ದಾವಣಗೆರೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಸಿ ಸುಳ್ಳಿನ ಸರದಾರ, ಮಾತಿನ ಮೋಡಿಗಾರ ಎಂದು ಕಾಂಗ್ರೆಸ್ ಮುಖಂಡ, ಚಿತ್ರನಟ ಮುಖ್ಯಮಂತ್ರಿ ಚಂದ್ರು ದೂರಿದ್ದಾರೆ.
ಮೋದಿಯವರ ಯೋಜನೆಗಳು ಶ್ರೀಮಂತರಿಗೆ ಸಿಹಿ, ಬಡವರಿಗೆ ಕಹಿ ಎನ್ನುವಂತೆ ಇವೆ. ಕಾಂಗ್ರೆಸ್ ಬರೀ ಪಕ್ಷ ಅಲ್ಲ. ದೇಶದ ಆತ್ಮ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ನ್ನು ಸಮರ್ಥಿಸಿಕೊಂಡರು. ಕಾಂಗ್ರೆಸ್‌ನವರು 70 ವರ್ಷದಲ್ಲಿ ಮಾಡಲಿಕ್ಕೆ ಆಗದೇ ಇರುವುದನ್ನ ಐದು ವರ್ಷದಲ್ಲಿ ಮಾಡಿದ್ದೇವೆ ಎಂಬುದಾಗಿ ನರೇಂದ್ರ ಮೋದಿ ಹೇಳಿಕೊಳ್ಳುವುದು ಬರೀ ಹಸಿ ಸುಳ್ಳು.
ಹಿಂದಿನ ಎಲ್ಲಾ ಸರ್ಕಾಗಳು ಗಟ್ಟಿ ಭಾರತವನ್ನ ಕಟ್ಟಿರುವ ಕಾರಣದಿಂದಾಗಿಯೇ ಪ್ರಧಾನಿ ಆಗಿರುವುದನ್ನ ಮೋದಿ ಅವರು ಮರೆಯಬಾರದು ಎಂದು ಹೇಳಿದರು. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ, ಕಡ್ಡಾಯ ಶಿಕ್ಷಣ ಹಕ್ಕು, ಮಾಹಿತಿ ಹಕ್ಕು ಕಾಯ್ದೆ, ಎನ್‌ಆರ್‌ಎಚ್‌ಎಂ, ಮಧ್ಯಾಹ್ನದ ಬಿಸಿಯೂಟ, ಹಸಿರೇ ಉಸಿರು, ರೈತರ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದು ಯಾರು ಎಂಬುದಕ್ಕೆ ಮೋದಿ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು. ಆಧಾರ್, ಜಿಎಸ್‌ಟಿಗೆ ಪ್ರಬಲ ವಿರೋಧ ಮಾಡಿದ್ದಂತಹ ಮೋದಿ ಅವರು ಈಗ ಅವುಗಳನ್ನೇ ಮುಂದುವರಿಸಿದ್ದಾರೆ. ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವಂತೆ ಸ್ವಿಸ್ ಬ್ಯಾಂಕ್‌ನಿಂದ ಕಪ್ಪುಹಣ ತಂದು ಜನರ ಖಾತೆಗೆ 15 ಲಕ್ಷ ಹಾಕಲಿಲ್ಲ. ಐದು ವರ್ಷ ಅಧಿಕಾರದಲ್ಲಿದ್ದಾಗ ರಾಮಮಂದಿರ ಕಟ್ಟಬೇಡ ಎಂದವರು ಯಾರು. ರಾಮಮಂದಿರ ಕಟ್ಟಲಿಲ್ಲ. ಚುನಾವಣೆ ಬಂದಾಗ ರಾಮಮಂದಿರ ಎನ್ನುತ್ತಾರೆ.
