ಹೊಸದಿಲ್ಲಿ : 2001ರಲ್ಲಿ ಪಾರ್ಲಿಮೆಂಟ್ ಮೇಲೆ ಪಾಕ್ ಉಗ್ರರು ನಡೆಸಿದ್ದ ದಾಳಿಯಲ್ಲಿ ಹುತಾತ್ಮರಾಗಿದ್ದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಂದರ್ಭದಲ್ಲಿ ಇಂದು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಹಸ್ತಲಾಘವ ಮಾಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಗುಜರಾತ್ ಚುನಾವಣಾ ಪ್ರಚಾರಾಭಿಯಾನದಲ್ಲಿ ಪ್ರಧಾನಿ ಮೋದಿ ಅವರು ಪಾಕಿಸ್ಥಾನದ ಮಾಜಿ ರಾಯಭಾರಿ ಓರ್ವರೊಂದಿಗೆ ದಿಲ್ಲಿಯಲ್ಲಿ ಗುಜರಾತ್ ಚುನಾವಣೆ ಸಂಬಂಧ ನಡೆದಿದ್ದ ರಹಸ್ಯ ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಲ್ಗೊಂಡಿದ್ದರೆಂದು ಆರೋಪಿಸಿದ್ದರು.
ಇದಕ್ಕೆ ಉತ್ತರವಾಗಿ ಮನಮೋಹನ್ ಸಿಂಗ್ ಅವರು “ಮಣಿ ಶಂಕರ್ ಅಯ್ಯರ್ ಅವರ ನಿವಾಸದಲ್ಲಿ ನಡೆದಿದ್ದ ಭೋಜನ ಕೂಟವನ್ನು ಮೋದಿ ತಪ್ಪಾಗಿ ಗ್ರಹಿಸಿಕೊಂಡು ಕಾಂಗ್ರೆಸ್ ನಾಯಕರ ಮೇಲೆ ಗಂಭೀರವಾದ ಆರೋಪ ಮಾಡಿದ್ದಾರೆ; ಇದಕ್ಕಾಗಿ ಅವರು ದೇಶದ ಮುಂದೆ ಕ್ಷಮೆಯಾಚಿಸಬೇಕು’ ಎಂದು ಖಡಕ್ ಆಗಿ ಹೇಳಿದ್ದರು.
ಪಾಕ್ ಮಿಲಿಟರಿ ಗುಪ್ತಚರದಲ್ಲಿ ಉನ್ನತ ಹುದ್ದೆ ಹೊಂದಿದವರು ಕಾಂಗ್ರೆಸ್ ನಾಯಕ ಅಹ್ಮದ ಪಟೇಲ್ ಅವರೇ ಗುಜರಾತ್ ಸಿಎಂ ಆಗಬೇಕು ಎಂದು ಹೇಳಿರುವುದರ ಅರ್ಥವೇನು; ಕಾಂಗ್ರೆಸ್ ಈ ಬಗ್ಗೆ ದೇಶಕ್ಕೆ ಸ್ಪಷ್ಟನೆ ನೀಡಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದರು.