Advertisement
ಮೋದಿ ಸುನಾಮಿ! ನಿಜವಾಗಲೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ಪಾಲಿಗೆ ಸುನಾಮಿಯಾಗಿಯೇ ಪರಿವರ್ತಿತವಾಗಿದ್ದಾರೆ. 2014 ರಲ್ಲಿ ಮೋದಿ ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯೆಂದು ಘೋಷಿತವಾದಾಗ ಆ ಕ್ಷಣಕ್ಕೆ ಸಣ್ಣದೊಂದು ಅಚ್ಚರಿ ಎನಿಸಿತ್ತು. ಆದರೆ ಗುಜರಾತಿನ ಮುಖ್ಯಮಂತ್ರಿಯಾಗಿ ನಿರ್ವಹಿಸಿದ ಹೊಣೆಗಾರಿಕೆ ಹೊಸ ಭರವಸೆಗಳನ್ನು ಹುಟ್ಟಿ ಹಾಕಿದ್ದು ನಿಜ. ಬಳಿಕ ಮೋದಿಯ ಹಿಂದಿನ ಸ್ಟ್ರಾಟೆಜಿಸ್ಟ್‌ಗಳು ಹಾಗೂ ಬಿಜೆಪಿ ಮೋದಿಯನ್ನು ಒಂದು ಅಲೆಯಾಗಿ ಪರಿವರ್ತಿಸಲು ಶ್ರಮಿಸಿದವು. 2014 ರ ಫಲಿತಾಂಶ ಬಂದಾಗ ಮೋದಿ ಅಲೆ ಕಾಂಗ್ರೆಸನ್ನು ತತ್ತರಗೊಳಿಸಿತ್ತು. ಮೋದಿ ಒಬ್ಬ ಸಮರ್ಥ ರಾಷ್ಟ್ರೀಯ ನಾಯಕರಾಗಿ ಹೊರಹೊಮ್ಮಿದ್ದರು. ಆದರೆ ಈ ಬಾರಿ 2019 ರ ಚುನಾವಣೆಯಲ್ಲಿ ಮೋದಿ ಅಲೆಯಲ್ಲ ; ಸುನಾಮಿಯಾಗಿಯೇ ಮಾರ್ಪಟ್ಟಿದ್ದಾರೆ.
Related Articles
Advertisement
ಮೋದಿಯವರ ವಿಷಯದಲ್ಲಿ ಹಾಗಲ್ಲ. ಒಬ್ಬ ಪ್ರಾದೇಶಿಕ ನಾಯಕ, ರಾಜ್ಯದ ಮುಖ್ಯಮಂತ್ರಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಮರುವ್ಯಾಖ್ಯಾನಗೊಳಿಸುವುದು ಹಾಗೂ ರಾಷ್ಟ್ರೀಯ ರಾಜಕೀಯ ನಭದಲ್ಲಿ ಉಡಾಯಿಸುವುದು ಹೆಚ್ಚು ರಿಸ್ಕ್ ಇರುವಂಥ ಕೆಲಸ. ಅದನ್ನು 2014 ರಲ್ಲಿ ಮೋದಿಯ ನಂಬಿಕಸ್ಥರು (ಸ್ಟ್ರಾಟಜಿಸ್ಟ್) ಸಮರ್ಥವಾಗಿ ನಿಭಾಯಿಸಿದರು. ಅದರ ಪರಿಣಾಮವೇ ಇಂದಿನ ಮೋದಿ ಸುನಾಮಿ. ಫಿರ್ ಏಕ್ ಬಾರ್ ಮೋದಿ ಸರಕಾರ್ ! 2014 ರಲ್ಲಿ ಮೋದಿಯ ನಂಬಿಕಸ್ಥರಿಗೆ ಇದ್ದ ಸವಾಲು ಪ್ರಮುಖವಾಗಿ ಮೂರು. ಮೊದಲನೆಯದು, ಒಬ್ಬ ರಾಜ್ಯದ ಮುಖ್ಯಮಂತ್ರಿ, ಪ್ರಧಾನಿ ಹುದ್ದೆಗೆ ಒಬ್ಬ ಅತ್ಯಂತ ಸಮರ್ಥ ಅಭ್ಯರ್ಥಿ ಎಂದು ಬಿಂಬಿಸುವುದು,
