Advertisement

ಕಾರ್ಮಿಕರ ವಿರೋಧಿ ಕಾನೂನು ಜಾರಿ ತರುವ ಮೋದಿ

07:15 AM Mar 18, 2019 | |

ತುಮಕೂರು: ಪ್ರಧಾನಿ ಮೋದಿ ರೈತರ, ಕಾರ್ಮಿಕರ ಪರ ಅನ್ನುತ್ತಾರೆ. ಆದರೆ, ಕಾರ್ಮಿಕರ ವಿರೋಧಿಯಾಗಿರುವ ಕಾನೂನುಗಳನ್ನು ಜಾರಿಗೆ ತಂದು ಕಾರ್ಪೊರೆಟ್‌ ಉದ್ದಿಮೆದಾರರ ಪರವಾಗಿ ಕೆಲಸ ಮಾಡುತ್ತಾರೆ ಎಂದು ಕಮ್ಯುನಿಸ್ಟ್‌ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್‌ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ಟಿ.ಆರ್‌.ರೇವಣ್ಣ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜಕೀಯ ಸಮಾವೇಶದಲ್ಲಿ ಮಾತನಾಡಿದ ಅವರು, ರಫೇಲ್‌ ಯುದ್ಧ ವಿಮಾನ ನಿರ್ಮಾಣಕ್ಕೆ 100 ವರ್ಷ ಅನುಭವ ಇರುವ ಸಂಸ್ಥೆ ಬಿಟ್ಟು ಬೇರೆ ಸಂಸ್ಥೆಗೆ ನೀಡಿದ್ದಾರೆ. ಕಾರ್ಮಿಕ ವಿರೋಧಿ ಕಾನೂನುಗಳನ್ನು ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ತಂದು ಕೋಟ್ಯಂತರ ಕಾರ್ಮಿಕರಿಗೆ ಅನ್ಯಾಯ ಮಾಡಿದ್ದಾರೆ. ಇಂಥ ಕಾರ್ಮಿಕ ವಿರೋಧಿ, ರೈತ ವಿರೋಧಿಗೆ ಮತ್ತೆ ಅವಕಾಶ ನೀಡಿದರೆ, ದೇಶ ಹರಾಜು ಮಾಡುತ್ತಾರೆ ಎಂದು ಹೇಳಿದರು.

ಒಟ್ಟಾಗಿ ಕಾರ್ಯನಿರ್ವಹಿಸಿ: ಯುವಜನ ಫೆಡರೇಷನ್‌ ರಾಜ್ಯ ಸಂಚಾಲಕ ಎಚ್‌.ಎಂ.ಸಂತೋಷ್‌ ಮಾತನಾಡಿ, ಸಂವಿಧಾನ, ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ  ಕಮ್ಯುನಿಸ್ಟ್‌ ಪಕ್ಷ ಗೆಲ್ಲಿಸಬೇಕಾದ ಹೊಣೆಗಾರಿಕೆ ಕಾರ್ಮಿಕರ ಮೇಲಿದ್ದು, ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸಿಪಿಎಂ ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಸಮಾಜ ಒಡೆಯುವುದನ್ನು ಬಿಡಿ: ಕಳೆದ 5 ವರ್ಷಗಳಲ್ಲಿ ಮೋದಿ ಮಾಡಿರುವುದು ಏನು?. ಸುಳ್ಳು ಹೇಳಿಕೊಂಡೆ ಅಧಿಕಾರ ಮಾಡಿದ್ದಾರೆ. ಮೋದಿ ಸರಿಯಿಲ್ಲ, ಮೋದಿ ಆಡಳಿತ ಸರಿಯಿಲ್ಲ ಎಂದು ಹೇಳಿದರೆ ದೇಶದ್ರೋಹಿ ಎನ್ನುತ್ತಾರೆ. ನಾವು ಯಾರೂ ಭಾರತೀಯರಲ್ಲವೇ. ಜಾತಿ ಹೆಸರಿನಲ್ಲಿ ಸಮಾಜ ಒಡೆಯುವುದನ್ನು ಬಿಡಿ, ಕಾರ್ಮಿಕರದ್ದು ದುಡಿಯುವ ವರ್ಗ ಇಲ್ಲಿ ಯಾವ ಜಾತಿಯೂ ಇಲ್ಲ ಎಂದು ನುಡಿದರು.

ಹಕ್ಕು ಕಿತ್ತಿಕೊಳ್ಳಲು ಕಾಯ್ದೆ ಬದಲಾವಣೆ: ಕುಮಾರಸ್ವಾಮಿ ಸಾಲಮನ್ನಾ ಮಾಡಿದ್ದರೂ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಕಡಿಮೆಯಾಗಲಿಲ್ಲ.  ಮೋದಿ ಭಾಷಣದಿಂದ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಜಾಸ್ತಿ ಆಗಿ, ಪ್ರಾಣದ ಬೆಲೆ ಕಡಿಮೆಯಾಯಿತು. ಗೋವಿನ ಹೆಸರಿನಲ್ಲಿ ಅಲ್ಪಸಂಖ್ಯಾತ, ದಲಿತರ ಪ್ರಾಣವನ್ನು ಸುಲಭವಾಗಿ ತೆಗೆಯುವಂತಾಗಿದೆ. ನಮ್ಮ ಹಕ್ಕುಗಳನ್ನು ಕಿತ್ತುಕೊಳ್ಳಲು ಮೋದಿ ಕಾಯ್ದೆಗಳನ್ನು ಬದಲಾವಣೆ ಮಾಡುತ್ತಿರುವುದು ಶೋಚನೀಯ ಎಂದರು.