ಚುನಾವಣೆ ಮುಗಿದ ಮೇಲೆ ಅಲ್ಲಿ ಒಂದು ಕಲ್ಲನ್ನೂ ಇಡುವುದಿಲ್ಲ. ಇಂತಹ ದ್ವಂದ್ವ ಏಕೆ ಪ್ರಶ್ನಿಸಿದರು. ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಹಾಗಾಗಿ ಪರ್ಯಾಯ ವ್ಯವಸ್ಥೆ ಬೇಕಾಗಿದೆ. ಮೋದಿ ಸರ್ಕಾರ ಬೀಳಿಸಬೇಕಾಗಿದೆ. ಪ್ರಜಾಪ್ರಭುತ್ವ ಉಳಿಸಬೇಕಾಗಿದೆ. ಹಾಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಅವರನ್ನ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ| ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ಬಹುತ್ವ ಭಾರತದಲ್ಲಿ ಏಕ ಸಂಸ್ಕೃತಿ, ಏಕ ಆಹಾರ ಪದ್ಧತಿ, ಏಕ ಭಾಷಾ ಹೇರಿಕೆ ಬಹು ದೊಡ್ಡ ಅಪಾಯಕಾರಿ.
ಸ್ವಾಯತ್ತ ಸಂಸ್ಥೆಗಳು ಸ್ವಾತಂತ್ರ್ಯವಾಗಿ ಕೆಲಸ ಮಾಡಲು ಮೋದಿ ಬಿಡದೇ ಇರುವ ಸರ್ವಾಧಿಕಾರಿ ಧೋರಣೆ ನೋಡಿದರೆ ಮುಂದೆ ಚುನಾವಣೆಗಳೇ ನಡೆಯುವುದಿಲ್ಲ ಎಂದೆನಿಸುತ್ತದೆ. ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಮೈತ್ರಿ ಅಭ್ಯರ್ಥಿ ಮಂಜಪ್ಪ ಅವರನ್ನ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
19 ಕದ್ದ ಯೋಜನೆಗಳು ಕಾಂಗ್ರೆಸ್‌ನ 23 ಯೋಜನೆಗಳಲ್ಲಿ 19 ಯೋಜನೆಯನ್ನ ಕದ್ದಿರುವ ಬಿಜೆಪಿಯವರು, ಅದಕೊಂದಿಷ್ಟು ಸುಣ್ಣ ಬಣ್ಣ ಬಳೆದು ಬೇರೆ ಹೆಸರಿಟ್ಟಿದ್ದಾರೆ. ಹೆಚ್ಚಿನ ಅನುದಾನ ನೀಡಿರಬಹುದು. ಆ ಎಲ್ಲವೂ ಕಾಂಗ್ರೆಸ್ ಯೋಜನೆಗಳು. ನಿರ್ಮಲ ಭಾರತ್ ಕಾಂಗ್ರೆಸ್ ಜಾರಿ ಮಾಡಿದ್ದು ಅದೀಗ ಸ್ವತ್ಛ ಭಾರತ್ ಆಗಿದೆ. ರಾಷ್ಟ್ರೀಯ ಮಹಿಳಾ ದಿನಾಚರಣೆ ಈಗ ಬೇಟಿ ಪಡಾವೋ ಬೇಟಿ ಬಚಾವೋ…, ಜನೌಷಧಿ… ಈಗ ಪ್ರಧಾನ ಮಂತ್ರಿ ಜನೌಷಧಿ, ರಾಷ್ಟ್ರೀಯ ಕೃಷಿ ಅಭಿವೃದ್ಧಿ ಯೋಜನೆ ಪರಾಂಪರಗತ್ ಕೃಷಿ ಅಭಿವೃದ್ಧಿ ಯೋಜನೆ, ಮೂಲ ಠೇವಣಿ ಉಳಿತಾಯ ಈಗ ಜನ್‌ಧನ್ ಆಗಿದೆ. ಐದು ವರ್ಷದಲ್ಲಿ ಮೋದಿ ಸಂಸತ್‌ಗೆ ಹಾಜರಾಗಿರುವುದು ಕೇವಲ 19 ದಿನ ಮಾತ್ರ ಎಂದು ಕಾಂಗ್ರೆಸ್ ಮುಖಂಡ, ಚಿತ್ರನಟ ಮುಖ್ಯಮಂತ್ರಿ ಚಂದ್ರು ದೂರಿದರು.