ಎರಡನೆಯದೆಂದರೆ, 63 ರ ಪ್ರಾಯದ ಹಿರಿಯನನ್ನು 1.5 ಕೋಟಿ ಯಷ್ಟು ಯುವ ಮತದಾರರನ್ನು ಒಳಗೊಂಡ ಯುವ ಭಾರತದ ಪ್ರಿಯ ವ್ಯಕ್ತಿಯನ್ನಾಗಿಸುವುದು, ಕೊನೆಯದಾಗಿ ಮೋದಿಯವರ ಮೇಲಿದ್ದ 2002 ರ ಗೋಧಾ ದುರಂತದ ಕಪ್ಪುಚುಕ್ಕೆಯನ್ನು ಅಳಿಸುವುದು. ಮೂರೂ ಸವಾಲುಗಳನ್ನು ಎದುರಿಸಲು ಚಿಮ್ಮು ಹಲಗೆಯಾಗಿ ಮೋದಿಯ ನಂಬಿಕಸ್ಥರು ಬಳಸಿಕೊಂಡದ್ದು ಅಭಿವೃದ್ದಿ ಕುರಿತಾದ ಗುಜರಾತಿ ಮಾದರಿ ಹಾಗೂ 2008 ರಲ್ಲಿ ಕೈಗೊಂಡ ಮೋದಿಯ ಒಂದು ತೀರ್ಮಾನ.
2002, 2007 ಹಾಗೂ 2012 ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಮೋದಿ ಮಾಡಿದ್ದು ಒಂದೇ. ತಮ್ಮ ಮೇಲಿನ ಮುಸ್ಲಿಂ ವಿರೋಧಿ ಎಂಬ ಹಣೆಪಟ್ಟಿಯನ್ನು ಅಳಿಸಿ ತಾನು ಅಭಿವೃದ್ಧಿ ಪರ ಎಂದೆನಿಸಿಕೊಂಡರು. ಸುಮಾರು 5 ಸಾವಿರಕ್ಕೂ ಹೆಚ್ಚು ಸಂದರ್ಭಗಳನ್ನು ತಮ್ಮ ಸಾಮರ್ಥಯ ಪ್ರದರ್ಶನಕ್ಕೆ ಬಳಸಿದವರು ಮೋದಿ. 470 ಕ್ಕೂ ಹೆಚ್ಚು ರಾಜಕೀಯ ಸಭೆಗಳನ್ನು ಸಂಘಟಿಸಿದರು.
ಎಲ್ಲ ಕಡೆಯೂ ಅಭಿವೃದ್ಧಿಯ ಅಗತ್ಯ, ಹಣದುಬ್ಬರದಂಥ ಸಂಗತಿ (ಯುಪಿಎ ವೈಫಲ್ಯಗಳು) ಪ್ರಸ್ತಾಪಿಸಿದರು. ಇದು ಜನರಲ್ಲಿ ಅಭಿವೃದ್ಧಿಯ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿತು. ಅದೇ ಹೊತ್ತಿನಲ್ಲಿ ಮೋದಿಯವರ ಅಭಿಮಾನಿಗಳು, ವಿವಿಧ ರೂಪದ ಜಾಹೀರಾತುಗಳು, ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿವೃದ್ಧಿಯ ಪರ ತರಂಗವನ್ನು ಅಲೆಯಾಗಿ ಮಾರ್ಪಡಿಸಿದರು. ನೋಡನೋಡುತ್ತಲೇ ಮೋದಿ ರಾಷ್ಟ್ರೀಯ ಮಟ್ಟದಲ್ಲಿ ಪುನರ್ ವ್ಯಾಖ್ಯಾನಗೊಂಡಿದ್ದರು. ಹೀಗೆ, ಒಬ್ಬ ವ್ಯಕ್ತಿ, ಶಕ್ತಿಯಾಗಿ, ಅಲೆಯಾಗಿ ಮಾರ್ಪಟಿದ್ದೇ ವಿಶೇಷ.
