾಲ್ ಬೊಲ್ಕಿಯಾ ಏರ್ಪಡಿಸಿದ್ದ ಔತಣ ಕೂಟದಲ್ಲಿ ಪ್ರಧಾನಿ ಭಾಗಿಯಾಗಿದ್ದರು. ಈ ವೇಳೆ ಭದ್ರತೆ, ಹೂಡಿಕೆ, ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳ ಸಹಕಾರದ ಕುರಿತು ಮಾತುಕತೆ ನಡೆಸಲಾಗಿದೆ. ಅಲ್ಲದೇ ದಕ್ಷಿಣ ಹಾಗೂ ಪೂರ್ವ ಚೀನ ಸಮುದ್ರಗಳಲ್ಲಿನ ವಿವಾದ, ಸದ್ಯದ ಬೆಳವಣಿಗೆ ಕುರಿತೂ ಮಾತುಕತೆ ನಡೆದಿದೆ.
ಈ ವೇಳೆ ಪ್ರಧಾನಿ “ಭಾರತ ಸದಾ ಅಭಿವೃದ್ಧಿ ನೀತಿಯನ್ನು ಬೆಂಬಲಿಸುತ್ತದೆ. ವಿಸ್ತರಣ ವಾದವನ್ನು ಅಲ್ಲ. ಸಾಗರ ಭದ್ರತೆ, ಶಾಂತಿ ಮತ್ತು ಸ್ಥಿರತೆ ಕಾಪಾಡಿಕೊಳ್ಳಲು ನಾವು ಉತ್ತೇಜಿಸುತ್ತೇವೆ. ಭಾರತ ಸದಾ ಆಸಿಯನ್ ಕೇಂದ್ರೀಕರಣಕ್ಕೆ ಆದ್ಯತೆ ನೀಡುತ್ತಾ ಬಂದಿದೆ. ಅದನ್ನೇ ಮುಂದುವರಿಸುತ್ತದೆ’ ಎಂದಿದ್ದಾರೆ.
ದಕ್ಷಿಣ ಮತ್ತು ಪೂರ್ವ ಚೀನ ಸಮುದ್ರ ಸಂಬಂಧಿಸಿದಂತೆ ಬ್ರೂನೈ, ಫಿಲಿಪೈನ್ಸ್, ಮಲೇಷ್ಯಾ, ವಿಯೆಟ್ನಾಂ, ತೈವಾನ್ ಜತೆಗೆ ಚೀನ ತಕರಾರು ಹೊಂದಿದ್ದು, ಇತ್ತೀಚಿನ ದಿನಗಳಲ್ಲಿ ಈ ರಾಷ್ಟ್ರಗಳ ಜತೆಗಿನ ವೈಮನಸ್ಸು ಮತ್ತಷ್ಟು ಹೆಚ್ಚಾಗಿದೆ. ಈ ನಡುವೆಯೇ ಪ್ರಧಾನಿ ಹೇಳಿಕೆ ಮಹತ್ವ ಪಡೆದಿದೆ.
ಬಾಹ್ಯಾಕಾಶ ಯೋಜನೆ ಉತ್ತೇಜನಕ್ಕೆ ಒಪ್ಪಂದ: ಬಾಹ್ಯಾಕಾಶ ಕ್ಷೇತ್ರದ ಕಾರ್ಯಾಚರಣೆಗೆ ಪರಸ್ಪರ ಬೆಂಬಲ ನೀಡುವ ನಿಟ್ಟಿನಲ್ಲಿ ಮೋದಿ ಮತ್ತು ಬೊಲ್ಕಿಯಾ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಉಪಗ್ರಹ ಮತ್ತು ಉಡಾವಣ ವಾಹನಗಳ ಅಭಿವೃದ್ಧಿಗಾಗಿ ಟೆಲಿಮಿಟರಿ ಟ್ರ್ಯಾಕಿಂಗ್ ಮತ್ತು ಟೆಲಿ ಕಮಾಂಡ್ ಸ್ಟೇಷನ್‌ಗಳಿಗೆ ಸಹಕಾರ ಒದಗಿಸಲು ಈ ಒಪ್ಪಂದ ಪ್ರಸ್ತಾವಿಸಿದೆ.