ಲಿಂಗಸುಗೂರು: ಪ್ರಧಾನಿ ನರೇಂದ್ರ ಮೋದಿ ಅವರು ನಾನು ಈ ದೇಶದ ಚೌಕಿದಾರ ಎಂದು ಹೇಳಿಕೊಳ್ಳುತ್ತಿದ್ದಾರೆ. ಅವರು ಚೌಕಿದಾರರಲ್ಲ ನಂ 1 ಚೋರರು ಎಂದು ಗುಜರಾತ್ ಶಾಸಕ ಜಿಗ್ನೇಶ ಮೇವಾನಿ ಆರೋಪಿಸಿದರು. ಪಟ್ಟಣದಲ್ಲಿ ನಡೆದ ಜನಾಂದೋಲನ ಮಹಾಮೈತ್ರಿಯ ಸಿಪಿಐಎಂಎಲ್ ಅಭ್ಯರ್ಥಿ ಆರ್. ಮಾನಸಯ್ಯ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ವಿಜಯ ಮಲ್ಯಾ, ನೀರವ್ ಮೋದಿ ಇನ್ನಿತರ ಉದ್ಯಮಿದಾರರು ದೇಶದಲ್ಲಿನ ವಿವಿಧ ಬ್ಯಾಂಕ್‌ಗಳಿಗೆ 80 ಸಾವಿರ ಕೋಟಿ ರೂ. ವಂಚಿಸಿ ದೇಶ ಬಿಟ್ಟು ಓಡಿಹೋಗುವಾಗ ಈ ಚೌಕಿದಾರರ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿ ಅವರಿಗೆ ನಿಜವಾಗಲೂ 56 ಇಂಚಿನ ಎದೆ ಇದ್ದರೆ ದೇಶ ಬಿಟ್ಟು ಪರಾರಿಯಾಗಿರುವ ವಂಚಕರನ್ನು ಹಿಡಿದು ತರಲಿ ಎಂದು ಸವಾಲು ಹಾಕಿದರು. ನರೇಂದ್ರ ಮೋದಿ ಅವರೊಬ್ಬ ಮಹಾನ್ ಸುಳ್ಳುಗಾರ. ಬರೀ ಬೊಗಳೆ ಬೀಡುತ್ತಾರೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಆದರೆ ಅಧಿಕಾರಕ್ಕೆ ಬಂದು ನಾಲ್ಕು ವರ್ಷವಾದರೂ ಶೇ.1ರಷ್ಟು ಉದ್ಯೋಗ ಸೃಷ್ಟಿಸಿಲಿಲ್ಲ. ಅದರ ಬದಲಿಗೆ ಎರಡು ಕೋಟಿ ಯುವಕರಿಗೆ ಹಸುವಿನ ಗೊಬ್ಬರ ನೀಡಿದ್ದಾರೆ. ಎಲ್ಲಿದೆ ಅಚ್ಛೇ ದಿನ್ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಮೋದಿ ಅವರ ಚಿಂತನೆಗಳು ನಡೆಯೋಲ್ಲ. ಇಲ್ಲಿ ಬಸವಣ್ಣ, ನಾರಾಯಣಗುರು, ಅಂಬೇಡ್ಕರ್ ಚಿಂತನೆಗಳೇ ನಡೆಯುವುದು. ಚುನಾವಣಾ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಮೋದಿ ಅವರಿಗೆ ಮಾತ್ರ ದಲಿತರು ನೆನಪಾಗಿದ್ದಾರೆ.