ಹೀರೋ ಎಂದು ತೋರಿಸಿಕೊಂಡದ್ದು….: ಯಾವುದೇ ಒಂದು ಪ್ರಾದೇಶಿಕ ಬ್ರ್ಯಾಂಡ್ ರಾಷ್ಟ್ರೀಯ ಮಟ್ಟದಲ್ಲಿ ಪ್ರಜ್ವಲಿಸಬೇಕೆಂದರೆ, ಮತ್ತೂಂದು ರಾಷ್ಟ್ರೀಯ ಬ್ರ್ಯಾಂಡ್ ನ ವರ್ಚಸ್ಸು ಇಳಿಮುಖವಾಗಿರಬೇಕು. ಅದರ ವೈಫಲ್ಯದ ಕಾರಣವನ್ನು ಬಳಸಿ ಆ ಹೊತ್ತಿನ ಸಾಮಾನ್ಯ ಆಗತ್ಯವನ್ನು ಸಮರ್ಥವಾಗಿ ಪೂರೈಸುವ ವಿಶ್ವಾಸವನ್ನು ಒಂದು ಪ್ರಾದೇಶಿಕ ಬ್ರ್ಯಾಂಡ್ ಸೃಷ್ಟಿಸಿದರೆ ರಾಷ್ಟ್ರೀಯ ವಲಯದಲ್ಲಿ ಯಶಸ್ವಿಯಾಗುವುದು ಕಷ್ಟವಲ್ಲ. ಅದನ್ನೇ ಮೋದಿಯೂ ಮಾಡಿದ್ದು. 2014 ರ ಸಂದರ್ಭದಲ್ಲಿ ಕಾಂಗ್ರೆಸ್‌ನ ವೈಫಲ್ಯವನ್ನು ಬಳಸಿಕೊಂಡು, ಪ್ರತಿ ಹಂತದಲ್ಲೂ ಅಭಿವೃದ್ಧಿಗೆ ಕಲ್ಪಿಸಬೇಕಾದ ವೇಗಗತಿಯನ್ನು ಪ್ರಸ್ತಾವಿಸುತ್ತಾ ಸಾಗಿದರು.
ಅದು ಆ ಹೊತ್ತಿನ ಅಗತ್ಯ. ಅದಕ್ಕೆ ಪೂರಕವಾಗಿ ಗುಜರಾತ್‌ನಲ್ಲಿನ ಅಭಿವೃದ್ಧಿ ಉಪಕ್ರಮಗಳನ್ನೇ ವಿವರಿಸುತ್ತಾ, ಅಭಿವೃದ್ಧಿಯ ಗತಿಗೆ ವೇಗ ಒದಗಿಸಬೇಕಾದ ಅಗತ್ಯವಿದೆ ಎಂಬುದನ್ನು ಅನಾವರಣಗೊಳಿಸಿದರು. ಹಾಗೆಯೇ ನೀವು ಹುಡುಕುವ ಅಂಥ ನಾಯಕ ನನ್ನಲ್ಲಿದ್ದಾನೆ ಎಂಬುದನ್ನೂ ಅನಾವರಣಗೊಳಿಸಿದರು. ಅದಕ್ಕೆ ಪ್ರಬಲ ಸಮರ್ಥನೆಯಂದರೆ, ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವ ಕೆಲವು ತಿಂಗಳಷ್ಟೇ ಮೊದಲು ದಿಲ್ಲಿಯ ಶ್ರೀ ರಾಮ್ ಕಾಲೇಜಿನಲ್ಲಿ ಅಭಿವೃದ್ಧಿ ಕುರಿತು ನೀಡಿದ ಮೋದಿಯ ಉಪನ್ಯಾಸ ಇಡೀ ಯುವ ಸಮುದಾಯಕ್ಕೆ ಆಪ್ಯಾಯಮಾನವಾಯಿತು.