Advertisement

ತುಮಕೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ದೇವೇಗೌಡರು ಚುನಾವಣೆಗೆ ಸ್ಪರ್ಧಿಸಿದರೂ ಕಾರ್ಮಿಕರು ಹಾಗೂ ಎಡಪಕ್ಷಗಳ ಸಂಘಟನೆಗಳೆಲ್ಲ ಒಂದಾಗಿ, ಅಭ್ಯರ್ಥಿ ಗೆಲ್ಲಿಸಲು ಪಣತೊಡಬೇಕು ಎಂದು ಕರೆ ನೀಡಿದರು. ಬೆಂಗಳೂರು ಬಿಟ್ಟರೆ ತುಮಕೂರು ಜಿಲ್ಲೆಯಲ್ಲಿ ಹೆಚ್ಚಿನ ಕಾರ್ಮಿಕರಿದ್ದು, ಕಾರ್ಮಿಕರು ಮನಸು ಮಾಡಿದರೆ ಕಾರ್ಮಿಕ ನಾಯಕನನ್ನು ಆರಿಸಿಕೊಳ್ಳುವ ಅವಕಾಶವಿದೆ. ಎಲ್ಲ ಎಡ ಸಂಘಟನೆಗಳು ಒಂದಾಗಿ ಸಂಘಟಿತವಾಗಿ ಚುನಾವಣೆ ಎದುರಿಸಬೇಕು,

ಕಾರ್ಮಿಕ ಕಾನೂನುಗಳನ್ನು ತಿದ್ದಲು ಹೊರಟಿರುವ ಮೋದಿ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ರಾಜ್ಯ ಸಂಚಾಲಕ ವಿಜಯ್‌ಭಾಸ್ಕರ್‌ ತಿಳಿಸಿದರು. ಕಾರ್ಯಕ್ರಮದಲ್ಲಿ ಕಿಸಾನ್‌ ಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಪಾಲವನಹಳ್ಳಿ ಪ್ರಸನ್ನಕುಮಾರ್‌, ಶಿವಣ್ಣ, ಜ್ಯೋತಿ, ಟಿ.ಆರ್‌.ರೇವಣ್ಣ, ಕಂಬೇಗೌಡ, ಜಿಲ್ಲಾ ಕಾರ್ಯದರ್ಶಿ ಗಿರೀಶ್‌, ಅಶ್ವಥ್‌ ನಾರಾಯಣ್‌, ಕಾಂತರಾಜು, ಸತ್ಯನಾರಾಯಣ್‌, ನಾಗಣ್ಣ, ಗೌಡರಂಗಪ್ಪ, ಎಲ್ಲ ತಾಲೂಕು ಮುಖಂಡರು ಉಪಸ್ಥಿತರಿದ್ದರು. 

ಮೋದಿಯನ್ನೇ ತಂದೆ, ತಾಯಿ, ಅಜ್ಜ, ತಾತ ಎನ್ನುವರು ಹೆಚ್ಚಾಗಿದ್ದು, ಮೋದಿ ಅವರು ವೆಚ್ಚ ಮಾಡಿದ ಜಾಹೀರಾತಿನ ಋಣಕ್ಕಾಗಿಯೋ ಏನೋ ಮಾಧ್ಯಮಗಳು ಮೋದಿ ಪರ ಸಮೂಹಸನ್ನಿ ಸೃಷ್ಟಿಸುವ ಕೆಲಸ ಮಾಡುತ್ತಿದ್ದು, ಟೀವಿ ನೋಡುವುದನ್ನು ಬಿಟ್ಟು ಚುನಾವಣಾ ಕಾರ್ಯದಲ್ಲಿ ತೊಡಗಿಕೊಂಡು, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಕಡೆ ಗಮನ ಹರಿಸಬೇಕು. ದೇವೇಗೌಡರೇ ನಮ್ಮ ವಿರೋಧಿಯಾದರೂ ಅಂಜದೇ ಚುನಾವಣೆಯಲ್ಲಿ ತೊಡಗಬೇಕು.
-ಸಾತಿ ಸುಂದರೇಶ್‌, ಕಮ್ಯುನಿಸ್ಟ್‌ ಪಕ್ಷದ ರಾಜ್ಯ ಕಾರ್ಯದರ್ಶಿ 

Advertisement

Udayavani is now on Telegram. Click here to join our channel and stay updated with the latest news.

Next