ಆದರೆ ದೇಶವ್ಯಾಪಿ ದಲಿತರ ಮೇಲೆ ಹಲ್ಲೆ ನಡೆಯುತ್ತಿದ್ದರೂ ಅವಾಗ ಯಾಕೆ ದಲಿತರ ನೆನಪಾಗಿಲಲ್ಲ. ಅಟ್ರಾಸಿಟಿ ಕಾಯಿದೆಯನ್ನು ಟೊಳ್ಳು ಮಾಡುತ್ತಿರುವುದು ದಲಿತರ ಪ್ರೇಮವೆ? ದೆಹಲಿ ಕೆಂಪು ಕೋಟೆ ಮೇಲೆ ನಿಂತು ದೇಶ ಮಾರೋಲ್ಲ ಎಂದು ಅಬ್ಬರಿಸುತ್ತಿದ್ದರು. ಈಗ ಅದೇ ಕೋಟೆಯನ್ನು ಮಾರಾಟ ಮಾಡಿದ್ದಾರೆ. ಸಬ್‌ಕಾ ಸಾಥ್ ಸಬ್‌ವಿಕಾಸ್ ಎಂದು ಹೇಳುತ್ತಾರೆ. ಆದರೆ, ಯಾರ ವಿಕಾಸ ಆಗಿದೆ ಎಂಬುದು ಗೋಚರಿಸುತ್ತಿಲ್ಲ. ಕರ್ನಾಟಕದ ಈ ಚುನಾವಣೆಯಿಂದ ಬಿಜೆಪಿ ಪತನ ಆರಂಭವಾಗಲಿದೆ. ರಾಜ್ಯದ ಜನರು ಕೋಮುವಾದಿ, ಸಂವಿಧಾನ ವಿರೋಧಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ಈ ಹಿನ್ನೆಲೆಯಲ್ಲಿ ಸಿಪಿಐಎಂಎಲ್ ಅಭ್ಯರ್ಥಿ ಆರ್.ಮಾನಸಯ್ಯ
ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಮಹಾಮೈತ್ರಿ ಮುಖಂಡ ನೂರ್ ಶ್ರೀಧರ ಮಾತನಾಡಿ, ಸಾರ್ವತಿಕ ಚುನಾವಣೆ ಮಾದರಿ ಬದಲಾವಣೆಯಾಗಬೇಕಾಗಿದೆ. ಈ ಚುನಾವಣೆ ವ್ಯವಸ್ಥೆಯನ್ನು ಅಂಬೇಡ್ಕರ್ ಅವರು ಬಲವಾಗಿ ವಿರೋ ಧಿಸಿದ್ದರು. ಈ ವ್ಯವಸ್ಥೆಯಲ್ಲಿ ದಲಿತರು, ಧಮನಿತರು ಅಧಿ
ಕಾರಕ್ಕೆ ಬರೋಲ್ಲ ಎಂದು ಬಾಬಾಸಾಹೇಬರು ಕಳವಳ ವ್ಯಕ್ತಪಡಿಸಿದ್ದರು. ಬಲ್ಯಾಡರು ಮಾತ್ರ ಚುನಾವಣೆಗೆ ಸ್ಪರ್ಧಿಸುವಂತಾಗಿದೆ. ಶೋಷಿತ, ದಲಿತರ, ಮಹಿಳೆಯರಿಗೆ ಪ್ರತ್ಯೇಕ ಮತದಾನದ ಹಕ್ಕು ಬೇಕಾಗಿದೆ.
ಇದಕ್ಕೆ ಬಹುದೊಡ್ಡಮಟ್ಟದಲ್ಲಿ ಹೋರಾಟ ಮಾಡಬೇಕಾಗಿದೆ. ಸಂವಿಧಾನ ವಿರೋಧಿಗಳು, ಮತಾಂಧ ಶಕ್ತಿಗಳು ಅಧಿಕಾರಕ್ಕೆ ಬರಬಾರದು. 30 ವರ್ಷಗಳಿಂದ ಜನಪರ ಹೋರಾಟ ಮಾಡುತ್ತಿರುವ ಆರ್.ಮಾನಸಯ್ಯರ ಅವರನ್ನು ಈ ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಅಭ್ಯರ್ಥಿ ಆರ್. ಮಾನಸಯ್ಯ, ಪ್ರಮುಖರಾದ ವಡ್ಡಗೆರಾ ನಾಗರಾಜಯ್ಯ, ಎನ್. ವೆಂಕಟೇಶ, ವಿ. ನಾಗರಾಜ, ಎಂ.ಆರ್. ಬೇರಿ, ಮಲ್ಲಿಗೆ ಸಿರಿಮನೆ, ಬಿ. ರುದ್ರಯ್ಯ, ಅಮರಣ್ಣ ಗುಡಿಹಾಳ, ಶರಣಪ್ಪ ಉದಾಳ, ಅಮೀನ್‌ಪಾಶ, ನಾಗಲಿಂಗಯ್ಯ ಇದ್ದರು.