ಆರೋಪದ ಮಾತಿಗೆ ಅಭಿವೃದ್ಧಿ ಉತ್ತರ: ನಿಜ, ಗೋಧಾ ದುರಂತದಲ್ಲಿ ಮೋದಿಯ ಮೇಲೆ ಬಂದ ಆರೋಪ ಸ್ವಲ್ಪ ಮಟ್ಟಿನ ಹಿನ್ನಡೆಯನ್ನು ಆ ಸಂದರ್ಭದಲ್ಲಿ ಒದಗಿಸಿತ್ತು. ಆದರೆ, ಅದನ್ನು ಮೀರಲು ಬಳಸಿದ ತಂತ್ರವೆಂದರೆ, ಆ ಕುರಿತು ಕಡಿಮೆ ಮಾತನಾಡುವುದು. ಅದರ ಬದಲಾಗಿ ಧನಾತ್ಮಕ ನೆಲೆಯನ್ನು ಹೆಚ್ಚಾಗಿ ಬಿಂಬಿಸುವುದು. ಜತೆಗೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮುನ್ನಡೆಯುವುದು. ಮೋದಿ ಇಲ್ಲಿ ಮಾಡಿದ್ದೂ ಅದನ್ನೇ. ತಮ್ಮ ಮೇಲಿನ ಆರೋಪಕ್ಕೆ ಉತ್ತರ ಕೊಡುತ್ತಾ ಮತ್ತೆ ಮತ್ತೆ ಚರ್ಚೆಗೊಳಗಾಗಲಿಲ್ಲ. ಅದರ ಬದಲು ಅಭಿವೃದ್ಧಿ ನೆಲೆಯನ್ನು ಆಯ್ದುಕೊಂಡರು. ಹಾಗಾಗಿ ಮೋದಿ ಸರ್ವಸಮ್ಮತವಾದರು. ಮಾರುಕಟ್ಟೆಯಲ್ಲಿನ ದೊಡ್ಡ ದೊಡ್ಡ ಬ್ರ್ಯಾಂಡ್‌ಗಳೂ ತಮ್ಮ ಮೇಲಿನ ಆರೋಪವನ್ನು ಅಳಿಸಿಕೊಳ್ಳಲು ಬಳಸುವುದು ಇದೇ ತಂತ್ರವನ್ನೇ.
ಸೂಪರ್‌ಮ್ಯಾನ್ ಅನ್ನಲಿಲ್ಲ, ಪ್ರಾಮಾಣಿಕ ಅಂದರು…: ಮಾದರಿಗಳ ನಿರ್ಮಾಣ ಮೋದಿ ಬ್ರ್ಯಾಂಡ್ ಸೂಪರ್ ಮ್ಯಾನ್ ರೀತಿಯಲ್ಲಿ ಬಿಂಬಿತವಾಗಲಿಲ್ಲ. ಅದೂ ಎಚ್ಚರದ ನಡೆಯೇ. ಮೋದಿಯನ್ನು ಸ್ವಯಂಭೂ, ಸಬಲ, ಪ್ರೇರಣದಾಯಕ ವ್ಯಕ್ತಿತ್ವವನ್ನಾಗಿ (ಸಾಮಾನ್ಯವಾಗಿ ಮಹಾತ್ಮರ ಸಾಧ್ಯತೆಗಳಿವು) ಅನಾವರಣ ಗೊಳಿಸದೇ, ಒಬ್ಬ ಪ್ರಾಮಾಣಿಕ, ವಿಶ್ವಾಸಾರ್ಹ ಹಾಗೂ ಬದ್ಧ ನಾಯಕನೆಂಬಂತೆ ಬಿಂಬಿಸಲಾಯಿತು. ಅದೇ ಜನಸಾಮಾನ್ಯರಿಗೆ ಅಪ್ಯಾಯಮಾನವಾಗಿದ್ದು.
ರಾಜ್‌ಕೋಟ್ 2002: ಗುಜರಾತ್‌ನಲ್ಲಿ ಕೇಶು ಭಾಯ್ ಪಟೇಲ್ ಅವರ ಬಳಿಕ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ, 2002ರ ಫೆ.24ರಂದು ರಾಜಕೋಟ್-2ನಲ್ಲಿಉಪಚುನಾವಣೆ ನಡೆದಿದ್ದಾಗ, ವಿಧಾನಸಭೆ ಪ್ರವೇಶಕ್ಕಾಗಿ ಚುನಾವಣೆಗೆ ನಿಂತಿದ್ದರು. ಈ ಸಂದರ್ಭ ಕಾಂಗ್ರೆಸ್‌ನ ಅಶ್ವಿನ್ ಮೆಹ್ತಾ ಅವರನ್ನು ಮೋದಿ ಅವರು 14,728 ಮತಗಳ ಅಂತರದಿಂದ ಸೋಲಿಸಿದ್ದರು. ಈ ಕಿರು ಅವಧಿಯ ಬಳಿಕ 2002ರ ಕೊನೆಯಲ್ಲಿ ಗುಜರಾತ್ ವಿಧಾನಸಭೆಗೆ ಮತ್ತೆ ಚುನಾವಣೆ ನಡೆದಿತ್ತು.
