ಬೆಂಗಳೂರು: ಕಾಂಗ್ರೆಸ್ ಭಾರತವನ್ನು ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ಗಟ್ಟಿಗೊಳಿಸಿದ್ದಕ್ಕೆ ಇಂದು ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ. ಆದರೆ, ಬಿಜೆಪಿ ಕೋಮುವಾದದ ಹೆಸರಲ್ಲಿ ದೇಶ ಒಡೆಯುವ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆರೋಪಿಸಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಆಯೋಜಿಸಿದ್ದ 133ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಗತ್ತಿನಲ್ಲಿ ಭಾರತಕ್ಕೆ ವಿಶೇಷ ಸ್ಥಾನಮಾನ ಸಿಕ್ಕಿದ್ದರೆ ಅದಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ. ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಒಗ್ಗೂಡಿಸುವ ಸಿದ್ಧಾಂತ ಹೊಂದಿದೆ ಎಂದ ಅವರು, “ಸಂವಿಧಾನವನ್ನೇ ಬದಲಾಯಿಸುತ್ತೇವೆ’ ಎಂಬ ಮಾತುಗಳನ್ನು ಬಿಜೆಪಿ ನಾಯಕರು ಆಡುತ್ತಿದ್ದಾರೆ.
ನಮ್ಮದು ಶ್ರೇಷ್ಠ ಸಂವಿಧಾನ. ಯಾವುದೇ ಕಾರಣಕ್ಕೂ ಬದಲಾವಣೆಗೆ ಬಿಡುವುದಿಲ್ಲ ಎಂದು ತಿಳಿಸಿದರು. ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚಿತವಾಗಿರುವ ಸಂವಿಧಾನ ನಮ್ಮ ರಾಷ್ಟ್ರದ ಧರ್ಮ ಗ್ರಂಥ.
ಸ್ವಾತಂತ್ರ್ಯ ಪೂರ್ವದಿಂದಲೂ ಕಾಂಗ್ರೆಸ್ ಪಕ್ಷ ರಾಷ್ಟ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಾ ಬಂದಿದೆ. ಬಿಜೆಪಿಯವರು “ಕಾಂಗ್ರೆಸ್ ಮುಕ್ತ ಭಾರತ’ ನಿರ್ಮಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, “ಹಸಿವು ಮುಕ್ತ ಭಾರತ’ ನಿರ್ಮಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.
ಮೌನದ ಹಿಂದಿನ ಅರ್ಥವೇನು?: ಗ್ರಾಮೀಣಾಭಿವೃದ್ಧಿ ಸಂಪನ್ಮೂಲ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ದೇಶದ ಸಂವಿಧಾನ ಬದಲಾಯಿಸುವುದನ್ನು ಕಾಂಗ್ರೆಸ್ ಸಹಿಸುವುದಿಲ್ಲ. ಸಂವಿಧಾನ ತಿದ್ದುಪಡಿ ಮಾಡುವ ಕಾರಣವನ್ನು ಪ್ರಧಾನಿ ಸಂಸತ್‌ನಲ್ಲಿ ಸ್ಪಷ್ಟಪಡಿಸಬೇಕು. ಅನಂತ್‌ಕುಮಾರ್ ಹೆಗಡೆ ಅವರು ಸಂವಿಧಾನ ಬದಲಾಯಿಸಬೇಕು ಎಂದು ಹೇಳುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದರ ಹಿಂದಿನ ಅರ್ಥವೇನು ಎಂದು ಪ್ರಶ್ನಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಮಾತನಾಡಿ, ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಬಿಜೆಪಿಯವರು ವ್ಯವಸ್ಥಿತ ತಂತ್ರ ಮಾಡುತ್ತಿ¨ªಾರೆ. ನಾವು ಎಚ್ಚೆತ್ತುಕೊಳ್ಳದಿದ್ದರೆ ಸೋಲಬೇಕಾದೀತು ಎಂದು ಎಚ್ಚರಿಕೆ ನೀಡಿದರಲ್ಲದೆ, ಚುನಾವಣೆ ರಣತಂತ್ರ ರೂಪಿಸುವ ವಿಚಾರದಲ್ಲಿಯೂ ಮಾರ್ಪಾಡು ಮಾಡಿಕೊಳ್ಳಬೇಕು.
ಇಲ್ಲದಿದ್ದರೆ ಬಿಜೆಪಿ ಎದುರಿಸುವುದು ಕಷ್ಟ. ಗುಜರಾತ್ ಚುನಾವಣೆಯಲ್ಲಿ ನಾವು ಎಚ್ಚೆತ್ತುಕೊಂಡು ಕೆಲಸ ಮಾಡಿದ್ದಕ್ಕೆ ನಿಜವಾದ ಗೆಲುವು ಕಾಂಗ್ರೆಸ್‌ದಾಯಿತು ಎಂದರು. ಮುಖಂಡರಾದ ವಿ.ಆರ್.ಸುದರ್ಶನ್, ವೀರಣ್ಣ ಮತ್ತೀಕಟ್ಟಿ, ಪ್ರೊ.ಬಿ.ಕೆ.ಚಂದ್ರಶೇಖರ್, ಸಲೀಂ ಅಹಮದ್, ರಾಣಿ ಸತೀಶ್, ಆರ್.ಕೃಷ್ಣಪ್ಪ, ರಾಜ್‌ಕುಮಾರ್ ಉಪಸ್ಥಿತರಿದ್ದರು.