ಮಣಿನಗರ 2002: ಗೋಧಾ ಗಲಭೆ ಬಳಿಕ ಡಿಸೆಂಬರ್ ನಲ್ಲಿ ಬಿಜೆಪಿ ನರೇಂದ್ರ ಮೋದಿ ನೇತೃತ್ವದಲ್ಲಿ ವಿಧಾನಸಭೆ ಚುನಾವಣೆ ಎದುರಿಸಿತು. ಎರಡನೇ ಬಾರಿಗೆ ಮೋದಿ ಮಣಿನಗರ ಕ್ಷೇತ್ರದಿಂದ ಚುನಾವಣೆಗೆ ನಿಂತಿದ್ದರು. ಕಾಂಗ್ರೆಸ್‌ನ ಪ್ರತಿಸ್ಪರ್ಧಿ ಓಝಾ ಯತಿನ್‌ಭಾಯ್ ನರೇಂದ್ರಕುಮಾರ್ ಅವರನ್ನು 75,333 ಮತಗಳಷ್ಟು ಭಾರೀ ಅಂತರದಿಂದ ಸೋಲಿಸಿದ್ದರು. ಮೋದಿ 1,13,589 ಮತಗಳನ್ನು ಪಡೆದಿದ್ದರೆ, ನರೇಂದ್ರ ಕುಮಾರ್ ಅವರು 38256 ಮತಗಳನ್ನು ಪಡೆದಿದ್ದರು. ಈ ಚುನಾವಣೆ ಬಳಿಕ ಮೋದಿ ಸಿಎಂ ಆಗಿ ಐದು ವರ್ಷ ಆಡಳಿತ ನಡೆಸಿದರು.
ಮಣಿನಗರ 2007: ಈ ವಿಧಾನಸಭೆ ಚುನಾವಣೆಯಲ್ಲೂ ನರೇಂದ್ರ ಮೋದಿ ಅಭೂತಪೂರ್ವ ಜಯ ದಾಖಲಿಸಿ ದ್ದರು. ಎರಡನೇ ಪೂರ್ಣ ಬಿಜೆಪಿ ಆಡಳಿತಕ್ಕೂ ಮೊದಲೇ ನಡೆದ ಈ ಚುನಾವಣೆಯಲ್ಲಿ ಮತ್ತೆ ಮೋದಿ ಮಣಿನಗರದಿಂದಲೇ ಸ್ಪರ್ಧಿಸಿದ್ದರು. ಈ ಸಂದರ್ಭ ಅವರ ಎದುರಾಳಿಯಾಗಿ ಕಾಂಗ್ರೆಸ್‌ನ ದಿನಾ ಪಟೇಲ್ ನಿಂತಿದ್ದರು. ಚುನಾವಣೆಯಲ್ಲಿ ಮೋದಿ 1,39,568 ಮತಗಳನ್ನು ಪಡೆದಿದ್ದು, ಪಟೇಲ್ ಅವರು 52,407 ಮತಗಳನ್ನು ಪಡೆದರೆ, ಒಟ್ಟು 87161 ಮತಗಳ ಅಂತರದ ಜಯ ಮೋದಿಯವರದ್ದಾಗಿತ್ತು.
ಮಣಿನಗರ 2012: 2012 ರ ಚುನಾವಣೆಯಲ್ಲಿ ಬಿಜೆಪಿಯನ್ನು ಶತಾಯಗತಾಯ ಸೋಲಿಸಲೇ ಬೇಕೆಂಬ ಉದ್ದೇಶ ದಿಂದ ಕಾಂಗ್ರೆಸ್ ಚುನಾವಣೆ ಎದುರಿಸಿತ್ತು. ಆದರೆ ಅದು ಫಲಕಾರಿಯಾಗಲಿಲ್ಲ. ಕಾರಣ ಮೋದಿ. ಈ ಬಾರಿಯೂ ಮೋದಿ ಮಣಿನಗರದಿಂದಲೇ ಸ್ಪರ್ಧಿಸಿ, 1,20,470 ಮತಗಳನ್ನು ಪಡೆದಿದ್ದರು. ಅವರ ಸಮೀಪದ ಪ್ರತಿಸ್ಪರ್ಧಿ ಶ್ವೇತಾ ಸಂಜೀವ್ ಭಟ್ 34,097 ಮತಗಳನ್ನು ಪಡೆದು, 86,373 ಮತಗಳ ಅಂತರದಿಂದ ಸೋತಿದ್ದರು.
ವಡೋದರ, ವಾರಾಣಸಿ 2014: ಮೊದಲ ಬಾರಿಗೆ ಲೋಕಸಭೆ ಚುನಾವಣೆಯನ್ನು ನರೇಂದ್ರ ಮೋದಿ 2014ರಲ್ಲಿ ಎದುರಿಸಿದ್ದರು. ವಡೋದರ ಮತ್ತು ವಾರಾಣಸಿಗಳಲ್ಲಿ ಮೋದಿ ಸ್ಪರ್ಧೆ ಮಾಡಿದ್ದರು. ವಡೋದರದಲ್ಲಿ 845464 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್‌ನ ಮಿಸಿ ಮಧುಸೂದನ್ ದೇವಾರಾಂ 275336 ಮತಗಳನ್ನು ಪಡೆದಿದ್ದರು.
* ನಾವು ಭೂತಕಾಲದ ಹೊರೆಯನ್ನೋ ಅಥವಾ ಭವಿಷ್ಯದ ಹುಚ್ಚುತನವನ್ನೋ ಬಯಸುವುದಿಲ್ಲ. ವರ್ತಮಾನದಲ್ಲಿ ಬದುಕಲು ಇಚ್ಛಿಸುತ್ತೇವೆ.
* ಉತ್ತಮ ಉದ್ದೇಶದೊಂದಿಗೆ ಉತ್ತಮ ಆಡಳಿತ ನೀಡುವುದು ನಮ್ಮ ಸರ್ಕಾರದ ಲಕ್ಷಣವಾಗಿದೆ. ಸಮಗ್ರವಾಗಿ ಅದನ್ನು ಅನುಷ್ಠಾನಗೊಳಿಸುವುದರಲ್ಲಿ ನಮ್ಮ ಉತ್ಸಾಹ ಅಡಗಿದೆ.
* ಸಾಮಾಜಿಕ ಮಾಧ್ಯಮಗಳು ಸಮಾಜದ ಅಡೆತಡೆಗಳನ್ನು ಕಡಿಮೆಗೊಳಿಸುತ್ತವೆ. ಇದು ಮಾನವನ ನಡುವೆ ಮೌಲ್ಯಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕೇವಲ ಗುರುತುಗಳನ್ನಲ್ಲ.
* ನಮ್ಮ ದೇಶ ಬೇರೆ ಏನೂ ಆಗಬೇಕಾಗಿಲ್ಲ, ಭಾರತವು ಭಾರತವಾಗಿದ್ದರೆ ಸಾಕು. ಇದು ಒಂದು ಕಾಲದಲ್ಲಿ ಸ್ವರ್ಣಮಯ ಪಕ್ಷಿ ಎಂದು ಕರೆಸಿಕೊಳ್ಳುತ್ತಿದ್ದ ದೇಶ.
* ನಮ್ಮ ಭಾರತದ ವೈವಿಧ್ಯತೆ, ನಮ್ಮ ನಾಗರಿಕತೆ ನಿಜವಾಗಿಯೂ ಸೌಂದರ್ಯಯುತವಾದ ವಿಷಯವಾಗಿದೆ. ಇದು ನಾವು ಬಹಳ ಹೆಮ್ಮೆ ಪಡಬೇಕಾದ ಸಂಗತಿ.